ಕಬ್ಬು ಇಳುವರಿ ಕುಸಿತ ಭೀತಿ; ಇಬ್ಬರಲ್ಲೂ ಆತಂಕ

KannadaprabhaNewsNetwork |  
Published : Oct 15, 2026, 03:00 AM IST
ಫೋಟೊ-14ಆರ್‌ಬಿಕೆ3/ ರಬಕವಿ ಬನಹಟ್ಟಿ ತಾಲೂಕಿನ ಜಗದಾಳ ನಾವಲಗಿ ರಸ್ತೆ ಬದಿಯಲ್ಲಿನ ಕಬ್ಬು ಬೆಳೆದ ಚಿತ್ರ. | Kannada Prabha

ಸಾರಾಂಶ

ಶಿವಾನಂದ ಪಿ.ಮಹಾಬಲಶೆಟ್ಟಿ ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಮಳೆ ಪ್ರಮಾಣ ತೀವ್ರವಾಗಿ ಕಡಿಮೆಯಾಗಿರುವುದರಿಂದ ಕಬ್ಬುಬೆಳೆ ಇಳುವರಿ ಕುಸಿಯುವ ಆತಂಕ ರೈತರನ್ನು ಕಾಡುತ್ತಿದೆ. ತಾಲೂಕಿನಲ್ಲಿ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಪ್ರಸಕ್ತ ವರ್ಷ ಮಳೆ ಕೊರತೆ ಹಾಗೂ ಗೊಣ್ಣೆ ಹುಳುವಿನ ಬಾಧೆಯಿಂದಾಗಿ ಕಬ್ಬು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಮಳೆ ಪ್ರಮಾಣ ತೀವ್ರವಾಗಿ ಕಡಿಮೆಯಾಗಿರುವುದರಿಂದ ಕಬ್ಬುಬೆಳೆ ಇಳುವರಿ ಕುಸಿಯುವ ಆತಂಕ ರೈತರನ್ನು ಕಾಡುತ್ತಿದೆ. ತಾಲೂಕಿನಲ್ಲಿ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಪ್ರಸಕ್ತ ವರ್ಷ ಮಳೆ ಕೊರತೆ ಹಾಗೂ ಗೊಣ್ಣೆ ಹುಳುವಿನ ಬಾಧೆಯಿಂದಾಗಿ ಕಬ್ಬು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

ಕಳೆದ ಬಾರಿ ಪ್ರತಿ ಎಕರೆಗೆ 45 ರಿಂದ 50 ಟನ್‌ವರೆಗೆ ಕಬ್ಬಿನ ಇಳುವರಿ ಬಂದಿತ್ತು. ಆದರೆ ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಕಬ್ಬಿನ ಬೆಳವಣಿಗೆ ಕುಂಠಿತಗೊಂಡಿದ್ದು, ಪ್ರತಿ ಎಕರೆಗೆ ಕೇವಲ 30 ಟನ್‌ಗಳಷ್ಟು ಇಳುವರಿ ಬರಬಹುದು ಎಂದು ಅಂದಾಜಿಸಲಾಗಿದೆ.

ಕಬ್ಬು ಬೆಳೆಗಾರರಿಗೆ ಆರ್ಥಿಕ ನಷ್ಟ:

ಈ ಬೆಳವಣಿಗೆ ಕಾರ್ಖಾನೆ ಮಾಲೀಕರಲ್ಲೂ ಆತಂಕ ಮೂಡಿಸಿದೆ. ಬಿಸಿಲ ತಾಪ ಹವಾಮಾನದಲ್ಲಿನ ಏರುಪೇರು ಹೀಗೆ ಹತ್ತು ಹಲವು ನೈಸರ್ಗಿಕ ಪರಿಣಾಮಗಳಿಂದ ಈ ಬಾರಿ ಭಾರೀ ಪ್ರಮಾಣದಲ್ಲಿ ಕಬ್ಬಿನ ಇಳುವರಿ ಕುಸಿದಿದೆ ಎನ್ನಲಾಗುತ್ತಿದೆ. ಈ ಕುರಿತು ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯ ಕಬ್ಬು ಖರೀದಿ ಹಾಗೂ ಅಭಿವೃದ್ಧಿ ವಿಭಾಗದ ರಬಕವಿ ಬನಹಟ್ಟಿ ತಾಲೂಕು ನಿರ್ವಹಣಾಧಿಕಾರಿ ವಿವೇಕ ಹಿರೇಮಠ ಅವರು ಮಾಹಿತಿ ನೀಡಿದ್ದು, ಪ್ರಸಕ್ತ ವರ್ಷ ಸಕ್ಕರೆ ಕಾರ್ಖಾನೆಗಳಿಗೆ ಅಗತ್ಯ ಪ್ರಮಾಣದಲ್ಲಿ ಕಬ್ಬು ನುರಿಸಲು ಕಬ್ಬಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಕಬ್ಬಿನ ಬೆಳವಣಿಗೆಗೆ ಅಗತ್ಯವಾದ ತೇವಾಂಶ ದೊರೆಯುತ್ತಿಲ್ಲ. ಜತೆಗೆ ಗೊಣ್ಣೆ ಹುಳುವಿನ ಬಾಧೆಯೂ ಬೆಳೆಯ ಮೇಲೆ ಪರಿಣಾಮ ಬೀರುತ್ತಿದೆ. ಕೆಲವು ಕಬ್ಬಿನ ಗದ್ದೆಗಳಲ್ಲಿ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ರೈತರ ಆದಾಯ ಕಡಿಮೆಯಾಗುವುದರ ಜತೆಗೆ ಸಕ್ಕರೆ ಕಾರ್ಖಾನೆಗಳಿಗೂ ಸಮರ್ಪಕ ಪ್ರಮಾಣದಲ್ಲಿ ಕಬ್ಬು ಪೂರೈಕೆಯಾಗದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಂದಾಜಿಸಲಾಗಿದೆ.

ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಳೆಯ ಕೊರತೆ ಹಾಗೂ ಕೀಟಬಾಧೆ ಎರಡೂ ಒಟ್ಟಿಗೆ ಕಾಣಿಸಿಕೊಂಡಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷ 26812.77 ಹೆಕ್ಟೇರ್‌ ಪ್ರದೇಶದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ರೈತರು ಕಬ್ಬು ಬೆಳೆ ಬೆಳೆದಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಕೇವಲ 16403.22 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕಬ್ಬು ಬೆಳೆಯಲಾಗಿದೆ. ಕಳೆದ ವರ್ಷಕ್ಕೆ ಹೊಲಿಸಿದರೆ 10409.55 ಹೆಕ್ಟೇರ್ ಪ್ರದೇಶದಷ್ಟು ಕಡಿಮೆ ಪ್ರದೇಶದಲ್ಲಿ ಕಬ್ಬು ಬೆಳೆ ಇದೆ.

-ಎಸ್.ಎಂ.ಬಿರಾದಾರ, ಕೃಷಿ ಅಧಿಕಾರಿಗಳು ರಬಕವಿ ಬನಹಟ್ಟಿ ತಾಲೂಕು ವ್ಯಾಪ್ತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾ ಕುಸ್ತಿ: ಬೆಳಗಾವಿ ತಂಡ ಮೇಲುಗೈ
ಗಾಂಜಾ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ