ಸಿಎಂ ಕೊಟ್ಟ ಟಾಸ್ಕ್‌ ಗೆದ್ದ ಶಾಸಕ ಎಆರ್‌ಕೆ!

KannadaprabhaNewsNetwork |  
Published : Jun 25, 2025, 11:47 PM ISTUpdated : Jun 26, 2025, 02:21 PM IST
Siddaramaiah

ಸಾರಾಂಶ

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿಗೆ ಜೂ.೨೬ರ ಚುನಾವಣೆ ನಡೆಯಲಿದ್ದು, ಚುನಾವಣೆಗೂ ಮುನ್ನವೇ ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರು ಕಾರ್ಯಕರ್ತರೊಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಟಾಸ್ಕ್‌ ಗೆದ್ದಿದ್ದಾರೆ.

ದೇವರಾಜು ಕಪ್ಪಸೋಗೆ

 ಚಾಮರಾಜನಗರ :  ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿಗೆ ಜೂ.26 ರ ಚುನಾವಣೆ ನಡೆಯಲಿದ್ದು, ಚುನಾವಣೆಗೂ ಮುನ್ನವೇ ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರು ಕಾರ್ಯಕರ್ತರೊಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಟಾಸ್ಕ್‌ ಗೆದ್ದಿದ್ದಾರೆ.

ಈ ಬಾರಿ ಶತಾಯಗತಾಯ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಎಂಸಿಡಿಸಿಸಿಸಿಬಿ) ಅಧಿಕಾರ ಹಿಡಿಯಲೇಬೇಕು ಎಂದು ಪಣತೊಟ್ಟು ಕಾರ್ಯಕರ್ತರ ಬದಲು ಶಾಸಕರನ್ನೇ ಕಣಕ್ಕಿಳಿಸಿದ್ದು, ಚಾಮರಾಜನಗರ ಕ್ಷೇತ್ರದಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ ಕ್ಷೇತ್ರದಿಂದ ಶಾಸಕ ಗಣೇಶ್‌ ಪ್ರಸಾದ್‌ ಮತ್ತು ಕೊಳ್ಳೇಗಾಲ ಕ್ಷೇತ್ರದಿಂದ ಮಾಜಿ ಶಾಸಕ ಆರ್‌.ನರೇಂದ್ರ ಅವರು ಕಣಕ್ಕಿಳಿದಿದ್ದಾರೆ. ಆದರೆ, ಯಳಂದೂರು ಕ್ಷೇತ್ರದಿಂದ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗುವ ಅವಕಾಶವಿದ್ದರೂ ಕೊಳ್ಳೇಗಾಲ ಶಾಸಕ ಎ.ಆರ್‌.ಕೃಷ್ಣಮೂರ್ತಿ ಪಕ್ಷದ ಕಾರ್ಯಕರ್ತ ವೈ.ಎಂ.ಜಯರಾಮು ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಅಧಿಕಾರ ತ್ಯಾಗ ಮಾಡುವುದಲ್ಲದೆ ಎರಡು ಜಿಲ್ಲೆಯ ಪೈಕಿ ಯಳಂದೂರು ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗುವಂತೆ ನೋಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಮೈಸೂರು, ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯ ಚುನಾವಣೆ ಇದಾಗಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮತ್ತು ಚಾ.ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ ಅವರ ಸ್ವಕ್ಷೇತ್ರದಲ್ಲೂ ಚುನಾವಣೆ ನಡೆಯುತ್ತಿದೆ. ಉಳಿದಂತೆ ಚಾ.ನಗರ ಕ್ಷೇತ್ರದಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆ ಕ್ಷೇತ್ರದಿಂದ ಶಾಸಕ ಗಣೇಶ್‌ ಪ್ರಸಾದ್‌ ಮತ್ತು ಕೊಳ್ಳೇಗಾಲ ಕ್ಷೇತ್ರದಿಂದ ಮಾಜಿ ಶಾಸಕ ಆರ್‌.ನರೇಂದ್ರ ಅವರೇ ಅಭ್ಯರ್ಥಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎಂಸಿಡಿಸಿಸಿಬಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಷ್ಠೆಗೆ ಬಿದ್ದಿರುವುದರಿಂದ ಶಾಸಕರು, ಮಾಜಿ ಶಾಸಕರೇ ಚುನಾವಣೆಯಲ್ಲಿ ಕಣಕ್ಕಿಳಿಸಿರುವುದರಿಂದ ಕಾರ್ಯಕರ್ತರಿಗೆ ಅವಕಾಶ ಕೈ ತಪ್ಪಿದಂತಾಗಿದೆ.

ಶಾಸಕರಿಗೆ ಶಾಸಕ ಸ್ಥಾನದ ಜೊತೆಗೆ ಎಂಸಿಡಿಸಿಸಿಬಿ ನಿರ್ದೇಶಕ ಸ್ಥಾನವನ್ನು ಸಿಕ್ಕಿದಂತಾಗುತ್ತದೆ ಎಂದು ಕಾರ್ಯಕರ್ತರು ಒಳಗೊಳಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೂ ಹಳೇ ಮೈಸೂರು ಪ್ರಾಂತ್ಯದ ಹಿರಿಯ ದಲಿತ ನಾಯಕ ಹಾಗೂ ಶಾಸಕ ಎ.ಆರ್‌.ಕೃಷ್ಣಮೂರ್ತಿ ಅವರು ಮಾತ್ರ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವುದಲ್ಲದೆ. ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಮುಖ್ಯಮಂತ್ರಿ ನೀಡಿದ್ದ ಟಾಸ್ಕ್ ಅನ್ನು ಚುನಾವಣೆಗೂ ಮುನ್ನವೇ ಗೆದ್ದುಕೊಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕ್ಷೇತ್ರದ ಜನತೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಾನು ಈಗಾಗಲೇ ಶಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇದರ ನಡುವೆಯೂ ಎಂಸಿಡಿಸಿಸಿಬಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವಂತೆ ಸೂಚನೆ ಬಂದಿತ್ತು. ನಾನು ನಮ್ಮ ಕಾರ್ಯಕರ್ತರೊಬ್ಬರಿಗೆ ಅವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲ ನಮ್ಮ ಬೆಂಬಲಿಗರು ನನ್ನ ಮಾತಿಗೆ ಮನ್ನಣೆ ನೀಡಿ ಅವಿರೋಧ ಆಯ್ಕೆಗೂ ಸಹಕರಿಸಿದ್ದಾರೆ. -ಎ.ಆರ್‌.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ 

PREV
Read more Articles on

Recommended Stories

ಕರಾವಳಿ, ಮಲೆನಾಡದಲ್ಲಿ ಗಾಳಿಸಹಿತ ಜಡಿ ಮಳೆ : ಶಾಲೆಗಳಿಗೆ ಇಂದು ರಜೆ
ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ