ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ: ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸಂಚಾರ ಬಂದ್‌

KannadaprabhaNewsNetwork |  
Published : Jun 25, 2025, 11:47 PM IST
32 | Kannada Prabha

ಸಾರಾಂಶ

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಭೀತಿ ತಲೆದೋರಿದ ಹಿನ್ನೆಲೆಯಲ್ಲಿ ಮಂಗಳೂರು, ಕೇರಳ ಸೇರಿದಂತೆ ಭಾರತದ ನಿಲ್ದಾಣಗಳಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸಂಚಾರವನ್ನು ಮಂಗಳವಾರದಿಂದ ರದ್ದುಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಭೀತಿ ತಲೆದೋರಿದ ಹಿನ್ನೆಲೆಯಲ್ಲಿ ಮಂಗಳೂರು, ಕೇರಳ ಸೇರಿದಂತೆ ಭಾರತದ ನಿಲ್ದಾಣಗಳಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸಂಚಾರವನ್ನು ಮಂಗಳವಾರದಿಂದ ರದ್ದುಪಡಿಸಲಾಗಿದೆ.

ಮಂಗಳೂರು, ಬೆಂಗಳೂರು, ಕೇರಳ ಹಾಗೂ ದೆಹಲಿ ನಿಲ್ದಾಣಗಳ ಮೂಲಕ ಕೊಲ್ಲಿ ರಾಷ್ಟ್ರಗಳಿಗೆ ನಿತ್ಯ ವಿಮಾನ ಸಂಚಾರ ಇದೆ. ಅದರಲ್ಲೂ ಕರಾವಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲಿ ರಾಷ್ಟ್ರದ ಉದ್ಯೋಗಿಗಳಿದ್ದಾರೆ. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿತ್ಯವೂ ಏಳೆಂಟು ವಿಮಾನ, ವಾರಾಂತ್ಯದಲ್ಲಿ ಪ್ರತ್ಯೇಕ ವಿಮಾನಗಳ ಹಾರಾಟ ಇದೆ. ಕೇರಳದ ಕಣ್ಣೂರು ವಿಮಾನ ನಿಲ್ದಾಣದಿಂದಲೂ ಕೊಲ್ಲಿ ರಾಷ್ಟ್ರಗಳಿಗೆ ನಿತ್ಯ ವಿಮಾನ ಸಂಚರಿಸುತ್ತದೆ. ಈಗ ಅರಬ್‌ ರಾಷ್ಟ್ರಗಳಲ್ಲಿರುವ ಅಮೆರಿಕ ಏರ್‌ಬೇಸ್‌ಗೆ ಇರಾನ್‌ ದಾಳಿಗೆ ಮುಂದಾಗಿರುವುದರಿಂದ ಅರಬ್‌ ರಾಷ್ಟ್ರದ ಏಳು ಏರ್‌ಬೇಸ್‌ಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಯಾವುದೇ ವಿಮಾನಗಳು ಕೊಲ್ಲಿ ರಾಷ್ಟ್ರವನ್ನು ಪ್ರವೇಶಿಸುವುದು ಕಷ್ಟಸಾಧ್ಯವೆನಿಸಿದೆ.

ಸೋಮವಾರ ರಾತ್ರಿ ಕತಾರ್‌ನ ಅಮೆರಿಕ ಏರ್‌ಬೇಸ್‌ಗೆ ಇರಾನ್‌ ದಾಳಿ ನಡೆಸಿದ ಕಾರಣ ಮಂಗಳೂರಿನಿಂದ ದಮಾನ್‌ಗೆ ಹೊರಟ ಏರ್‌ ಇಂಡಿಯಾ ವಿಮಾನ ಅಲ್ಲಿ ಏರ್‌ಬೇಸ್‌ ಬಂದ್‌ ಮಾಡಿದ ಕಾರಣ ಮಸ್ಕತ್‌ಗೆ ತೆರಳಿತ್ತು. ಅಬುದಾಬಿಗೆ ಹೊರಟ ಇಂಡಿಗೋ ವಿಮಾನ ಸೌದಿ ಅರೇಬಿಯಾದಲ್ಲಿ ಇಳಿಯಲು ಅವಕಾಶ ಸಿಗದೆ ಮುಂಬೈಗೆ ಬಂದಿದೆ. ಈ ಎರಡು ವಿಮಾನಗಳು ಮಂಗಳವಾರ ಬೆಳಗ್ಗೆ ಮಂಗಳೂರಿಗೆ ವಾಪಸ್‌ ಮರಳಿವೆ.

ಎಲ್ಲ ವಿಮಾನ ರದ್ದು:

ಮಂಗಳವಾರ ಕೂಡ ಕೊಲ್ಲಿ ರಾಷ್ಟ್ರ ಮತ್ತು ಮಂಗಳೂರು ನಡುವೆ ಯಾವುದೇ ವಿಮಾನ ಬಂದುಹೋಗಿಲ್ಲ. ಅಬುದಾಬಿ-ಮಂಗಳೂರು, ದುಬೈ-ಮಂಗಳೂರು, ದುಬೈ-ಮಂಗಳೂರು, ದಮಾಮ್‌-ಮಂಗಳೂರು ವಿಮಾನಗಳು ಮಂಗಳೂರಿಗೆ ಆಗಮಿಸಿಲ್ಲ. ಅದೇ ರೀತಿ ಮಂಗಳೂರು-ದಮಾಮ್‌, ಮಂಗಳೂರು-ದುಬೈ ವಿಮಾನಗಳೂ ರದ್ದುಗೊಂಡಿವೆ. ಈ ನಡುವೆ ಮಂಗಳೂರು-ಮುಂಬೈ ನಡುವೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಮತ್ತು ಇಂಡಿಗೋ ದೇಶೀಯ ಯಾನ ಕೂಡ ನಡೆಸಿಲ್ಲ.

ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ಸಾಮಾನ್ಯವಾಗಿ ಮೂರು ಗಂಟೆ ಅವಧಿಯಲ್ಲಿ ತಲುಪಲು ಸಾಧ್ಯವಿದೆ. ಈಗ ಮಧ್ಯಪ್ರಾಚ್ಯ ರಾಷ್ಟ್ರಗಳ ಬಿಕ್ಕಟ್ಟು ಸಲುವಾಗಿ ಸುತ್ತು ಬಳಸಿ ವಿಮಾನಗಳು ಸಂಚರಿಸಬೇಕಾಗಿದೆ. ಯಾವುದೇ ಕ್ಷಣದಲ್ಲಿ ಇರಾನ್‌ನಿಂದ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರಗಳು ತಮ್ಮ ಏರ್‌ಬೇಸ್‌ನ್ನೇ ಬಂದ್‌ ಮಾಡಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿವೆ.

ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಪರಿಸ್ಥಿತಿಯಿಂದಾಗಿ ಕರಾ‍ವಳಿಯ ಮಂದಿ ಸೇರಿದಂತೆ ಭಾರತದಿಂದ ಉದ್ಯೋಗಕ್ಕೆ ತೆರಳುವವರಿಗೆ ಅಲ್ಲಿಂದ ಇಲ್ಲಿಗೆ ಬರುವವರಿಗೆ ತೊಂದರೆಯಾಗಿದೆ.

ಕೊಲ್ಲಿ ರಾಷ್ಟ್ರಗಳಿಗೆ ತೆರಳುವವರು ಹಾಗೂ ಟಿಕೆಟ್‌ ಬುಕ್‌ ಮಾಡುವವರು ಆಯಾ ವಿಮಾನಗಳ ಸಿಬ್ಬಂದಿ ಜೊತೆ ಸಂಚಾರ ಖಚಿತಪಡಿಸಿಕೊಂಡೇ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಮಂಗಳೂರು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ