ವಿದ್ಯಾರ್ಥಿಯ ಸಾಮರ್ಥ್ಯ ಆಧರಿಸಿ ಬೋಧಿಸಿದರೆ ಯಶಸ್ಸು

KannadaprabhaNewsNetwork |  
Published : Jun 25, 2025, 11:47 PM IST
ಫೋಟೋ : ೧೫ಕೆಎಂಟಿ_ಜೆಯುಎನ್_ಕೆಪಿ೧ : ಪ್ರಗತಿ ವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ತರಬೇತಿ ಕಾರ್ಯಾಗಾರ ಜರುಗಿತು. ಸಂಪನ್ಮೂಲ ವ್ಯಕ್ತಿ ಶ್ರೀಕೃಷ್ಣ ಹೆಗಡೆ, ಎಸ್.ವಿ.ಹೆಗಡೆ, ಜಿ.ಎಂ.ಭಟ್ ಇನ್ನಿತರರು ಇದ್ದರು. | Kannada Prabha

ಸಾರಾಂಶ

ದೇಶ ಕಟ್ಟುವ ಹೊಣೆ ಹೊತ್ತಿರುವ ಶಿಕ್ಷಕವೃಂದ ಸದಾ ಅಧ್ಯಯನಶೀಲರಾಗಿದ್ದು, ಜ್ಞಾನ ಸಂಪಾದನೆಯಲ್ಲಿ ತೊಡಗಿರಬೇಕು

ಕುಮಟಾ: ದೇಶ ಕಟ್ಟುವ ಹೊಣೆ ಹೊತ್ತಿರುವ ಶಿಕ್ಷಕವೃಂದ ಸದಾ ಅಧ್ಯಯನಶೀಲರಾಗಿದ್ದು, ಜ್ಞಾನ ಸಂಪಾದನೆಯಲ್ಲಿ ತೊಡಗಿರಬೇಕು ಎಂದು ಚಿಂತಕ ಶ್ರೀಕೃಷ್ಣ ಹೆಗಡೆ ಬೆಂಗಳೂರು ಹೇಳಿದರು.

ತಾಲೂಕಿನ ಮೂರೂರು-ಕಲ್ಲಬ್ಬೆ ವಿದ್ಯಾನಿಕೇತನ ಸಂಸ್ಥೆಯ ಪ್ರಗತಿ ವಿದ್ಯಾಲಯದಲ್ಲಿ "ಶಿಕ್ಷಕ ಶಿಕ್ಷಣ ಹಾಗೂ ಸಾಮಾಜಿಕ ಅರಿವು ಒಂದು ಚಿಂತನೆ " ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಜ್ಞಾನಪ್ರಸಾರ ಕಾರ್ಯದಲ್ಲಿ ವಿದ್ಯಾರ್ಥಿಯ ಮನಸ್ಥಿತಿ, ಸಾಮರ್ಥ್ಯ, ಸನ್ನಿವೇಶಗಳನ್ನು ಅರಿತು ಅದನ್ನು ಧಾರೆಯೆರೆಯಬೇಕು. ಪ್ರೀತಿ, ವಿಶ್ವಾಸ, ಕಾಳಜಿಯ ಜತೆಗೆ ವಿದ್ಯಾರ್ಥಿಯ ಸಾಮರ್ಥ್ಯ ಆಧರಿಸಿ ಬೋಧಿಸಿದರೆ ಶಿಕ್ಷಕನಾಗಿ ಯಶಸ್ಸು ಸಾಧ್ಯ ಎಂದು ಹೇಳಿದರು.ಶಿಕ್ಷಕ ಸಮಾಜದ ಅತಿಮುಖ್ಯ ಭಾಗವಾಗಿದ್ದು, ಸದಾ ಸಾಮಾಜಿಕ ಕಾಳಜಿ ಹೊಂದಿರಬೇಕು. ಸಾಮಾಜಿಕ ಚಿಂತನೆಯೊಂದಿಗೆ ವೃತ್ತಿ ಬದುಕಿನ ಸಾರ್ಥಕತೆಯನ್ನು ಪಡೆದುಕೊಂಡಾಗ ಸಮಾಜ ಶಿಕ್ಷಕನನ್ನು ಗುರುತಿಸಿ ಗೌರವಿಸುತ್ತದೆ. ಮಕ್ಕಳು ಸದಾ ಶಿಕ್ಷಕನನ್ನು ಅನುಸರಿಸುವುದರಿಂದ ಶಿಕ್ಷಕ ಜವಾಬ್ದಾರಿಯುತ ನಡೆ ಹೊಂದಿರಬೇಕು. ಆದರ್ಶ ಚಿಂತನೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕು. ಹಿಂಜರಿಕೆ, ಕೀಳರಿಮೆ, ಆಲಸ್ಯ ಪ್ರವೃತ್ತಿಗಳಿಂದ ದೂರವಿದ್ದು, ನಿರಂತರ ಓದು, ಅನುಭವಿಗಳ ಒಡನಾಟ, ಸತ್ ಚಿಂತನೆ, ಸದಾಚಾರ, ಸೇವಾ ಮನೋಭಾವನೆ, ಸಾಮಾಜಿಕ ಕಾಳಜಿಯಿಂದ ಸದಾ ಕ್ರಿಯಾಶೀಲರಾಗಿರಬೇಕು ಎಂದು ಹೇಳಿದರು.

ಬಳಿಕ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ, ಶಿಕ್ಷಕನ ಜವಾಬ್ದಾರಿಗಳು, ಆಲೋಚನೆಗಳು, ಚಿಂತನೆಗಳ ಕುರಿತಾಗಿ ಅನುಭವ ಹಂಚಿಕೊಂಡರು. ವಿವಿಧ ಚಟುವಟಿಕೆ-ದೃಷ್ಟಾಂತಗಳ ಮೂಲಕ ಸಮಾಜದಲ್ಲಿ ಶಿಕ್ಷಕರ ಜವಾಬ್ದಾರಿಯನ್ನು ಜಾಗ್ರತಗೊಳಿಸಿ ತರಬೇತಿ ನೀಡಿದರು.

ವಿದ್ಯಾನಿಕೇತನ ಸಂಸ್ಥೆಯ ಎಸ್.ವಿ. ಹೆಗಡೆ ಭದ್ರನ್, ಪಿಯು ಪ್ರಾಚಾರ್ಯ ಜಿ.ಎಂ. ಭಟ್, ಪ್ರೌಢಶಾಲೆ ಮುಖ್ಯಶಿಕ್ಷಕ ವಿ.ಎಸ್. ಗೌಡ, ವಿವೇಕ ಆಚಾರಿ, ನಾಗವೇಣಿ ಭಟ್ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಶಿಕ್ಷಣ ವಿಭಾಗದ ಸಂಚಾಲಕ ಟಿ.ಆರ್. ಜೋಶಿ, ವಸತಿ ನಿಲಯ ಸಂಚಾಲಕ ಐ.ಪಿ. ಭಟ್, ಡಾ. ಎಸ್.ವಿ. ಭಟ್ ಇದ್ದರು. ಶಿಕ್ಷಕ ಜಿ.ಆರ್. ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಚಿತ್ರಾ ಹೆಗಡೆ ವಂದಿಸಿದರು. ಜಯಶ್ರೀ ಭಟ್ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ