ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದ್ರಾಕ್ಷಿ ಬೆಳೆಗಾರರಿಗೆ ಮಾರ್ಚ್, ಏಪ್ರಿಲ್, ಮೇ ಸುಗ್ಗಿಕಾಲ. ಜಿಲ್ಲೆಯ ತೋಟಗಳಲ್ಲಿ ದ್ರಾಕ್ಷಿ ಕೊಯ್ಲು ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಆದರೆ ಈಗಲೇ ಬೆಲೆ ಕುಸಿತದ ಭೀತಿ ಎದುರಾಗಿದೆ. ಮಾರುಕಟ್ಟೆಯಲ್ಲಿ ಸೀಡ್‌ಲೆಸ್ ದ್ರಾಕ್ಷಿ ದರ ಅಗ್ಗವಾಗಿದ್ದರೆ. ತೋಟಗಳಲ್ಲಿ ಬೆಂಗಳೂರು ನೀಲಿ ದ್ರಾಕ್ಷಿ ರೈತರ ಕೈ ಕಚ್ಚುತ್ತಿದೆ.
ಉತ್ತಮ ಇಳುವರಿ, ದರ ಕುಸಿತ:ಹಿಂದಿನ 2-3 ವರ್ಷಗಳಲ್ಲಿ ನಿರಂತರ ಮಳೆ ಕಾರಣ ದ್ರಾಕ್ಷಿ ನಿರೀಕ್ಷಿತ ಫಸಲು ಬಂದರೂ ಹಾಳಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಮಳೆಯ ಸಮಸ್ಯೆ ಇಲ್ಲಾ. ದ್ರಾಕ್ಷಿಗೆ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತ ಈಗ ಕಂಗಾಲಾಗಿದ್ದಾನೆ. ಕಳೆದ ಬಾರಿಗಿಂತ ದ್ರಾಕ್ಷಿ ದರ ಭಾರಿ ಪ್ರಮಾಣದಲ್ಲಿ ಕುಸಿದಿರುವುದೇ ಇದಕ್ಕೆ ಕಾರಣ. ಉತ್ತಮ ಫಸಲು ಬಂದಿದ್ದರೂ ದರದ್ದೇ ಚಿಂತೆ.
ರಾಜ್ಯಕ್ಕೆ ಮಹಾರಾಷ್ಟ್ರ ಸ್ಪರ್ಧಿ:
ರಾಜ್ಯಕ್ಕೆ ಮಹಾರಾಷ್ಟದಿಂದ ಹೆಚ್ಚು ದ್ರಾಕ್ಷಿ ಬರುತ್ತಿರುವುದರಿಂದ ರಾಜ್ಯದಲ್ಲಿ ಬೆಳೆದ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾಗಿದೆ. ಮಹಾರಾಷ್ಟ ದ್ರಾಕ್ಷಿ ಬೆಳೆ ಕಟಾವು ಪೂರ್ಣಗೊಂಡ ಬಳಿಕ ರಾಜ್ಯದ ದ್ರಾಕ್ಷಿಗೆ ದರ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಇಲ್ಲಿನ ವ್ಯಾಪಾರಿಗಳೆಲ್ಲ ಮಹಾರಾಷ್ಟದಲ್ಲೇ ಬೀಡುಬಿಟ್ಟಿದ್ದು ಅಲ್ಲಿ ದ್ರಾಕ್ಷಿ ಖಾಲಿಯಾದ ನಂತರ ರಾಜ್ಯದ ತೋಟಗಳಿಗೆ ಬಂದಾಗ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ.