ಹೊನ್ನಾವರದಲ್ಲೂ ಗುಡ್ಡ ಕುಸಿತದ ಆತಂಕ

KannadaprabhaNewsNetwork | Published : Jul 29, 2024 12:51 AM

ಸಾರಾಂಶ

ಹೊನ್ನಾವರ ಪಟ್ಟಣದ ಕರ್ನಲ್ ಕಂಬದ ಅಕ್ಕಪಕ್ಕದ ಜೋಗಮಠ, ಗಾಂಧಿನಗರ ಹಾಗೂ ಎಲ್ಐಸಿ ಕಚೇರಿ ಬಳಿ ಹಾದುಹೋಗಿರುವ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬ ದೂರು ಕೇಳಿಬಂದಿದೆ.

ಹೊನ್ನಾವರ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣ 8 ಜನರ ಬಲಿ ಪಡೆದು, ಇನ್ನೂ ಮೂರು ಜನ ನಾಪತ್ತೆಯಾಗಿರುವ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ. ಇಂಥದ್ದೇ ಅಪಾಯಕಾರಿ ಸ್ಥಳವೊಂದು ಪಟ್ಟಣದಲ್ಲಿದ್ದು, ಇಲ್ಲಿನ ನಿವಾಸಿಗಳು ಆತಂಕದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

ಪಟ್ಟಣದ ಕರ್ನಲ್ ಕಂಬದ ಅಕ್ಕಪಕ್ಕದ ಜೋಗಮಠ, ಗಾಂಧಿನಗರ ಹಾಗೂ ಎಲ್ಐಸಿ ಕಚೇರಿ ಬಳಿ ಹಾದುಹೋಗಿರುವ ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬ ದೂರು ಕೇಳಿಬಂದಿದೆ. ಐಆರ್‌ಬಿ ವತಿಯಿಂದ ನಡೆದಿರುವ ಈ ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ಗುಡ್ಡವನ್ನು ಮೆಟ್ಟಿಲು ಆಕಾರದಲ್ಲಿ ಎತ್ತರ ಪ್ರದೇಶವನ್ನು ಕೊರೆದಿಲ್ಲ. ಇದರಿಂದ ಈ ಪ್ರದೇಶದ ವ್ಯಾಪ್ತಿಯ ನಿವಾಸಿಗರು ಜೀವಭಯದಿಂದ ದಿನ ದೂಡುವಂತಾಗಿದೆ. ಯಾವಾಗ ಗುಡ್ಡ ಕುಸಿದು ಬೀಳುವುದೋ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ಪಕ್ಕದ ಚರಿತ್ರಾರ್ಹ ಬ್ರಿಟಿಷ್ ಸೇನಾನಿಯೋರ್ವರ ಸ್ಮರಣಾರ್ಥ ನಿರ್ಮಾಣಗೊಂಡ ಬೃಹತ್ ಕರ್ನಲ್ ಕಂಬ ಹೆದ್ದಾರಿ ಪಕ್ಕದಲ್ಲಿದ್ದು, ಗುಡ್ಡ ಕುಸಿದರೆ ಅದರ ಅಡಿಪಾಯಕ್ಕೆ ತೊಂದರೆ ಆಗುವಸಾಧ್ಯತೆ ಇದೆ.

ಮಾಡದ ತಪ್ಪಿಗೆ ಜನತೆಗೆ ಸಂಕಷ್ಟ: ಹೊನ್ನಾವರ ಪಪಂ ಗಾಂಧಿನಗರದ ನಿವಾಸಿಗಳಿಗೆ ಯಾವುದೇ ಸಂದರ್ಭದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದ್ದಿದ್ದರಿಂದ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಅಥವಾ ಕಾಳಜಿ ಕೇಂದ್ರಕ್ಕೆ ತೆರಳಲು ಇತ್ತೀಚೆಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಗುಡ್ಡ ಕುಸಿಯುವ, ಬದುಕು ನಾಶವಾಗುವ ಭಯದಲ್ಲಿರುವ ಜನರಿಗೆ ಸಾಂತ್ವನ ಹೇಳಬೇಕಾದ ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ನೋಟಿಸ್ ನೀಡಿ ಬೆದರಿಸುತ್ತಿರುವುದು ಜನರ ಸಿಟ್ಟಿಗೆ ಕಾರಣವಾಗಿದೆ.

ಕಣ್ಣೊರೆಸುವ ತಂತ್ರ: ವರ್ಷಗಳ ಹಿಂದೆ ಪ್ರಭಾವಿ ಉದ್ದಿಮೆದಾರರೊಬ್ಬರು ರಸ್ತೆ ಪಕ್ಕದ ಗುಡ್ಡವನ್ನು ಲಂಬ ಕೋನದಲ್ಲಿ ಅಗೆದಿದ್ದರು. ಆಗ ಭಯದಲ್ಲಿ ಗುಡ್ಡದ ಮೇಲಿದ್ದ ಗಾಂಧಿನಗರದ ಕೆಲವರು ಮನೆಯಿಂದ ದೂರ ಉಳಿಯುವಂತಾಯಿತು. ಆಕ್ರೋಶಗೊಂಡ ಜನ ಶಾಸಕರನ್ನು ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಾಗ, ಎಚ್ಚರಗೊಂಡ ತಾಲೂಕು ಆಡಳಿತವು ಸ್ಥಳಕ್ಕೆ ಬಂದು ತನಿಖೆ ಮಾಡಿ ಗುಡ್ಡವನ್ನು ಕತ್ತರಿಸಿದ ವ್ಯಕ್ತಿಯಿಂದ ಭದ್ರವಾದ ತಡೆಗೊಡೆ ನಿರ್ಮಿಸಿಕೊಡುವಂತೆ ಕಾನೂನು ಕ್ರಮ ಜರುಗಿಸಿತ್ತು. ಜನರ ಕಣ್ಣೊರೆಸಲು ಮಾತ್ರ ಎಂಬಂತೆ ಖಾಸಗಿ ಕಾಮಗಾರಿ ನಡೆದಿತ್ತು. ಈಗ ಸುರಿಯುವ ಮಳೆಗೆ ಇದೇ ಜನ ಪುನಃ ಮನೆ ಬಿಟ್ಟು ದೂರ ಹೋಗುವಂತಾಗಿದೆ.

ಸೂಕ್ತ ವ್ಯವಸ್ಥೆ: ಗುಡ್ಡ ಯಾವಾಗ ಕುಸಿಯುತ್ತದೆ ಎಂದು ತಿಳಿಯುವುದಿಲ್ಲ. ನಿತ್ಯ ಜೀವಭಯದಲ್ಲೇ ಬದುಕಬೇಕು. ಸರ್ಕಾರ ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಹೊನ್ನಾವರದ ನಿವಾಸಿ ತೆರೆಜಿನ್ ವೃದ್ಧೆ ಆಗ್ರಹಿಸಿದರು.

ಜನಪ್ರತಿನಿಧಿಗಳ ಮೌನ

ಕೆಲ ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮೇಲೆ ಉರುಳಿದ ಬಂಡೆಯೊಂದರಿಂದ ಹಲವಾರು ಜನ ಗಾಯಗೊಂಡಿದ್ದರು. ಹೆದ್ದಾರಿ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿ ಕುರಿತು ಅಂದೇ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅದೇ ಸ್ಥಳದಲ್ಲಿ ಪ್ರತಿವರ್ಷವೂ ಮಣ್ಣು ಸಡಿಲಗೊಂಡು ಬಂಡೆಗಳು ಉರುಳಿ ಬೀಳುತ್ತಿವೆ. ಕೆಲ ದಿನಗಳ ಹಿಂದೆ ಇದೇ ಭಾಗದಲ್ಲಿ ನಸುಕಿನ ಜಾವ ಬಂಡೆಗಲ್ಲು ಹೆದ್ದಾರಿ ರಸ್ತೆಗೆ ಉರುಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆದರೂ ಎಚ್ಚೆತ್ತುಕೊಳ್ಳದ ಹೆದ್ದಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗಮನ ಹರಿಸದೇ ದಿನ ದೂಡುತ್ತಿದ್ದಾರೆ. ಇಷ್ಟೆಲ್ಲ ಆವಾಂತರ ನಡೆದರೂ ಜನಪ್ರತಿನಿಧಿಗಳು ಮೌನ ತಾಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Share this article