ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಲ್ಲು ಬಾಣಗಳಿಲ್ಲದೇ ಆನೆ-ಕುದುರೆಗಳಿಲ್ಲದೇ ಸೈನಿಕರಿಲ್ಲದೇ ಕೇವಲ ಒನಕೆಯಿಂದಲೂ ಕೂಡ ಯುದ್ಧ ಮಾಡಬಹುದು ಎಂಬುದನ್ನು ತೋರಿಸಿ ಸ್ತ್ರೀ ಕುಲಕ್ಕೆ ಮಾದರಿಯಾದವಳು ಓಬವ್ವ ಎಂದು ಗುಳೇದಗುಡ್ಡದ ಭಂಡಾರಿ ಕಾಲೇಜಿನ ಉಪನ್ಯಾಸಕ ಐ.ಜೆ.ಬೆಳ್ಳನ್ನವರ ಹೇಳಿದರು.ಛಲವಾದಿ ಮಹಾಸಭಾ ಜಿಲ್ಲಾ ಸಮಿತಿ ಬಾಗಲಕೋಟೆಯಿಂದ ನವನಗರದ ಸೆಕ್ಟರ್ ನಂ.45ರಲ್ಲಿ ಬುದ್ಧವಿಹಾರ ಉದ್ಯಾನವನದಲ್ಲಿ ನಡೆದ ಒನಕೆ ಓಬವ್ವ ಜಯಂತ್ಯುತ್ಸವದ ಉಪನ್ಯಾಸಕರಾಗಿ ಮಾತನಾಡಿ, ಓಬವ್ವ ಓರ್ವ ದಿಟ್ಟ ಮಹಿಳೆಯಾಗಿದ್ದು ಸ್ವಾಮಿನಿಷ್ಠೆ, ಪತಿಭಕ್ತಿ, ದೇಶಪ್ರೇಮ ಸಾರಿ-ಸಾರಿ ಹೇಳಿದವಳಾಗಿದ್ದಾಳೆ. ಅನ್ನ ಕೊಟ್ಟ ವೀರಮದಕರಿ ನಾಯಕನ ಹಾಗೂ ಪತಿ ಮುದ್ದುಹನಮಯ್ಯನ ಗೌರವ ಉಳಿಸಲು ಹಾಗೂ ನಾಡಿನ ಜನರನ್ನು ರಕ್ಷಿಸುವ ಕಾರ್ಯ ಮಾಡಿದ ವೀರವನಿತೆಯಾಗಿದ್ದಾಳೆ ಎಂದರು.
ಓಬವ್ವ ತನ್ನ ಛಲದಿಂದ ಹೋರಾಡಿ, ವೈರಿ ಸೈನ್ಯ ಬಗ್ಗು ಬಡಿದಿದ್ದರ ಪರಿಣಾಮವಾಗಿ ಛಲವಾದಿ ಸಮಾಜದ ಕೀರ್ತಿ ಹೆಚ್ಚಿಸಿದ್ದಾಳೆ. ಅಂತಹ ಮಹಾನ ನಾಯಕಿ ವಂಶಸ್ಥರಾದ ನಾವು ಶಿಕ್ಷಣವಂತರಾಗಿ ಆರ್ಥಿಕ, ಸಾಮಾಜಿಕವಾಗಿ ಪ್ರಬಲರಾಗುವ ಮೂಲಕ ಸಮಾಜದ ಮುಂಚೂಣಿಯಲ್ಲಿರಬೇಕೆಂದರು.ಛಲವಾದಿ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಡಿ.ಹುನ್ನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಓಬವ್ವ ನಮ್ಮ ಜನಾಂಗದವಳೆಂಬುದು ಹೆಮ್ಮೆಯ ವಿಷಯವಾಗಿದೆ ಅಂಥಹ ವೀರಮಾತೆ ಜಯಂತಿಯನ್ನು ಛಲವಾದಿ ಮಹಾಸಭೆ ಜಿಲ್ಲಾ ಸಮಿತಿಯವರು ಆಚರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಮುಂಬರುವ ದಿನಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಓಬವ್ವಳ ಜಯಂತಿ ಅದ್ಧೂರಿಯಾಗಿ ಆಚರಿಸಬೇಕೆಂದರು.
ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ವಿವೇಕಾನಂದ ಗರಸಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಓಬವ್ವಳ ಸಾಹಸ ಮಹಿಳಾ ಸಮಾಜಕ್ಕೆ ಸ್ಫೂರ್ತಿಯಾಗಿದೆ. ಆ ನಿಟ್ಟಿನಲ್ಲಿ ಅಂಥಹ ವೀರವನಿತೆಗೆ ಗೌರವ ನೀಡುವ ಉದ್ದೇಶದಿಂದ ಸರ್ಕಾರಿ ಕಾರ್ಯಕ್ರಮವನ್ನಾಗಿಯೂ ಆಚರಿಸಲಾಗುತ್ತಿದೆ. ಓಬವ್ವಳ ದೇಶಪ್ರೇಮ ದಿಟ್ಟತನ ಇಂದಿನ ನಮ್ಮ ಪೀಳಿಗೆ ಅಳವಡಿಸಿಕೊಳ್ಳಬೇಕೆಂದರು.ಡಾ.ಪಂಚಶೀಲ ಬಿಜಂಗೆ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಪೋಷಕರಾದ ಶ್ರೀಧರ ಚಿಕ್ಕಲಕಿ ಸ್ವಾಗತಿಸಿದರು. ಸುನಂದಾ ನಿರೂಪಿಸಿದರು. ರಾಜೇಂದ್ರ ನಾಲಬಂದ ವಂದಿಸಿದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮಹಿಳೆಯರಿಗೆ ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಜಿಲ್ಲಾ ಛಲವಾದಿ ಮಹಾಸಭಾ ಉಪಾಧ್ಯಕ್ಷ ಸುಭಾಸ ಬದಾಮಿ, ಸಮಾಜದ ಹಿರಿಯರಾದ ಮಹಾದೇವಪ್ಪ ಹೊದ್ಲೂರ, ಸೋಮಪ್ಪ ನೀಲನಾಯಕ, ಸುನೀಲ ನಾರಾಯಣಿ, ಸಂಗಪ್ಪ ನಾರಾಯಣಿ, ಉಮಾಪತಿ ನೀಲನಾಯಕ, ರಾಮಣ್ಣ ಹಿರೇಮನಿ, ಶನಶಪ್ಪ ಬಂಡಿ, ಸಿದ್ದರಾಜ ಸೊನ್ನದ, ಡಿ.ಎಸ್.ಜೈಭೀಮ, ಸುರೇಶ ನಂದಿ, ದಯಾನಂದ ಚಲವಾದಿ, ಗುಣವಂತಿ ಕೃಷ್ಣಾ ನಿಡೋಣಿ ಹಾಗೂ ಇತರರು ಉಪಸ್ಥಿತರಿದ್ದರು.