ಕಟ್ಟಡ ನಕ್ಷೆ ಇಲ್ಲದೆ ಮನೆ ಕಟ್ಟಬೇಡಿ : ಡಿ.ಕೆ. ಶಿವಕುಮಾರ್‌

KannadaprabhaNewsNetwork |  
Published : Jun 25, 2025, 11:47 PM ISTUpdated : Jun 26, 2025, 06:45 AM IST
DKS And KJ George

ಸಾರಾಂಶ

ಕಟ್ಟಡ ನಕ್ಷೆ ಪಡೆಯದ, ಸ್ವಾಧೀನ ಪ್ರಮಾಣಪತ್ರವಿಲ್ಲದ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್‌ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. ಈ ಆದೇಶದಿಂದ ಜನರಿಗೆ ಎದುರಾಗುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲಾಗುವುದು - ಡಿ.ಕೆ. ಶಿವಕುಮಾರ್‌  

  ಬೆಂಗಳೂರು :  ಕಟ್ಟಡ ನಕ್ಷೆ ಪಡೆಯದ, ಸ್ವಾಧೀನ ಪ್ರಮಾಣಪತ್ರವಿಲ್ಲದ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್‌ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. ಈ ಆದೇಶದಿಂದ ಜನರಿಗೆ ಎದುರಾಗುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ಇಡೀ ದೇಶಕ್ಕೆ ಅನ್ವಯವಾಗಲಿದೆ. ಅದರಿಂದ ಜನರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಲಿದೆ. ಸದ್ಯ ರಾಜ್ಯದಲ್ಲಿ 2.50 ಲಕ್ಷ ಜನ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಪಡೆಯದೇ ಮನೆ ಕಟ್ಟಿಕೊಂಡಿರುವ ಮಾಹಿತಿಯಿದೆ. ಅವರು ವಿದ್ಯುತ್‌ ಮತ್ತು ನೀರು ಸಂಪರ್ಕಕ್ಕೆ ಅರ್ಜಿ ಹಾಕಿದ್ದಾರೆ. ಅವರಿಗೆಲ್ಲ ಇದೀಗ ವಿದ್ಯುತ್‌ ಮತ್ತು ನೀರು ಸಂಪರ್ಕ ನೀಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ ಆದೇಶ ವಿಚಾರದಲ್ಲಿ ಸಾರ್ವಜನಿಕರಿಗೆ ಹೇಗೆ ನೆರವಾಗಬಹುದು ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಕೇಳಿದ್ದೇನೆ ಎಂದು ಹೇಳಿದರು.

ಕೆಲವರು ಈಗಾಗಲೇ ವಿದ್ಯುತ್‌ ಪೂರೈಕೆ ಸಂಸ್ಥೆಗಳಿಗೆ ಠೇವಣಿ ಪಾವತಿಸಿದ್ದಾರೆ. ಆ ವಿಚಾರವಾಗಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳ ಜತೆಗೂ ಚರ್ಚೆ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಈ ವಿಚಾರವಾಗಿ ಯಾವ ರೀತಿ ಬಗೆಹರಿಸಲಿದ್ದಾರೆ ಎಂಬ ಮಾಹಿತಿ ಪಡೆಯುತ್ತೇವೆ. ಇನ್ನು ಮುಂದೆ ಕಟ್ಟಡ ನಕ್ಷೆ ಪಡೆಯದೆ ಯಾರೂ ಮನೆ ನಿರ್ಮಿಸಬೇಡಿ. ಸುಪ್ರೀಂಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆ ಸಾಹಸಕ್ಕೆ ಕೈ ಹಾಕಬಾರದು. ಈ ವಿಚಾರದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದರೆ ಸಕ್ರಮ ಮಾಡುವುದು ಕಷ್ಟವಾಗಲಿದೆ ಎಂದು ತಿಳಿಸಿದರು.

ಸುಪ್ರೀಂಕೋರ್ಟ್‌ ಆದೇಶ ಬೇರೆ ರಾಜ್ಯಗಳಲ್ಲಿ ಜಾರಿಯಾಗಿಲ್ಲ, ನಮ್ಮ ರಾಜ್ಯದಲ್ಲಿ ಆತುರವೇಕೆ ಎಂಬ ಪ್ರಶ್ನೆಗೆ ಉತ್ತರಿಸಿ, ನ್ಯಾಯಾಲಯದ ಆದೇಶ ಬಂದ ನಂತರ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಲಾಗಿತ್ತು.

ಹೀಗಿರುವಾಗ ಇದು ಆತುರದ ನಿರ್ಧಾರವಾಗುವುದಿಲ್ಲ. ಸುಪ್ರೀಂಕೋರ್ಟ್‌ ಆದೇಶ ಪಾಲಿಸದಿದ್ದರೆ ಸಮಸ್ಯೆಯಾಗಲಿದ್ದು, ಆಗ ಅಧಿಕಾರಿಗಳು ನಮ್ಮ ಮೇಲೆ ಹಾಕುತ್ತಾರೆ. ಹೀಗಾಗಿ ಸುಪ್ರೀಂಕೋರ್ಟ್‌ ಆದೇಶ ಪಾಲಿಸುವ ಜತೆಗೆ ಅದರಿಂದ ಜನರಿಗಾಗುವ ಸಮಸ್ಯೆಗಳನ್ನು ಕಾನೂನು ಚೌಕಟ್ಟಿನಲ್ಲಿ ನಿವಾರಿಸುವ ಕೆಲಸ ಮಾಡುತ್ತೇವೆ ಎಂದರು.

ಅಕ್ರಮ-ಸಕ್ರಮ ಬಿಲ್‌ ಕುರಿತು ಪ್ರತಿಕ್ರಿಯಿಸಿ, ಅಕ್ರಮ-ಸಕ್ರಮ ಬಿಲ್‌ಗೆ ಸುಪ್ರೀಂಕೋರ್ಟ್‌ ತಡೆ ಹಿಡಿದಿದೆ. ನಮ್ಮ ಸರ್ಕಾರ ಎ ಖಾತಾ, ಬಿ ಖಾತಾ ಸಮಸ್ಯೆ ಬಗೆಹರಿಸಲು ಚರ್ಚೆ ಮಾಡುತ್ತಿದೆ. ಅಲ್ಲದೆ, 110 ಹಳ್ಳಿಗಳಿಗೆ ಜಲಮಂಡಳಿಯಿಂದ ನೀರಿನ ಸಂಪರ್ಕ ನೀಡಲಾಗುತ್ತಿದೆ. ಆದರೆ, ಸುಪ್ರೀಂಕೋರ್ಟ್‌ ತೀರ್ಪಿನಿಂದ ಜಲಮಂಡಳಿಗೂ ಸಮಸ್ಯೆಯಾಗಿದೆ. ಕಳೆದ ವರ್ಷದ ಜೂನ್‌ನಲ್ಲಿ 39 ಸಾವಿರ ನೀರಿನ ಸಂಪರ್ಕ ನೀಡಲಾಗಿತ್ತು, ಈ ವರ್ಷ ಕೇವಲ 300 ಸಂಪರ್ಕ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

PREV
Read more Articles on

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ