ಕೂಡ್ಲಿಗಿ: ಭಾರಿ ಮಳೆ ಸುರಿದ ಕಾರಣ ಗುಡೇಕೋಟೆ ಸಮೀಪದ ಕಸಾಪುರ ಕೆರೆಯಲ್ಲಿ ನೀರು ತುಂಬಿ ಕೆರೆಯ ಏರಿ ಮಧ್ಯಭಾಗದಲ್ಲಿ ಹಠಾತ್ ಮಣ್ಣು ಕುಸಿದು ನೀರು ಸೋರಿಕೆಯಾಗಿರುವುದರಿಂದ ಕೆರೆ ಒಡೆಯುವ ಭೀತಿ ಎದುರಾಗಿದೆ.
ಜಿಪಂ ಎಇಇ ಮಲ್ಲಿಕಾರ್ಜುನ ಕೂಡಲೇ ಬೆಳಿಗ್ಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು. ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ನೀರು ಸೋರಿಕೆ ತಡೆಗೆ ಮರಳು ಚೀಲ ಅಡ್ಡಲಾಗಿ ಹಾಕಿದರೂ ನೀರು ಸೋರುವುದು ನಿಂತಿಲ್ಲ. ಹೀಗಾಗಿ ನೀರಾವರಿ ತಜ್ಞರ ಸಲಹೆಯಂತೆ ತಡೆ ನಿಯಂತ್ರಣ ಕೆಲಸ ಭರದಿಂದ ಮುಂದುವರಿದಿದೆ. ಕಸಾಪುರ ಗ್ರಾಮಸ್ಥರು ಚಾತಕ ಪಕ್ಷಿಯಂತೆ ಕೆರೆ ಬಳಿ ಕಾಯುತ್ತಾ ಕುಳಿತ್ತಿದ್ದಾರೆ. ಯಾವುದೇ ವಾಹನಗಳು ಏರಿ ಮೇಲೆ ಬರುವುದನ್ನು ತಡೆಯುವ ಪ್ರಯತ್ನ ಗ್ರಾಮಸ್ಥರು ಮಾಡುತ್ತಾರೆ.
ಕೆರೆ ಏರಿ ಒಡೆಯಲು ತಾಲೂಕಿನಾದ್ಯಂತ ಸದ್ದು ಮಾಡುತ್ತಿರುವ ವಿಂಡ್ ಫ್ಯಾನ್‌ಗಳ ಹೊತ್ತ ಬೃಹತ್ ಲಾರಿಗಳ ಸಂಚಾರವೇ ಕಾರಣವಾಗಿದೆ. ಬೃಹತ್ ಯಂತ್ರಗಳನ್ನು ಕೆರೆ ಏರಿ ಮೇಲೆ ಸಾಗಿಸುವ ಮೂಲಕ ಭಾರಿ ಗಾತ್ರದ ವಾಹನಗಳು ಕೆರೆ ಏರಿಗೆ ದಕ್ಕೆಯಾಗಲು ಕಾರಣವೆಂದು ಗ್ರಾಮಸ್ಥರ ಆರೋಪವಾಗಿದೆ.ನೀರಾವರಿ ಇಲಾಖೆ ನಿರ್ಲಕ್ಷ್ಯ:
ಬೆಳಗಿನಿಂದಲೇ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ₹6 ಕೋಟಿ ವೆಚ್ಚದಲ್ಲಿ ಗಂಡಬೊಮ್ಮನಹಳ್ಳಿ ಎಡ, ಬಲದಂಡೆ ಕಾಲುವೆ ಮತ್ತು ಹೊಸಹಟ್ಟಿ ಬಳಿಯ ಕಾಲುವೆಗಳ ದುರಸ್ತಿಗೆ ಕ್ರಮ ಕೈಗೊಳಲಾಗಿದೆ. ಹಲವು ದಶಕಗಳ ನಂತರ ಉತ್ತಮ ಮಳೆಯಾಗಿ ಕೆರೆ, ಕಟ್ಟೆ ಭರ್ತಿಯಾಗಿರುವುದು ಸಂತಸದ ಸಂಗತಿ. ಈ ನಡುವೆ ಇಂತಹ ಘಟನೆಗಳು ಜರುಗುತ್ತಿರುವುದು ಬೇಸರ ಮೂಡಿಸಿದೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್.