ಹೆತ್ತ ಮಗನಿಗೆ ಕಿಡ್ನಿ ಕೊಡಲು ಮುಂದಾದ ತಂದೆ, ಸಹಾಯಕ್ಕೆ ಮೊರೆ

KannadaprabhaNewsNetwork |  
Published : May 31, 2025, 01:26 AM IST
30ಕೆಪಿಎಲ್22 ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿರುವ  ಶೇಖಪ್ಪ ಕಂಬಳಿ | Kannada Prabha

ಸಾರಾಂಶ

ಇದ್ದ ಎರಡು ಎಕರೆ ಭೂಮಿಯಲ್ಲಿ ಒಂದು ಎಕರೆ ಮಾರಾಟ ಮಾಡಿ ಲಕ್ಷಾಂತರ ವೆಚ್ಚ ಮಾಡಿದ್ದೇನೆ. ಈಗ ನನ್ನ ಕಿಡ್ನಿ ತೆಗೆದು, ನನ್ನ ಮಗನಿಗೆ ಹಾಕಬೇಕಾಗಿದೆ.

ಕೊಪ್ಪಳ: ಹೆತ್ತ ಮಗ ಕಳೆದೆರಡು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಮಗನ ಯಾತನೆ ನೋಡಲಾಗದ ತಂದೆಯೇ ಈಗ ಕಿಡ್ನಿ ನೀಡಲು ಮುಂದಾಗಿದ್ದು, ಆಸ್ಪತ್ರೆಯ ಖರ್ಚು ನಿಭಾಯಿಸಲು ಸಾಧ್ಯವಾವಾಗದೇ ಅಸಹಾಯಕತೆಯಿಂದ ಕಣ್ಣೀರು ಹಾಕುತ್ತಿದ್ದಾನೆ.

ತಾಲೂಕಿನ ಚಿಲವಾಡಗಿ ಗ್ರಾಮದ ಶೇಖರಪ್ಪ ಕಂಬಳಿ ಅವರ ಮಗ ಪರಶುರಾಮ ಎನ್ನುವ 20 ವರ್ಷದ ಯುವಕ ಈಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ.

ನಾವು ಬಡವರು, ನನಗೆ ಮೂವರು ಮಕ್ಕಳಿದ್ದಾರೆ. ಕೂಲಿ ಮಾಡಿಯೇ ಜೀವನ ನಡೆಸಬೇಕು. ಅದರಲ್ಲಿ ಓರ್ವ ಈಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಆತ ನೋವು ಅನುಭವಿಸುವುದನ್ನು ನೋಡಲು ಆಗುತ್ತಿಲ್ಲ. ಹೀಗಾಗಿ, ಅಲ್ಲಲ್ಲಿ ಚಿಕಿತ್ಸೆ ಕೋಡಿಸಿದ್ದೇವೆ. ಇದ್ದ ಎರಡು ಎಕರೆ ಭೂಮಿಯಲ್ಲಿ ಒಂದು ಎಕರೆ ಮಾರಾಟ ಮಾಡಿ ಲಕ್ಷಾಂತರ ವೆಚ್ಚ ಮಾಡಿದ್ದೇನೆ. ಈಗ ನನ್ನ ಕಿಡ್ನಿ ತೆಗೆದು, ನನ್ನ ಮಗನಿಗೆ ಹಾಕಬೇಕಾಗಿದೆ. ಇದಕ್ಕಾಗಿ ಹತ್ತಾರು ಲಕ್ಷ ಬೇಕಾಗಿದೆ ಎನ್ನುತ್ತಾರೆ ಶೇಖರಪ್ಪ.

ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಇದುವರೆಗೂ ಚಿಕಿತ್ಸೆ ಪಡೆಯಲಾಗಿದೆ. ನನ್ನನ್ನು ಸಹ ಎಲ್ಲ ರೀತಿಯಿಂದ ಚಕಪ್ ಮಾಡಿದ್ದು, ಆರೋಗ್ಯವಾಗಿರುವುದರಿಂದ ನನ್ನ ಮಗನಿಗೆ ನನ್ನ ಕಿಡ್ನಿ ಹಾಕಬಹುದು ಎನ್ನುತ್ತಿದ್ದಾರೆ. ಆದರೆ, ಹೀಗೆ ಹಾಕಲು ಹತ್ತಾರು ಲಕ್ಷ ಬೇಕಾಗಿದೆ. ಒಂದು ಎಕರೆ ಹೊಲ ಮಾರಿ ಬಂದಿದ್ದ ಹಣದಲ್ಲಿ ಇದುವರೆಗೂ ಬಹುತೇಕ ಖರ್ಚಾಗಿದೆ. ಒಂದೆರಡು ಲಕ್ಷ ಇದ್ದು, ಅಷ್ಟು ಸಾಕಾಗುವುದಿಲ್ಲ ಎನ್ನುವುದು ಅವರ ಅಸಹಾಯಕತೆ.

ಎರಡೂ ಕಿಡ್ನಿ ವಿಫಲವಾಗಿರುವುದರಿಂದ ಆತ ಯಾತನೆ ಅನುಭವಿಸುತ್ತಿದ್ದಾನೆ. ಆತ ನೋವು ಅನುಭವಿಸುವುದನ್ನು ನೋಡಲು ಆಗುತ್ತಿಲ್ಲ. ತಾಯಿ ಶಂಕ್ರವ್ವ ಸಹ ಮಗನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಎಂದು ಬೇಡಿಕೊಳ್ಳುತ್ತಾಳೆ.

ಪರಶುರಾಮನ ಸಹೋದರ ಬಸವರಾಜ ಹೇಳುವ ಪ್ರಕಾರ, ಆನಾರೋಗ್ಯದಿಂದ ಬಳಲುತ್ತಿದ್ದ ತಮ್ಮನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದಾಗ ವೈದ್ಯರು ಸ್ಪಷ್ಟವಾಗಿ ಏನೆಂದು ಹೋಳಲಿಲ್ಲ. ಬೇರೆ ಬೇರೆ ರೋಗ ಇದೆ ಎಂದು ಚಿಕಿತ್ಸೆ ನೀಡಿದರು. ಆದರೆ, ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದಾಗ ಕಿಡ್ನಿ ವಿಫಲವಾಗಿರುವುದು ಗೊತ್ತಾಗಿದೆ. ಚಿಕ್ಕಂದಿನಿಂದಲೇ ಆತನ ಕಿಡ್ನಿಗಳು ನಿಗದಿತ ಪ್ರಮಾಣದಲ್ಲಿ ಬೆಳೆದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ಪರ್ಯಾಯ ಕಿಡ್ನಿ ಜೋಡಿಸಬೇಕು ಎಂದು ಹೇಳಿದ್ದರಿಂದ ಈಗ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಹಣಕಾಸಿನ ಸಮಸ್ಯೆಯಾಗಿದೆ ಎನ್ನುತ್ತಾರೆ.

ನೆರವು ನೀಡ ಬಯಸುವವರು 9113521147 ಸಂಖ್ಯೆಗೆ ಸಂಪರ್ಕಿಸಬಹುದು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ