ಕುದೂರು: ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಸ್ಥಳದ ಸರ್ವೆ ಕಾರ್ಯಕ್ಕೆ ಬಂದಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತುವರಿದಾರರು ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮಾಗಡಿ ತಾಲೂಕು ಕುದೂರು ಹೋಬಳಿ ವೀರಾಪುರ ಗ್ರಾಮದ ಚನ್ನಿಗನಪಾಳ್ಯದಲ್ಲಿ ನಡೆದಿದೆ.
ಸರ್ವೆ ಕಾರ್ಯ ಮಾಡುತ್ತಿದ್ದಾಗ ಅಧಿಕಾರಿಗಳ ಮೇಲೆ ಮುಗಿಬಿದ್ದ ಒತ್ತುವರಿದಾರರಾದ ಜಯಮ್ಮ ಎಂಬುವರ ಮಕ್ಕಳಾದ ಚಂದ್ರಶೇಖರ್ ಮತ್ತು ಮೋಹನ್‌ಕುಮಾರ್ ಅವರು ಕರ್ತವ್ಯದಲ್ಲಿದ್ದ ಅಧಿಕಾರಿಗಳೊಂದಿಗೆ ಜಗಳ ಮಾಡಿ ನಂತರ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಹೊನ್ನಪ್ಪಗೆ ಮೂಗು, ತಲೆಗೆ ಪೆಟ್ಟಾಗಿದ್ದು, ಎಡಗಾಲಿನ ಮೂಳೆ ಮುರಿದು ತೀವ್ರ ರಕ್ತಸ್ರಾವಾಗಿದೆ, ಇವರ ಸಹಾಯಕ್ಕೆ ಬಂದ ಸಹಾಯಕ ಭರತ್ ಮೇಲೂ ಹಿಗ್ಗಾಮುಗ್ಗ ಹಲ್ಲೆ ಮಾಡಿದ್ದಾರೆ. ಸರ್ವೆಯರ್ ಮಂಜುನಾಥ್ ಗಲಾಟೆಯ ತೀವ್ರತೆಯನ್ನು ಅರಿತು ಓಡಿಹೋಗಿ ಬಚಾವ್ ಆಗಿದ್ದಾರೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದವರನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಹೊನ್ನಪ್ಪನವರು ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆ ಮಾಡಿದ ಚಂದ್ರಶೇಖರ್ ಮತ್ತು ಮೋಹನ್‌ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ತಾಯಿ ಜಯಮ್ಮಳ ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಾಗಡಿ ತಹಸೀಲ್ದಾರ್ ರಂಜಿತ್ ಕುದೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.ಗಾಯಗೊಂಡವರನ್ನು ಜಿಲ್ಲಾಧಿಕಾರಿಗಳು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅಧಿಕಾರಿಗಳಿಗೆ ಧೈರ್ಯ ತುಂಬಿದ್ದು, ಹಲ್ಲೆ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಇದೊಂದು ಆಘಾತಕಾರಿ ಘಟನೆ, ನಮ್ಮ ಇಲಾಖೆಯ ಅಧಿಕಾರಿಗಳಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇನ್ನು ಮುಂದೆ ಇಂತಹ ಒತ್ತುವರಿ ಕಾರ್ಯಗಳ ಸರ್ವೆಗೆ ಪೊಲೀಸರ ಸಹಾಯ ಪಡೆಯುತ್ತೇವೆ.
27ಕೆಆರ್ ಎಂಎನ್ 13,14.ಜೆಪಿಜಿ