ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಫೇವರಿಚ್ ಮೆಗಾ ಫುಡ್ ಪಾರ್ಕ್ ವ್ಯಾಪ್ತಿಯ ಆಹಾರ ತಯಾರಿಕಾ ಘಟಕಗಳು ತ್ಯಾಜ್ಯ ನೀರನ್ನು ಸಂಸ್ಕರಿಸದೆ ಹರಿಯ ಬಿಟ್ಟಿರುವುದರಿಂದ ತಾಲೂಕಿನ ಬಣ್ಣೇನಹಳ್ಳಿ ವ್ಯಾಪ್ತಿಯ ಕೆರೆ- ಕಟ್ಟೆಗಳು ಕಲುಷಿತ ನೀರಿನಿಂದ ತ್ಯಾಜ್ಯದ ಗುಂಡಿಗಳಾಗಿ ಪರಿವರ್ತನೆಗೊಂಡಿವೆ.ಕೆರೆ ನೀರು ಕಲುಷಿತಗೊಂಡಿರುವುದುರಿಂದ ಫುಡ್ ಪಾರ್ಕ್ ವ್ಯಾಪ್ತಿಯ ತಾಲೂಕಿನ ಬೂಕನಕೆರೆ ವ್ಯಾಪ್ತಿಯ ಐಚನಹಳ್ಳಿ, ಬಣ್ಣೇನಹಳ್ಳಿ, ತಗಡೂರು, ವೆಂಕಟರಾಜಪುರ, ಅಶೋಕನಗರ, ಚೀಕನಹಳ್ಳಿ ಮುಂತಾದ ಗ್ರಾಮಗಳ ಜನ ಗಂಭೀರ ಅಪಾಯಕ್ಕೆ ಸಿಲುಕಿದ್ದಾರೆ. ಬಣ್ಣೇನಹಳ್ಳಿ ಬಳಿ ಸ್ಥಾಪನೆಯಾದ ಫೇವರಿಚ್ ಮೆಗಾ ಫುಡ್ ಪಾರ್ಕ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದ್ದರು.
ಇಸ್ರೇಲ್, ಜಪಾನ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ನೆದರ್ ಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳ ಅತ್ಯಾಧುನಿಕ ಆಹಾರ ತಂತ್ರಜ್ಞಾನದ ಘಟಕಗಳು ಆರಂಭವಾಗಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮನ್ಮುಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪಶು ಆಹಾರ ಉತ್ಪನ್ನ ಘಟಕ, ತಂಪು ಪಾನೀಯ ಉತ್ಪಾದನಾ ಘಟಕಗಳಂತಹ ಕೆಲವು ದೇಶೀಯ ಘಟಕಗಳು ಆರಂಭವಾಗಿವೆ.ಆಹಾರ ಉತ್ಪಾದನಾ ಘಟಕಗಳು ಹೊರ ರಾಜ್ಯದ ಯುವಕರಿಗೆ ಮಣೆ ಹಾಕಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡದೆ ವಂಚಿಸಿವೆ. ಅಲ್ಲದೇ, ಸರ್ಕಾರಿ ನಿಯಮಗಳನ್ನು ಪಾಲಿಸದೆ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಸಮೀಪದ ಕೆರೆ ಕಟ್ಟೆಗಳಿಗೆ ಬಿಡುತ್ತಿದೆ ಎಂದು ರಾಜ್ಯ ಜಿಲ್ಲಾ ರೈತಸಂಘ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಆರೋಪಿಸಿದ್ದಾರೆ.
ಬೂಕನಕೆರೆ ಹೋಬಳಿ 46 ಕೆರೆ ಕಟ್ಟೆಗಳನ್ನು ಹೇಮೆ ನೀರಿನಿಂದ ತುಂಬಿಸುವ ಐಚನಹಳ್ಳಿ ಏತ ನೀರಾವರಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಚಾಲನೆ ನೀಡಿದ್ದಾರೆ. ಇದರಿಂದ ಐಚನಹಳ್ಳಿ ಹಾಗೂ ಸುತ್ತಮುತ್ತಲ ಕೆರೆಗಳು ಮುಂದಿನ ದಿನಗಳಲ್ಲಿ ಹೇಮೆಯ ನೀರಿನಿಂದ ತುಂಬಿ ತುಳುಕಲಿವೆ. ಆದರೆ, ಈಗ ಫುಡ್ ಪಾರ್ಕ್ ತ್ಯಾಜ್ಯ ನೀರಿನಿಂದ ತುಂಬಿದ್ದು ನೀರಾವರಿಗೆ ನಿರುಪಯುಕ್ತಗೊಂಡಿದೆ.ಫುಡ್ ಪಾರ್ಕ್ ಪಕ್ಕದ ಹನಾರ್ ಕಟ್ಟೆಯ ನೀರನ್ನು ರೈತರು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದರಲ್ಲದೆ ದನಕರುಗಳಿಗೆ ಕುಡಿಯಲು ಬಳಕೆ ಮಾಡುತ್ತಿದ್ದರು. ಇದೀಗ ಹನಾರ್ ಕಟ್ಟೆ ಸಂಪೂರ್ಣ ಕಲುಷಿತಗೊಂಡಿದೆ. ಸ್ಥಳೀಯ ರೈತರ ಹೋರಾಟದ ಫಲವಾಗಿ ಕೇಂದ್ರೀಯ ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತೀಚೆಗೆ ಫುಡ್ ಪಾರ್ಕ್ ಆವರಣಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದ್ದಾರೆ.
ಪರಿವೀಕ್ಷಣೆಯ ಸಮಯದಲ್ಲಿ ರೈತರ ಅಹವಾಲುಗಳನ್ನು ಆಲಿಸಿದ್ದು ಬಿಟ್ಟರೆ ಮತ್ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಜನಸ್ಪಂದನಾ ಸಭೆಯಲ್ಲಿಯೂ ರೈತ ಮುಖಂಡ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಫುಡ್ ಪಾರ್ಕ್ ವ್ಯಾಪ್ತಿಯ ರೈತರು ಜಿಲ್ಲಾಧಿಕಾರಿಗಳಿಗೆ ಖುದ್ದು ದೂರು ನೀಡಿ ಕಲುಷಿತ ನೀರಿನಿಂದ ರೈತರ ಕೆರೆಯನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಕೂಡ ಫುಡ್ ಪಾರ್ಕ್‌ಗೆ ಭೇಟಿ ನೀಡಿ ಸಮಸ್ಯೆಗಳನ್ನು ಕಣ್ಣಾರೆ ಅವಲೋಕಿಸಿದ್ದಾರೆ. ಆದರೆ ಫುಡ್ ಪಾರ್ಕ್‌ನ ಆಹಾರ ತಯಾರಿಕಾ ಘಟಕಗಳ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ.
ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆಗಳ ಸಚಿವರಾಗಿದ್ದು, ಜಿಲ್ಲೆಯ ಜನರ ದೃಷ್ಟಿಯಿಂದ ಕೆಂದ್ರ ಸಚಿವರು ಫುಡ್ ಪಾರ್ಕ್‌ಗೆ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆಯ ಪರಿಶೀಲನೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಪರಿಸರ ಇಲಾಖೆ ಮತ್ತು ಆರೋಗ್ಯ ಇಲಾಖೆ ತಕ್ಷಣವೇ ಕಲುಷಿತ ನೀರನ್ನು ಕೆರೆಗೆ ಬಿಡದಂತೆ ತಡೆದು ಜನ-ಜಾನುವಾರುಗಳ ಆರೋಗ್ಯ ಕಾಪಾಡುವಂತೆ ಒತ್ತಾಯಿಸಿದ್ದಾರೆ.