ಪುತ್ರಿಯ ಜೊತೆ ಆತ್ಮಹತ್ಯೆಗೆ ಯತ್ನಿಸಿದ ತಂದೆ: ಪೊಲೀಸರ ಸಕಾಲಿಕ ಕ್ರಮದಿಂದ ತಪ್ಪಿದ ಸಾವು

KannadaprabhaNewsNetwork |  
Published : Nov 05, 2025, 03:00 AM IST

ಸಾರಾಂಶ

ಪಣಂಬೂರು ಪೊಲೀಸರ ಕಾರ್ಯಾಚರಣೆ ಹಾಗೂ ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರ ಮಾರ್ಗದರ್ಶನ ಕಾವೂರಿನಲ್ಲಿ ತಂದೆ, ಮಗಳ ಜೀವವನ್ನು ಉಳಿಸಿರುವ ಬಗ್ಗೆ ನಾಗರಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಮಂಗಳೂರು: ಪತ್ನಿಯ ಜೊತೆ ಜಗಳದಿಂದ ನೊಂದ ಪತಿ ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನ ಜೊತೆಗೆ ಸಮುದ್ರಕ್ಕೆ ಹಾರಿ ಸಾಯಲು ಯತ್ನಿಸಿದ ಬಗ್ಗೆ ವಿಡಿಯೋ ಮಾಡಿ ವಾಟ್ಸಪ್ ಗ್ರೂಪಿಗೆ ಹಾಕಿದ್ದಲ್ಲದೆ, ಬಳಿಕ ತನ್ನ ಮನೆಗೆ ಬಂದು ನೇಣು ಹಾಕಲು ಯತ್ನಿಸಿದಾಗ ಪೊಲೀಸರು ಸಕಾಲಿಕವಾಗಿ ಎಚ್ಚತ್ತುಕೊಂಡು ಆತನನ್ನು ರಕ್ಷಿಸಿದ ಘಟನೆ ಕಾವೂರಿನಲ್ಲಿ ನಡೆದಿದೆ.

ಕಾವೂರು ಶಾಂತಿನಗರ ನಿವಾಸಿ ರಾಜೇಶ್ ಅಲಿಯಾಸ್ ಸಂತು (35) ಸಾಯಲು ಹೋಗಿ ಪೊಲೀಸರಿಂದ ರಕ್ಷಿಸಲ್ಪಟ್ಟವನು.

ಈತ ಬಜಪೆಯ ಯುವತಿಯನ್ನು ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಇದೆ. ಇತ್ತೀಚೆಗೆ ಕೆಲವು ಸಮಯದಿಂದ ಪತಿ ತನ್ನ ಪತ್ನಿಯ ಬಗ್ಗೆ ಅನುಮಾನ ಪಡುತ್ತಿದ್ದು, ಬೇರೆಯವರ ಜೊತೆಗೆ ಸಂಬಂಧ ಇರಿಸಿದ್ದೀಯಾ ಎಂದು ಹೇಳಿ ಜಗಳ ಮಾಡುತ್ತಿದ್ದ. ಅಲ್ಲದೆ, ಪತ್ನಿಗೆ ಪೆಟ್ಟು ಕೊಟ್ಟು ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.ಪತ್ನಿ ಸರಿಯಿಲ್ಲ ಎಂದು ಪತಿ ರಾಜೇಶ್ ಸೋಮವಾರ ಸಂಜೆ ತನ್ನ ಮಗಳನ್ನು ಕರೆದುಕೊಂಡು ತಣ್ಣೀರುಬಾವಿ ಬೀಚ್ ಗೆ ಹೋಗಿದ್ದರು. ನಾವು ಸಾಯೋಣ ಮಗಳೇ, ಅವಳಿಗೆ ಬೇಕಾದ ರೀತಿ ಇರಲಿ, ನಿನ್ನ ತಾಯಿ ಸರಿ ಇಲ್ಲ.. ನಮಗೆ ಯಾರೂ ಬೇಡ ಎನ್ನುತ್ತಾ, ನೀರಿನತ್ತ ನಡೆಯುವ ರೀತಿ ವಿಡಿಯೋ ಮಾಡಿದ್ದಾನೆ. ಅಲ್ಲದೆ, ವಿಡಿಯೋವನ್ನು ತನ್ನ ಅಕ್ಕ ಮತ್ತು ಇತರ ಸಂಬಂಧಿಕರಿಗೂ ಹಾಕಿದ್ದಾನೆ. ವಿಡಿಯೋ ಕ್ಷಣಾರ್ಧದಲ್ಲಿ ವಾಟ್ಸಪ್ ನಲ್ಲಿ ಶೇರ್ ಆಗಿದ್ದು ಏಳು ಗಂಟೆ ವೇಳೆಗೆ ಪಣಂಬೂರು ಪೊಲೀಸರಿಗೆ ತಲುಪಿತ್ತು. ಆದರೆ ವಿಡಿಯೋದಲ್ಲಿ ಅವನ ಮುಖ ಇರಲಿಲ್ಲ. ಕೇವಲ ಸಮುದ್ರದ ನೀರಿನ ಕಡೆಗೆ ನಡೆಯುತ್ತಾ ಹೋಗುವುದು, ಅದರಲ್ಲಿ ತಂದೆ-ಮಗಳ ನೆರಳು ಮಾತ್ರ ಇತ್ತು. ಪಣಂಬೂರು ಬೀಚ್ ಇರಬೇಕೆಂದು ಪೊಲೀಸರು ಕೂಡಲೇ ಅಲ್ಲಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ.

ಇನ್ಸ್ ಪೆಕ್ಟರ್ ಮಹಮ್ಮದ್‌ ಸಲೀಂ ಅವರು ವಿಡಿಯೋವನ್ನು ನೋಡಿ, ತಣ್ಣೀರುಬಾವಿ ಆಗಿರಬೇಕೆಂದು ಠಾಣೆಯಲ್ಲಿದ್ದ ಎಲ್ಲ ಸಿಬ್ಬಂದಿಯನ್ನು ಹುಡುಕಲು ಹಚ್ಚಿದ್ದಾರೆ. ಅಲ್ಲಿ ಹುಡುಕಿದಾಗಲೂ ಯಾರೂ ಇರಲಿಲ್ಲ. ಆದರೆ ಮಗುವಿನ ಜೊತೆಗೆ ಒಬ್ಬಾತ ಬಂದಿದ್ದು ಹೌದು ಎನ್ನುವ ಮಾಹಿತಿ ಲಭಿಸಿತ್ತು. ಅಲ್ಲದೆ, ವಿಡಿಯೋದಲ್ಲಿ ಸಾಕ್ಷಿಯಾಗಿ ಅಲ್ಲಿನ ಚಿತ್ರಣಗಳೂ ಇದ್ದವು.

ಸೈಬ‌ರ್ ಪೊಲೀಸ್ ಸಹಾಯ ಪಡೆದು ಆತನ ನಂಬರ್ ಟ್ರೇಸ್ ಮಾಡಿ ಲೊಕೇಶನ್ ನೋಡಿದಾಗ, ಕಾವೂರು ಶಾಂತಿನಗರ ತೋರಿಸಿತ್ತು. ಕೂಡಲೇ ಕಾವೂರು ಠಾಣೆಗೆ ತಿಳಿಸಿ, ಪಣಂಬೂರು ಠಾಣೆಯ ಇನ್ನೊಂದು ತಂಡವನ್ನು ಅಲ್ಲಿಗೆ ಇನ್ಸ್ ಪೆಕ್ಟ‌ರ್ ಸಲೀಂ ಕಳಿಸಿಕೊಟ್ಟಿದ್ದರು. ಪಣಂಬೂರು ಪೊಲೀಸರು ಕೂಡ ಹತ್ತು ನಿಮಿಷದಲ್ಲಿ ಅಲ್ಲಿಗೆ ತಲುಪಿ ಮನೆ ಪತ್ತೆ ಮಾಡಿದ್ದರು.

ಮನೆಗೆ ಬಾಗಿಲು ಹಾಕಿದ್ದು ಹೊರಗಿನಿಂದ ಬಡಿದರೂ ಸ್ಪಂದನೆ ಬರಲಿಲ್ಲ. ಹೀಗಾಗಿ ಇನ್ಸ್ಪೆಕ್ಟರ್ ಸೂಚನೆಯಂತೆ ಮನೆ ಬಾಗಿಲು ಒಡೆದು ಪೊಲೀಸರು ಒಳಗೆ ಹೋಗಿದ್ದು, ಪಕ್ಕಾಸಿಗೆ ನೇಣು ಹಾಕಿ ಮಗಳ ಜೊತೆಗೆ ನೇಣಿಗೆ ಶರಣಾಗಲು ಆತ ಸಿದ್ದತೆ ಮಾಡಿಕೊಳ್ಳುತ್ತಿದ್ದ. ಪೊಲೀಸರು ಕೂಡಲೇ ಆತನನ್ನು ಹಿಡಿದುಕೊಂಡಿದ್ದು ಕೆಲವೇ ಕ್ಷಣಗಳಲ್ಲಿ ಸಾಯುತ್ತಿದ್ದ ತಂದೆ- ಮಗಳನ್ನು ರಕ್ಷಣೆ ಮಾಡಿದ್ದಾರೆ. ಎರಡು ನಿಮಿಷ ತಡವಾದರೂ ಪ್ರಾಣ ಹೋಗುತ್ತಿತ್ತು.

ಕಾವೂರು ಠಾಣೆಯಲ್ಲಿ ಮಂಗಳವಾರ ಗಂಡ- ಹೆಂಡತಿ ಇಬ್ಬರನ್ನೂ ಕರೆಸಿ ಪೊಲೀಸರು ಬುದ್ಧಿವಾದ ಹೇಳಿ ಮಾತುಕತೆ ನಡೆಸಿದ್ದಾರೆ. ಆದರೆ ಅವನೊಂದಿಗೆ ಇರುವುದಕ್ಕೆ ಪತ್ನಿ ಒಪ್ಪಲಿಲ್ಲ. ತನಗೆ ಸಾಕಾಗಿ ಹೋಗಿದೆ, ಬೇರೆಯಾಗಿ ಇರುತ್ತೇವೆ, ಡೈವರ್ಸ್ ಕೊಡುತ್ತೇನೆ. ಮಗುವನ್ನು ನಾನೇ ಸಾಕುತ್ತೇನೆ ಎಂದು ಹೇಳಿದ್ದಾಳೆ. ಡೈವರ್ಸ್ ಕೊಟ್ಟು ಬೇರೆಯಾಗಿಯೇ ಇರಿ, ಯಾಕೆ ಸಾಯಲು ಮುಂದಾಗುತ್ತೀರಿ ಎಂದು ಪೊಲೀಸರು ಬುದ್ದಿಮಾತು ಹೇಳಿದ್ದಾರೆ. ಪತಿ ರಾಜೇಶ್ ಒಟ್ಟಿಗೆ ಬಾಳುತ್ತೇವೆ ಎಂದರೂ ಪತ್ನಿ ಕೇಳಲಿಲ್ಲ. ಬಳಿಕ ಇಬ್ಬರನ್ನೂ ಕಳಿಸಿಕೊಟ್ಟಿದ್ದಾರೆ.

ಆತ್ಮಹತ್ಯೆ ಯತ್ನದ ಬಗ್ಗೆ ಹಿಂದೆ ಕೇಸು ದಾಖಲಿಸಲು ಅವಕಾಶ ಇತ್ತು. ಈಗ ಬಿಎನ್‌ಎಸ್ ನಲ್ಲಿ ಅದರ ಸೆಕ್ಷನ್ 309 ತೆಗೆದು ಹಾಕಿದ್ದರಿಂದ ಹಾಗೇ ಬಿಟ್ಟು ಕಳಿಸಿದ್ದೇವೆ ಎನ್ನುತ್ತಾರೆ ಪೊಲೀಸರು. ಪಣಂಬೂರು ಪೊಲೀಸರ ಕಾರ್ಯಾಚರಣೆ ಹಾಗೂ ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರ ಮಾರ್ಗದರ್ಶನ ಜೀವವನ್ನು ಉಳಿಸಿರುವ ಬಗ್ಗೆ ನಾಗರಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ