ರೈತರಲ್ಲಿ ಮಂದಹಾಸ ಮೂಡಿಸಿದ 239 ಕೆರೆ ತುಂಬಿಸುವ ಯೋಜನೆ

KannadaprabhaNewsNetwork |  
Published : Jun 25, 2025, 11:47 PM IST
ಫೋಟೋ : 25ಎಚ್‌ಎನ್‌ಎಲ್6 | Kannada Prabha

ಸಾರಾಂಶ

ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಮಂತ್ರಿಗಳ ಸಮ್ಮುಖದಲ್ಲಿ ಈ ಎರಡೂ ಯೋಜನೆಗಳು ಉದ್ಘಾಟನೆಯಾಗಿವೆ.

ಮಾರುತಿ ಶಿಡ್ಲಾಪೂರಹಾನಗಲ್ಲ: ವರದಾ ನದಿಯ ಹರಿವು ಹೆಚ್ಚಾಗಿದ್ದರಿಂದ ಬಾಳಂಬೀಡ ಹಾಗೂ ಹಿರೇಕಾಂಸಿ ಏತ ನೀರಾವರಿ ಯೋಜನೆಗಳು ತಾಲೂಕಿನ 239 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಮಂತ್ರಿಗಳ ಸಮ್ಮುಖದಲ್ಲಿ ಈ ಎರಡೂ ಯೋಜನೆಗಳು ಉದ್ಘಾಟನೆಯಾಗಿವೆ.

ಹಿರೇಕಾಂಸಿ ಏತ ನೀರಾವರಿ ಯೋಜನೆ 2022ರಲ್ಲಿಯೇ ಪೂರ್ಣಗೊಂಡು ಕೆರೆಗಳಿಗೆ ನೀರು ಹರಿಸುವ ಕಾರ್ಯ ಆರಂಭಿಸಿದೆ. ಬಾಳಂಬೀಡ ಏತ ನೀರಾವರಿ ಯೋಜನೆ ಕಳೆದ ಕೃಷಿ ವರ್ಷದಲ್ಲಿಯೇ ಪ್ರಾಯೋಗಿಕವಾಗಿ ನೀರು ಹರಿಸಿ ಕೆರೆಗಳನ್ನು ತುಂಬಿಸಿ ರೈತರಲ್ಲಿ ಕೃಷಿಯ ವಿಶ್ವಾಸ ಮೂಡಿಸಿದೆ. ಹಿರೇಕಾಂಶಿ ಏತ ನೀರಾವರಿ ಕಳೆದ 2022ರಿಂದಲೇ 77 ಕೆರೆಗಳಿಗೆ ನೀರು ತುಂಬಿಸುತ್ತಿದೆ.

ಬಾಳಂಬೀಡ ಏತ ನೀರಾವರಿಯಿಂದ ತಾಲೂಕಿನ 87 ಗ್ರಾಮಗಳ 162 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿದೆ. ಮೊದಲ ಹಂತದಲ್ಲಿ 40 ಕೆರೆಗಳಿಗೆ ನೀರು ಹರಿಯುತ್ತಿದೆ. ಒಟ್ಟು ಈ ಕೆರೆಗಳಿಗೆ 1780 ಮಿಲಿಯನ್ ಕ್ಯುಬಿಕ್ ಅಡಿ ನೀರು ತುಂಬಿಸಬಹುದಾಗಿದ್ದು, ಈ ಏತ ನೀರಾವರಿ ಯೋಜನೆಯಿಂದ 1335 ಮಿಲಿಯನ್ ಕ್ಯುಬಿಕ್ ಅಡಿ ತುಂಬಿಸಲಾಗುತ್ತಿದೆ. ಒಟ್ಟು 232 ಕಿಮೀ ಉದ್ದದ ಪೈಪ್‌ಲೈನ್ ಮೂಲಕ ಈ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.ಹಿರೇಕಾಂಸಿ ಏತ ನೀರಾವರಿ ಯೋಜನೆ ಗೊಂದಿ ಗ್ರಾಮದ ಬಳಿ ವರದಾ ನದಿಗೆ ಬ್ರಿಡ್ಜ್‌ ಕಟ್ಟಿ ಅಲ್ಲಿಂದ ನೀರೆತ್ತುವ ಕಾರ್ಯವಾಗಿದೆ. 9 ಗ್ರಾಮಗಳ 77 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಈ 77 ಕೆರೆಗಳು 439 ಮಿಲಿಯನ್ ಕ್ಯುಬಿಕ್ ಅಡಿ ನೀರು ತುಂಬಿಸುವ ಸಾಮರ್ಥ್ಯ ಹೊಂದಿವೆ. ಆದರೆ ಈ ಯೋಜನೆಯಿಂದ 329 ಮಿಲಿಯನ್ ಕ್ಯುಬಿಕ್ ಅಡಿ ನೀರು ತುಂಬಿಸಲಾಗುತ್ತಿದೆ. 64 ಕಿಮೀ ಉದ್ದದ ಪೈಪ್‌ಲೈನ್ ಮೂಲಕ ಈ ಕೆರೆಗಳಿಗೆ ನೀರು ಹರಿಯುತ್ತದೆ. ತಾಲೂಕಿನಲ್ಲಿ ಕೃಷಿ ಹಾಗೂ ತೋಟಗಾರಿಕೆಯ 50 ಸಾವಿರ ಹೆಕ್ಟೇರ್‌ಗೂ ಅಧಿಕ ಭೂಮಿ ಹೊಂದಿದೆ. ಈ ಎರಡು ನೀರಾವರಿ ಯೋಜನೆಗಳನ್ನು ಅವಲಂಬಿಸಿ ಬಹುತೇಕ ರೈತರು ತೋಟಗಾರಿಕೆಗೆ, ಅದರಲ್ಲೂ ಅಡಕೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಇವು ತಾಲೂಕಿನ ನೀರಾವರಿಗೆ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಕೃಷಿಕರು ಅದರಲ್ಲೂ ತೋಟಗಾರಿಕೆ ಕೃಷಿಯಲ್ಲಿ ತೊಡಗಿದವರಿಗೆ ಜೀವನದಿಯಾಗಿವೆ. ಈ ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಹೆಚ್ಚಿ ಕೃಷಿಕರ ಕೊಳವೆಬಾವಿಗಳಿಗೆ ಕೊರತೆ ಇಲ್ಲದಂತೆ ಬೇಸಿಗೆಗೆ ನೀರು ಸಂಗ್ರಹವಾಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ನೀರಿನ ಕೊರತೆ ಆಗದು. ಮಳೆಗಾಲ ಮುಗಿಯುವವರೆಗೆ, ವರದಾ ನದಿಯಲ್ಲಿ ನೀರಿನ ಹರಿವು ಇರುವವರೆಗೆ ಕೆರೆಗಳ ನೀರು ಕಡಿಮೆಯಾದಂತೆ ನೀರು ತುಂಬಿಸುತ್ತಲೇ ಇರುತ್ತಾರೆ. ನೂರು ದಿನ ನೀರು ಹರಿಸುವ ಯೋಜನೆ ಇದಾಗಿದ್ದರೂ ರೈತರ ಅನುಕೂಲಕ್ಕಾಗಿ ನದಿಯಲ್ಲಿ ನೀರು ಇರುವ ಸಂದರ್ಭಗಳನ್ನು ಬಳಸಿಕೊಂಡು ಒಟ್ಟಾರೆ ಮಳೆಗಾಲವಿಡೀ ನೀರು ತುಂಬಿಸುವ ಉದ್ದೇಶ ಈ ಯೋಜನೆಗಳದ್ದಾಗಿದೆ. ತಾಲೂಕಿಗೆ ಇನ್ನೂ ಕೂಸನೂರ, ನರೇಗಲ್ಲ ಏತ ನೀರಾವರಿ ಯೋಜನೆಗಳ ಅನುಷ್ಠಾನ ಮಾಡುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಸರ್ಕಾರದ ಮೊರೆ ಹೋಗಿದ್ದಾರೆ. ಇದರಿಂದ ತಾಲೂಕಿನ ಬಹುತೇಕ ಕೃಷಿ ಭೂಮಿ ನೀರಾವರಿಗೆ ಒಳಪಡಲಿದೆ.

ಸಮರ್ಪಕವಾಗಿ ಅನುಷ್ಠಾನ: ತಾಲೂಕಿನಲ್ಲಿ ಬಾಳಂಬೀಡ ಮತ್ತು ಹಿರೇಕಾಂಸಿ ಏತ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅಚ್ಚುಕಟ್ಟು ಪ್ರದೇಶದ ಕೆರೆಗಳನ್ನು ತುಂಬಿಸಲಾಗುತ್ತಿದೆ. ಬಸಾಪುರ ಏತ ನೀರಾವರಿ ಯೋಜನೆ ಪುನರಾರಂಭಿಸಲಾಗಿದೆ. ತಿಳವಳ್ಳಿ ಹೊಂಕಣ ನೀರಾವರಿ ಯೋಜನೆಗಳ ಪಂಪ್ ಕೆಲವೇ ದಿನಗಳಲ್ಲಿ ಆರಂಭಿಸಿ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಲೋಪವಾಗದು: ಬಾಳಂಬೀಡ ಹಾಗೂ ಹಿರೇಕಾಂಸಿ ಏತ ನೀರಾವರಿ ಯೋಜನೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಾಲೂಕಿನ 239 ಕೆರೆಗಳಿಗೆ ನೀರು ತುಂಬಿಸಲು ಆರಂಭವಾಗಿದೆ. ಇದು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದ್ದು, ಕೊರತೆ ಇಲ್ಲದಂತೆ ನೀರು ತುಂಬಿಸುವಲ್ಲಿ ಯಾವುದೇ ಲೋಪವಾಗದು ಎಂದು ಏತ ನೀರಾವರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಕ್ತಪ್ರಹ್ಲಾದ ಶೆಟ್ಟಿ ತಿಳಿಸಿದರು.ವರದಾ ಬೇಡ್ತಿ ಜೋಡಣೆ ಅಗತ್ಯಬೇಸಿಗೆಯಲ್ಲಿ ವರದಾ ನದಿ ಬತ್ತುತ್ತದೆ. ಆ ಅವಧಿಯಲ್ಲಿ ನೀರಿಗೆ ಬರ ಉಂಟಾಗುತ್ತದೆ. ಏತ ನೀರಾವರಿ ಯೋಜನೆಗೂ ಸಂಕಷ್ಟ ತಲೆದೋರುವುದು. ಇದಕ್ಕೆ ಶಾಶ್ವತ ಪರಿಹಾರವೆಂದರೆ ವರದಾ- ಬೇಡ್ತಿ ನದಿ ಜೋಡಣೆ. ಇದು ಸಾಕಾರವಾದರೆ ಇಡೀ ತಾಲೂಕು ನೀರಾವರಿಯಾಗುತ್ತದೆ. ಆಗ ಸಂಕಷ್ಟಗಳೆಲ್ಲ ದೂರವಾಗುತ್ತವೆ ಎಂಬುದು ರೈತರ ಕನಸಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ