ಮಸ್ಕಿಯಲ್ಲಿ 3 ಡೆಂಘೀ ಪ್ರಕರಣ ಪತ್ತೆ

KannadaprabhaNewsNetwork | Published : Jul 5, 2024 12:46 AM

ಸಾರಾಂಶ

ಆರೋಗ್ಯ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಸಂಜೆಯ ಸಮಯದಲ್ಲಿ ಸೊಳ್ಳೆಗಳಿರುವ ಪ್ರದೇಶಗಳಲ್ಲಿ ಫಾಗಿಂಗ್ ಸಿಂಪಡಿಸಿ ಸೊಳ್ಳೆಗಳನ್ನು ನಿಯಂತ್ರಣ ತರಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಸ್ಕಿ

ಮಳೆಗಾಲವಾಗಿದ್ದರಿಂದ ಸೊಳ್ಳೆಗಳಿಂದ ಡೆಂಘೀ, ಮಲೇರಿಯಾ ರೋಗ ಲಕ್ಷಣಗಳು ಹೆಚ್ಚಾಗುತ್ತಿದ್ದು, ಪಟ್ಟಣದಲ್ಲಿ 3 ಡೆಂಘೀ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ರೋಗ ತಡೆಗಟ್ಟಲು ಇಲ್ಲಿನ ಪುರಸಭೆ ಆಡಳಿತದ ವತಿಯಿಂದ ಸ್ವಚ್ಛತೆ ಹಾಗೂ ಫಾಗಿಂಗ್ ಮಾಡುವ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗಿದೆ.

ಮಸ್ಕಿ ಪಟ್ಟಣದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಜನಸಂಖ್ಯೆ ವಾಸಿಸುತ್ತಿದ್ದಾರೆ. ಆದರೆ ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಹಲವಾರು ಬಡಾವಣೆಗಳಲ್ಲಿ ಸೂಕ್ತವಾದ ಚರಂಡಿ ವ್ಯಸಸ್ಥೆ ಇಲ್ಲದೇ ಇರುವುದು ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಚರಂಡಿ ನೀರು ಸಮರ್ಪಕವಾಗಿ ಹರಿದು ಹೋಗದೆ ಸಮಸ್ಯೆ ಅನುಭವಿಸುವಂತಾಗಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಜನರು ಡೆಂಘೀ ಮಲೇರಿಯಾ ರೋಗ ಹರಡುವ ಭೀತಿಯಲ್ಲಿ ದಿನಗಳು ಕಳೆಯುವಂತಾಗಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಅಧಿಕಾರಿಗಳು ಸರಾಗವಾಗಿ ಚರಂಡಿ ನೀರು ಹರಿದು ಹೋಗಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡು ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ.

ಸೊಳ್ಳೆಗಳ ನಿಂತ್ರಣಕ್ಕೆ ಪುರಸಭೆಯಿಂದ ಫಾಗಿಂಗ್: ಪುರಸಭೆ ವ್ಯಾಪ್ತಿಯಲ್ಲಿನ ವಾರ್ಡ್‌ಗಳಲ್ಲಿ ಸೊಳ್ಳೆಗಳ ನಿಯಂತ್ರಣ ಮಾಡುವಂತೆ ಆರೋಗ್ಯ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭೆ ಸಿಬ್ಬಂದಿ ಸಂಜೆಯ ಸಮಯದಲ್ಲಿ ಸೊಳ್ಳೆಗಳಿರುವ ಪ್ರದೇಶಗಳಲ್ಲಿ ಫಾಗಿಂಗ್ ಸಿಂಪಡಿಸಿ ಸೊಳ್ಳೆಗಳನ್ನು ನಿಯಂತ್ರಣ ತರಲು ಮುಂದಾಗಿದ್ದಾರೆ.ಪುರಸಭೆ ವ್ಯಾಪ್ತಿಯಲ್ಲಿನ ವಾರ್ಡ್‌ಗಳಲ್ಲಿ ಮುಖ್ಯವಾಗಿ ಚರಂಡಿ ಸ್ವಚ್ಛತೆ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಂಜೆ ಸಮಯದಲ್ಲಿ ಪುರಸಭೆಯಿಂದ ಫಾಗಿಂಗ್ ಮಾಡಲಾಗುತ್ತಿದೆ.

-ನರಸರಡ್ಡಿ, ಪುರಸಭೆ ಮುಖ್ಯಾಧಿಕಾರಿ ಮಸ್ಕಿ.ಮಸ್ಕಿ ಪಿಎಚ್‌ಸಿ ವ್ಯಾಪ್ತಿಯಲ್ಲಿ ಡೆಂಘೀ ಲಕ್ಷಣದ 3 ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಸಾರ್ವಜನಿಕರು ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಇಟ್ಟು ಸೊಳ್ಳೆಗಳು ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ರಾತ್ರಿ ಸಮಯಲ್ಲಿ ಸೊಳ್ಳೆ ಪರದೆ ಬಳಸಿ.

- ಡಾ. ಮೌನೇಶ, ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಸ್ಕಿ.

Share this article