ಕನ್ನಡಪ್ರಭ ವಾರ್ತೆ ಪಾಂಡವಪುರ
ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡಿ ಜಾತಿ, ಮತ ಪಂಥ, ಧರ್ಮಗಳಿಲ್ಲದೇ ಎಲ್ಲಾ ಜನಾಂಗದವರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ ಎಂದು ತಹಸೀಲ್ದಾರ್ ಶ್ರೇಯಸ್ ಬಣ್ಣಿಸಿದರು.ತಾಲೂಕು ಆಡಳಿತ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಮತ್ತು ಒಕ್ಕಲಿಗರ ವಿಕಾಶ ವೇದಿಕೆಯಿಂದ ಪಟ್ಟಣದ ಐದುದೀಪ ಹಾಗೂ ತಾಪಂ ಕಚೇರಿ ಆವರಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಯಲಹಂಕ ಪ್ರದೇಶದಲ್ಲಿ ರಾಜಾಳ್ವಿಕೆಯ ನಡೆಸುತ್ತಿದ್ದ ನಾಡಪ್ರಭು ಕೆಂಪೇಗೌಡರು ನಾಡಿನ ಜನರಿಗೆ ಅನುಕೂಲ ಮಾಡಿಕೊಡಲು ಬೆಂಗಳೂರು ನಗರವನ್ನು ನಿರ್ಮಿಸಿದರು. 500 ವರ್ಷಗಳ ಹಿಂದೆಯೇ ಅವರ ಪರಿಕಲ್ಪನೆಯಲ್ಲಿ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತೆ ಪೇಟೆಗಳು, ಕೆರೆಕಟ್ಟೆಗಳು, ದೇವಾಲಯ, ಉದ್ಯಾನವನ, ರಸ್ತೆಗಳನ್ನು ನಿರ್ಮಿಸಿದರು ಎಂದರು.ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ಜಾಗತಿಕವಾಗಿ ಐಟಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಉತ್ತಂಗ ಸ್ಥಿತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕೃಷಿ, ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದರು. ನೀರಿನ ಮಹತ್ವ ಅರಿತಿದ್ದ ಕೆಂಪೇಗೌಡರು ಅಂದಿನ ಕಾಲದಲ್ಲಿಯೇ ಹಲವಾರು ಕೆರೆಕಟ್ಟೆಗಳನ್ನು ನಿರ್ಮಿಸಿದ್ದರು. ಕೃಷಿ ಭೂಮಿ ವಿಸ್ತರಣೆ ಜತೆಗೆ ವ್ಯಾಪಾರ ವಹಿವಾಟಿಗೂ ಆಧ್ಯತೆ ನೀಡಿದ್ದರು ಎಂದರು.ಪಟ್ಟಣದಲ್ಲಿ ಸರ್ಕಾರಿ ಜಾಗವಿದ್ದು ಕೆಂಪೇಗೌಡರ ನೆನಪಿನಾರ್ಥವಾಗಿ ಕೆಂಪೇಗೌಡರ ಭವನ ನಿರ್ಮಾಣಕ್ಕೆ ತಾಲೂಕು ಆಡಳಿತ ನಿವೇಶನ ಮಂಜೂರು ಮಾಡಿಕೊಟ್ಟರೆ ಎಲ್ಲರ ಸಹಕಾರದಿಂದ ಭವನ ನಿರ್ಮಿಸಲಾಗುವುದು ಎಂದು ಮನವಿ ಮಾಡಿದರು.
ಸಮಾಜಸೇವಕ ಬಿ.ರೇವಣ್ಣ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಒಂದು ಮನೆ ನಿರ್ಮಿಸೋದೆ ಕಷ್ಟವಾಗಿದೆ. ಹೀಗಿರುವಾಗ ಕೆಂಪೇಗೌಡರು ಬೃಹತ್ ಬೆಂಗಳೂರು ನಗರವನ್ನೇ ನಿರ್ಮಿಸಿ ಜನರ ವ್ಯಾವಾರ ವಹಿವಾಟಿಗೆ ಅನುಕೂಲಮಾಡಿಕೊಟ್ಟ ಮಹಾನ್ ನಾಯಕರು ಕೆಂಪೇಗೌಡರು ಎಂದರು.ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ ಅವರು ನಾಡಪ್ರಭು ಕೆಂಪೇಗೌಡರ ಕುರಿತು ಪ್ರಧಾನ ಭಾಷಣ ಮಾತನಾಡಿದರು. ಕೆಂಪೇಗೌಡರ ಕುರಿತು ಪ್ರಬಂಧ ಬರೆದ ವಿದ್ಯಾರ್ಥಿಗಳು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರನ್ನು ಅಭಿನಂಧಿಸಲಾಯಿತು.
ಇದಕ್ಕೂ ಮುನ್ನ ಐದುದೀಪವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಅನೇಕ ಗಣ್ಯರು ಪುಷ್ಪಾರ್ಚನೆ ಮಾಡಿದರು.ಈ ವೇಳೆ ತಾಪಂ ಇಒ ಲೋಕೇಶ್‌ಮೂರ್ತಿ, ಬಿಇಒ ಚಂದ್ರಶೇಖರ್, ಸರ್ಕಲ್ ಇನ್ಸ್‌ಪೆಕ್ಟರ್ ವಿವೇಕ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಯೋಗೇಶ್, ಒಕ್ಕಲಿಗರ ವಿಕಾಶ ವೇದಿಕೆ ಅಧ್ಯಕ್ಷ ಜನತಬಂಡಾರ ರಾಮಕೃಷ್ಣೇಗೌಡ, ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ರೈತಮುಖಂಡ ರಾಘವೇಂದ್ರ, ಕೆನ್ನಾಳು ನಾಗರಾಜು, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಸಿ.ಆರ್.ರಮೇಶ್, ದೀಪು, ಸತೀಶ್, ನವೀನ್, ಗುರು, ತ್ಯಾಗರಾಜು, ನರಸಿಂಹೇಗೌಡ, ವಿಶ್ವೇಶ್ವರ ಸೇರಿದಂತೆ ಅನೇಕ ಮುಖಂಡರು.