ಕನ್ನಡಪ್ರಭ ವಾರ್ತೆ ಕಾರವಾರ
ಹತ್ತು ವರ್ಷಗಳಿಂದ ನಿರಂತರ ಸ್ವಚ್ಛತೆಯಲ್ಲಿ ತೊಡಗಿಕೊಂಡ ಪಹರೆ ವೇದಿಕೆಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮಂಗಳವಾರ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಪ್ರದಾನ ಮಾಡಿದರು.
ಪಹರೆ ವೇದಿಕೆ ಪರವಾಗಿ ಅಧ್ಯಕ್ಷ ನಾಗರಾಜ ನಾಯಕ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಸ್ವೀಕರಿಸಿದರು.ಶಾಸಕರಾದ ಶಿವರಾಮ ಹೆಬ್ಬಾರ್, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಐ.ಜಿ. ಸನದಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ, ಧಾರವಾಡ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮತ್ತಿತರರು ಇದ್ದರು.ನದಿಗಳ ನೀರು ಕುಡಿಯಲು ಯೋಗ್ಯ-ನರೇಂದ್ರಸ್ವಾಮಿ:
ಶರಾವತಿ, ಅಘನಾಶಿನಿ ಹಾಗೂ ಗಂಗಾವಳಿ ನದಿಗಳ ಮಾಲಿನ್ಯ ಪ್ರಮಾಣದಲ್ಲಿ ಇಳಿಕೆ ಉಂಟಾಗಿದ್ದು, ಕುಡಿಯಲು ಯೋಗ್ಯವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಅಂಗವಾಗಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶರಾವತಿ, ಅಘನಾಶಿನಿ ಮತ್ತು ಗಂಗಾವಳಿ ನದಿ ತೀರದ ಮಾಲಿನ್ಯಕಾರಕ ಚಟುವಟಿಕೆಯಿಂದಾಗಿ ಸಲ್ಫೇಟ್, ಫಾಸ್ಪೇಟ್ ಮತ್ತು ನೈಟ್ರೇಟ್ ಹೆಚ್ಚಿದ್ದು ಪಿಓಡಿ ಸಹ ಹೆಚ್ಚಿದ್ದು ಒಟ್ಟಾರೆ ನೀರಿನ ಗುಣಮಟ್ಟ ಗಡಸುತನ ಆಗಿರುವ ವರದಿ ಇತ್ತು. ನದಿಗಳ ಸಂಗಮ ಸ್ಥಳದಲ್ಲಿ ಮೈಕ್ರೋ ಪ್ಲಾಸ್ಟಿಕ್ ಮಾಲಿನ್ಯ ಜೀವಪರಿಸರಕ್ಕೆ ಹಾನಿ ಉಂಟಾಗಿತ್ತು.
ಇದೀಗ ಈ ಮೂರೂ ನದಿಗಳ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗಿದ್ದು, ನೀರು ಕುಡಿಯುವುದಕ್ಕೆ ಯೋಗ್ಯವಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಈ ನದಿಗಳ ನೀರಿನ ಬಳಕೆ ನಿರ್ಬಂಧ ತೆಗೆದುಹಾಕಲಾಗಿದೆ.ಕಾರ್ಖಾನೆ ಮೇಲೆ ನಿಗಾ:ಉತ್ತರ ಕನ್ನಡ ಜಿಲ್ಲೆಯಲ್ಲಿನ ಕಾರ್ಖಾನೆಗಳಿಂದ ಉಂಟಾಗುವ ಮಾಲಿನ್ಯದ ಮೇಲೆ ನಿಗಾ ಇಡಲಾಗಿದೆ.ಕಾರವಾರ ಸಮೀಪದ ಬಿಣಗಾ ಗ್ರಾಸಿಂ ಇಂಡಸ್ಟ್ರೀಸ್, ಕೈಗಾ ಅಣು ವಿದ್ಯುತ್ ಘಟಕಗಳು, ದಾಂಡೇಲಿ ಪೇಪರ್ ಮಿಲ್ ಹಾಗೂ ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಯ ಮಾಲಿನ್ಯವನ್ನು ಗಮನಿಸಲಾಗುತ್ತಿದೆ ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಿಬ್ಬಂದಿ ಕೊರತೆ ಇದೆ. 700 ಸಿಬ್ಬಂದಿ ಇರಬೇಕಾದಲ್ಲಿ ಕೇವಲ 200 ರಷ್ಟು ಸಿಬ್ಬಂದಿ ಇದ್ದು, ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಸಿಬ್ಬಂದಿ ಭರ್ತಿಗೆ ಕ್ರಮ ವಹಿಸಲಾಗುವುದು ಎಂದರು.ಮಂಡಳಿಗೆ 27 ವಾಹನಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.ಶಾಸಕರಾದ ಶಿವರಾಮ ಹೆಬ್ಬಾರ್, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ ಮತ್ತಿತರರು ಇದ್ದರು.