ತಂದೆ ಕರಸೇವಕ, ಪುತ್ರ ಶ್ರೀರಾಮಲಲ್ಲಾ ಮೂರ್ತಿ ನಿರ್ಮಾಣದ ಸಹಾಯಕ ಶಿಲ್ಪಿ!

KannadaprabhaNewsNetwork |  
Published : Jan 14, 2024, 01:30 AM IST
ಫೋಟೋ: ೧೩ಪಿಟಿಆರ್-ಆಯೋಧ್ಯಾಪುತ್ರ ಸುಮಂತ್‌  ಆಚಾರ್ಯ ಅವರೊಂದಿಗೆ ಸುರೇಂದ್ರ ಆಚಾರ್ಯ ದಂಪತಿ | Kannada Prabha

ಸಾರಾಂಶ

ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಪುತ್ತೂರಿನ ತಂದೆ, ಮಗ ಕೊಡುಗೆ ನೀಡಿದ್ದು, ತಂದೆ ಕರಸೇವಕರಾಗಿದ್ದರೆ, ಮಗ ರಾಮಲಲ್ಲಾ ಮೂರ್ತಿ ನಿರ್ಮಾಣದ ಸಹಾಯಕ ಶಿಲ್ಪಿಯಾಗಿ ಕೆಲಸ ಮಾಡಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಪುತ್ತೂರು

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ದಿನಗಳು ಸಮೀಪಿಸುತ್ತಿದೆ. ಪ್ರಭು ಶ್ರೀರಾಮಚಂದ್ರನ ಸೇವೆಯಲ್ಲಿ ವಿಶಿಷ್ಟವಾಗಿ ತೊಡಗಿಸಿಕೊಂಡಿರುವ ಕುಟುಂಬವೊಂದು ಪುತ್ತೂರಿನಲ್ಲಿದೆ.

ತಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಕರಸೇವಕರಾಗಿ ಅಯೋಧ್ಯೆಗೆ ಹೋಗಿದ್ದರೆ, ಪುತ್ರ ಅಯೋಧ್ಯೆಯ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಪ್ರಭು ಶ್ರೀರಾಮಚಂದ್ರ ಮೂರ್ತಿ ನಿರ್ಮಾಣದಲ್ಲಿ ಸಹಾಯಕ ಶಿಲ್ಪಿಯಾಗಿ ಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಅಪೂರ್ವ ಅವಕಾಶ ಪಡೆದಿರುವ ತಂದೆ ಮತ್ತು ಮಗ ಪುತ್ತೂರಿನವರು ಎಂಬುದೇ ಹೆಮ್ಮೆಯ ಸಂಗತಿ.

ಪುತ್ತೂರು ನಗರದ ಸಾಮೆತ್ತಡ್ಕ ನಿವಾಸಿ ಸುರೇಂದ್ರ ಆಚಾರ್ಯ ಮತ್ತು ಅವರ ಪುತ್ರ ಸುಮಂತ್ ಆಚಾರ್ಯ ಇವರಿಬ್ಬರೂ ಈ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡವರು.

ಸುರೇಂದ್ರ ಆಚಾರ್ಯ ಅವರು ರಾಮಜನ್ಮಭೂಮಿ ಹೋರಾಟದಲ್ಲಿ ೧೯೯೨ರಲ್ಲಿ ಅಯೋಧ್ಯೆಗೆ ತೆರಳಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದೀಗ ಅವರ ಪುತ್ರ ಸುಮಂತ್ ಆಚಾರ್ಯ ಅಯೋಧ್ಯಾ ಶ್ರೀರಾಮ ಮಂದಿರ ಮೂರ್ತಿ ನಿರ್ಮಾಣದ ಕಾಯಕದಲ್ಲಿ ಸಹಾಯಕರಾಗಿ ತೊಡಗಿಸಿಕೊಂಡಿದ್ದಾರೆ.

ಆಲಯ ಶಾಸ್ತ್ರ ಹಾಗೂ ಶಿಲ್ಪ ಶಾಸ್ತ್ರದ ವಿದ್ಯಾರ್ಥಿಯಾಗಿರುವ ಸುಮಂತ್ ಆಚಾರ್ಯ ಕೆ.ಎಸ್., ಪುತ್ತೂರಿನ ನಗರಸಭಾ ವ್ಯಾಪ್ತಿಯ ಸಾಮೆತ್ತಡ್ಕ ಪರಿಸರದಲ್ಲಿ ವಾಸವಿರುವ ಸುರೇಂದ್ರ ಆಚಾರ್ಯ ಹಾಗೂ ಉಮಾವತಿ ಆಚಾರ್ಯ ಅವರ ಏಕೈಕ ಪುತ್ರ. ಪ್ರಸ್ತುತ ಬೆಂಗಳೂರಿನ ಸಾಂಪ್ರದಾಯಿಕ ಶಿಲ್ಪ ಗುರುಕುಲದಲ್ಲಿ ಜ್ಞಾನನಂದ ಗುರುಗಳ ಮಾರ್ಗದರ್ಶನದಲ್ಲಿ ಬಿವಿಎ (ಟೆಂಪಲ್ ಆರ್ಕಿಟೆಕ್ಚರ್) ಅಂತಿಮ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ.

ಪಿಯುಸಿ ವ್ಯಾಸಾಂಗದ ಬಳಿಕ ಡಿಪ್ಲೊಮಾ ಪೂರೈಸಿ ಚಿಕ್ಕಂದಿನಿಂದಲೇ ಬಂದ ಆಸಕ್ತಿಯ ಕ್ಷೇತ್ರದ ಕಲೆಯತ್ತ ಮನಸ್ಸು ಮಾಡಿದ್ದ ಸುಮಂತ್, ಕಾರ್ಕಳ ಕೆನರಾ ಬ್ಯಾಂಕ್‌ನ ಸಿ.ಇ. ಕಾಮತ್ ಅವರಲ್ಲಿ ಒಂದೂವರೆ ವರ್ಷ ಸಾಂಪ್ರದಾಯಿಕ ಶಿಲ್ಪ ಕಲೆಗಳ ಕುಸುರಿ ಕೆಲಸದ ತರಬೇತಿ ಪಡೆದಿದ್ದಾರೆ. ಬಳಿಕ ಬೆಂಗಳೂರಿನ ಸಂಸ್ಥೆಯಲ್ಲಿ ಪದವಿ ಮುಂದುವರಿಸಿದ್ದು, ಅಲ್ಲಿರುವಾಗಲೇ ೪ ತಿಂಗಳ ಹಿಂದೆ ಆಯೋಧ್ಯಾ ಮಂದಿರದ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಆಯ್ಕೆಯಾಗಿದ್ದಾರೆ.

ಮೂರ್ತಿ ನಿರ್ಮಾಣದಲ್ಲಿ ಸಹಾಯಕ: ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ನೇತೃತ್ವದ ೧೦ ಮಂದಿಯ ತಂಡದಲ್ಲಿ ಅಯೋಧ್ಯೆಯಲ್ಲಿ ಮೂರ್ತಿ ನಿರ್ಮಾಣ ಕೆಲಸದಲ್ಲಿ ೨ ತಿಂಗಳು ಸುಮಂತ್ ಆಚಾರ್ಯ ತೊಡಗಿಸಿಕೊಂಡಿದ್ದಾರೆ. ರಾಮಲಲ್ಲಾ ಮೂರ್ತಿಯ ಕುಸುರಿ ಕೆಲಸ, ಬಳ್ಳಿ, ಸಣ್ಣ ವಿಗ್ರಹಗಳು, ಪಾಲಿಶಿಂಗ್ ಕೆಲಸಗಳನ್ನು ತಂಡದಲ್ಲಿ ನಿರ್ವಹಿಸಿದ್ದಾರೆ. ೨ ತಿಂಗಳ ಅವಧಿಯಲ್ಲಿ ರಾತ್ರಿಯ ಪಾಳಿಯಲ್ಲಿ ರಾತ್ರಿ ೮ ಗಂಟೆಯಿಂದ ಬೆಳಗ್ಗೆ ೮ ಗಂಟೆಯ ತನಕ ಕೆಲಸ ನಿರ್ವಹಿಸಿದ್ದೇವೆ. ನಮಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿತ್ತು ಎನ್ನುತ್ತಾರೆ ಸುಮಂತ್ ಆಚಾರ್ಯ.

ರಾಮನೊಂದಿಗೆ ರಾತ್ರಿ ಅವಧಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬೇರೆ ಏನೂ ಗೊತ್ತಾಗುತ್ತಿರಲಿಲ್ಲ. ಶ್ರದ್ಧೆ, ಭಕ್ತಿಯೊಂದಿಗೆ ಕೆಲಸ ಮಾಡಿದ್ದೇವೆ. ಆಯೋಧ್ಯೆ ತುಂಬಾ ಅಂದವಾಗಿದೆ. ದೇವಾಲಯದ ಜತೆಗೆ ಅಯೋಧ್ಯಾ ನಗರ ನಿರ್ಮಾಣವಾಗುತ್ತಿದೆ. ಅಲ್ಲಿನ ನಿವಾಸಿಗಳು ನಮ್ಮನ್ನೆಲ್ಲಾ ವಿಶೇಷವಾಗಿ ಸತ್ಕಾರ ಮಾಡಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ವಿಗ್ರಹ ರಚನೆ ನೇತ್ವತ್ವ ವಹಿಸಿದ್ದ ಅರುಣ್ ಯೋಗಿರಾಜ್ ಅವರು ಶ್ರೀರಾಮನ ಕುರಿತ ದೇಶದ ಜನತೆಯ ಅಸ್ಮಿತೆಯನ್ನು ಗಮನದಲ್ಲಿಟ್ಟುಕೊಂಡು ಅದ್ಭುತವಾಗಿ ನಿರ್ಮಾಣ ಕೆಲಸ ಮಾಡಿದ್ದಾರೆ. ದಕ್ಷಿಣ ಹಾಗೂ ಉತ್ತರ ಸೇರಿದ ಎಲ್ಲ ಶೈಲಿಯಲ್ಲಿ ವರ್ತಮಾನಕ್ಕೂ ಪೂರಕವಾಗಿ ಶಿಲ್ಪವನ್ನು ನಿರ್ಮಾಣ ಮಾಡಿದ್ದಾರೆ. ಅವರ ಮಾರ್ಗದರ್ಶನದೊಂದಿಗೆ ಅವರ ಮನಸ್ಸಿನಲ್ಲಿದ್ದ ಮೂರ್ತಿ ರಚನೆಗೊಂಡಿದೆ ಎಂದು ಸುಮಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ: ಸಣ್ಣ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದ ಸುಮಂತ್, ಶಿಶುಮಂದಿರದಿಂದಲೇ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. ತಂದೆಯ ಪ್ರೇರಣೆಯೂ ಇದರ ಹಿಂದಿತ್ತು. ೫ನೇ ತರಗತಿಯಲ್ಲಿರುವಾಗಲೇ ಮುಖ್ಯ ಶಿಕ್ಷಕರಾಗಿ ಶಾಖೆಗಳನ್ನು ನಡೆಸಿದ್ದನ್ನು ನೆನಪಿಸಿಕೊಳ್ಳುತ್ತಾರೆ ಸುಮಂತ್. ಭದ್ರತೆಯೊಂದಿಗೆ ಶೆಡ್‌ನ ಒಳಗಡೆ ಮೂರ್ತಿಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಕೆಲಸಗಳನ್ನು ಮುಗಿಸಿ ಬರುವಾಗ ರೈಲಿನಲ್ಲಿ ಮೊಬೈಲ್, ಟ್ಯಾಬ್‌ಗಳನ್ನು ಕಳೆದುಕೊಂಡಿದ್ದೇನೆ. ಆದರೆ ಅಪೂರ್ವ ಕೆಲಸ ನಿರ್ವಹಿಸಿದ ಅವಕಾಶ ಈ ಬೇಸರಗಳನ್ನು ಮರೆಸಿದೆ ಎಂದು ಸುಮಂತ್ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ-30,000 ಕೋಟಿ ರು. ವಿತರಣೆಯ ಗುರಿ
ಏಪ್ರಿಲ್‌ನಿಂದ ಆಲ್ಕೋಹಾಲ್‌ ಪ್ರಮಾಣಕ್ಕೆ ತಕ್ಕಂತೆ ಮದ್ಯ ಸುಂಕ