ಸ್ಲ್ಪೆಂಡರ್ ಬೈಕ್‌ನಲ್ಲಿ ಸಾಹಸ । ಯೋಧರಿಗೆ ನಮನ, ಕನ್ನಡ ಬಾವುಟ ಹಾರಾಟ
ಕನ್ನಡಪ್ರಭ ವಾರ್ತೆ ಕಾಪು
ಸಾಕಷ್ಟು ಮಂದಿ ಇಂತಹ ಸಾಹಸಗಳಿಗಾಗಿಯೇ 300 ಸಿಸಿ, 400 ಸಿಸಿ ಇರುವ ಬೈಕುಗಳ ಮೂಲಕ ತೆರಳಿ ಈ ಸಾಹಸವನ್ನು ಮಾಡುತ್ತಾರೆ. ಆದರೆ ರಾಜೇಂದ್ರ ಶೆಣೈ ಮತ್ತು ಪ್ರಜ್ವಲ್ ಶೆಣೈ ಅವರು ಈ ಸಾಹಸವನ್ನು ಮಾಡಿರುವುದು ತಮ್ಮ ನಿತ್ಯಸಂಚಾರದ 100 ಸಿಸಿಯ ಹೀರೋ ಹೊಂಡಾ ಸ್ಲ್ಪೆಂಡರ್ ಬೈಕ್‌ನಲ್ಲಿ ಎಂಬುದು ವಿಶೇಷವಾಗಿದೆ.
ಅವರು ಈ ಬೈಕಿನಲ್ಲಿ 10 ದಿನಗಳ ಅವಧಿಯಲ್ಲಿ ಸುಮಾರು 2,100 ಕಿ.ಮೀ. ಪ್ರಯಾಣ ಬೆಳೆಸಿದ್ದಾರೆ. ಕಾರ್ಗಿಲ್‌ಗೆ ತೆರಳಿದ್ದ ಸಂದರ್ಭದಲ್ಲಿ ಯುದ್ಧದಲ್ಲಿ ವೀರ ಮರಣ ಹೊಂದಿದ ಕ್ಯಾ.ವಿಕ್ರಮ್ ಬಾತ್ರಾ ಮತ್ತು ಇತರ ಸೈನಿಕರ ಸಮಾಧಿ ಸ್ಥಳಕ್ಕೆ ತೆರಳಿ ಶ್ರದ್ಧಾಂಜಲಿಯನ್ನೂ ಸಮರ್ಪಿಸಿದ್ದಾರೆ.
ಕಾಶ್ಮೀರದ ಗುಡ್ಡ ಪ್ರದೇಶದಲ್ಲಿ ರಸ್ತೆ ಅಗಲಕಿರಿದಾಗಿದ್ದು, ಎರಡೂ ಬದಿಯಿಂದ ಕಲ್ಲುಗಳು ಉದುರುತ್ತಿದ್ದವು. ಯಾವುದೇ ಕ್ಷಣದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಳ್ಳುವ ಸಂಭವವಿತ್ತು. ರಸ್ತೆಯ ಎರಡೂ ಬದಿ ಆಳವಾದ ಪ್ರಪಾತವಿದ್ದು, ಸ್ವಲ್ಪ ಮೈಮರೆತರೂ ಕೆಳಕ್ಕೆ ಉರುಳಿ ಅಲ್ಲೇ ಸಮಾಧಿಯಾಗಬಹುದಾದ ಪರಿಸ್ಥಿತಿ ಭಯಾನಕವಾಗಿತ್ತು. ಜನ, ವಾಹನ ಸಂಚಾರ ಕಡಿಮೆ ಇರುವ ಬಹುತೇಕ ನಿರ್ಜನ ಪ್ರದೇಶ, ಕಲ್ಲುಹೊಂಡಗಳ ನಡುವೆ ನೀರು ಕೆಸರುಮಯ ರಸ್ತೆಯಲ್ಲಿ ಸಂಚರಿಸಿದ್ದನ್ನು, ಕಾಲಲ್ಲಿ ಗಮ್ ಬೂಟ್ ಇಲ್ಲದೆ, ಸಾಧಾರಣ ಶೂಸ್‌ಗಳನ್ನು ಧರಿಸಿದ್ದರಿಂದ ಸ್ನೋ ಬೈಟ್, ಪಾದ ಮರಗಟ್ಟಿ ಕಷ್ಟಪಟ್ಟಿದ್ದನ್ನು ರೋಮಾಂಚನದಿಂದ ಅಪ್ಪ, ಮಗ ನೆನಪಿಸಿಕೊಳ್ಳುತ್ತಾರೆ.
ಇದೇ ಸಂದರ್ಭ ಸಮುದ್ರ ಮಟ್ಟದಿಂದ ಸುಮಾರು 19,024 ಅಡಿ ಎತ್ತರದ ವಿಶ್ವದ ಅತೀ ಎತ್ತರದ ಸ್ಥಳ ಉಮ್ಮಿಂಗ್ಲಾ ತಲುಪಲು ಆಸೆಯಿತ್ತು. ಆದರೆ ಪ್ರತಿಕೂಲ ಹವಾಮಾನ ಮತ್ತು ಆಮ್ಲಜನಕದ ಕೊರತೆ ಇದ್ದುದರಿಂದ ಪ್ರವಾಸವನ್ನು ಅರ್ಧಕ್ಕೆ ಮುಗಿಸಿ ಉಡುಪಿಗೆ ಹಿಂತಿರುಗಬೇಕಾಯಿತು.