ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕೇವಲ ಎರಡೇ ನಿಮಿಷದಲ್ಲಿ ವಿಕಾಸ ಪೈ ದೋತ್ರೆ ಸೈಡ್ ಡಾವ್ ಹೊಡೆದು ಚಿತ್ತ ಮಾಡಲು ಹೋದಾಗ ಶರೀರದ ತೂಕ ಹೆಚ್ಚಿರುವ ಕೊಲ್ಹಾಪೂರ ಸಾಗರ ಪೈ ಇದನ್ನೇ ಲಾಭ ಮಾಡಿಕೊಂಡು ಸೈಡ್ ಡಾವ್‌ನಿಂದ ಬಚಾವಾಗಲು ಯಶಸ್ವಿಯಾಗಿ ಕೊನೆಗೆ ವಿಕಾಸ ಪೈ ಸೈಡ್ ಡಾವ್ ವಿಫಲಗೊಂಡ ಕಾರಣ ಮೈಮೇಲೆ ಹಾಕಿಕೊಂಡು ಕಣದಲ್ಲಿ ಬಿದ್ದ ಪರಿಣಾಮ ಸಾಗರ ಪೈ ತಾಮಖಡೆ ಗೆಲುವು ಸಾಧಿಸಿದರು. ಅದರಂತೆ ಎರಡು ಮತ್ತು ಮೂರನೇಯ ಬಲಾಢ್ಯ ಪೈಲ್ವಾನರಾಗಿ ಕುಸ್ತಿ ಮೈದಾನಕ್ಕಿಳಿದ ಪುಣೆಯ ನಾಗರಾಜ ಪೈ ಬಸಿಡೋಣಿ ಜೊತೆ ಕೊಲ್ಲಾಪೂರದ ಉಮೇಶ ಪೈ ಚಹ್ವಾನ ಮತ್ತು ಜಗದಾಳದ ಸಾಗರ ಪೈ ಉಳ್ಳಾಗಡ್ಡಿ ಜೊತೆ ಸಾಂಗಲಿಯ ಬಾಳು ಪೈ ಅಪರಾಧ ಸಮಬಲ ಸಾಧಿಸಿದರು.
ರಂಜಿಸಿದ ಪೈಲ್ವಾನರು:ಕೊಲ್ಹಾಪೂರ ಗಂಗಾವೇಶದ ಸಾಗರ ಪೈ ತಾಮಖಡೆ ಜೊತೆ ಸೊಲ್ಲಾಪೂರದ ವಿಕಾಸ ಪೈ ದೋತ್ರೆ, ಪುಣೆಯ ನಾಗರಾಜ ಪೈ ಬಸಿಡೋಣಿ ಜೊತೆ ಕೊಲ್ಹಾಪೂರದ ಉಮೇಶ ಪೈ ಚಹ್ವಾಣ, ಜಗದಾಳದ ಸಾಗರ ಪೈಲ ಉಳ್ಳಾಗಡ್ಡಿ ಜೊತೆ ಸಾಂಗಲಿಯ ಬಾಳು ಪೈ ಅಪರಾಧ ಸೇರಿದಂತೆ ನೂರಾರು ಕುಸ್ತಿಗಳ ಸೆಣಸಾಟ ನೋಡುಗರನ್ನು ರಂಜಿಸಿತು. ಮದಗಜಗಳಂತೆ ಹೋರಾಟ ನಡೆಸಿದ ಕುಸ್ತಿ ಪಟುಗಳು ಜನರ ಪ್ರೋತ್ಸಾಹಕ್ಕೆ, ಸಿಳ್ಳೆಯ ನೀನಾದಕ್ಕೆ ತಲೆ ದೂಗಿದರು. ಕುಸ್ತಿ ಗೆಲ್ಲಲು ನಡೆಸಿದ ವೀರೋಚಿತ ಹೋರಾಟ ಕುಸ್ತಿ ರಸಿಕರ ಮನ ತಣಿಸಿತು. ಅನೇಕ ಕುಸ್ತಿಗಳಿಗೆ ವಿಶೇಷ ಬಹುಮಾನ ನೀಡಲಾಯಿತು.
ಸಂಜೆ ೪ ಗಂಟೆಗೆ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀಗುರುಸಿದ್ಧೇಶ್ವರ ಶ್ರೀಗಳು ಕುಸ್ತಿಗೆ ಚಾಲನೆ ನೀಡಿದರು. ಕುಸ್ತಿ ಮೈದಾನವನ್ನು ಪೂಜಿಸಿಲಾಯಿತು. ನಂತರ ಆರಂಭವಾದ ಜಂಗೀ ನಿಕಾಲಿ ಕುಸ್ತಿಗಳು ರಾತ್ರಿ ೯ರ ವರೆಗೆ ಜರುಗಿ ನೆರೆದ ಕುಸ್ತಿಪ್ರೀಯರನ್ನು ರಂಜಿಸಿದವು. ಪುಣೆ, ಇಚ್ಚಲಕರಂಜಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕುಸ್ತಿಪಟುಗಳು ಆಗಮಿಸಿದ್ದರು.