ಬರಗಾಲದ ಭೀತಿ, ಜಾನುವಾರು ಮಾರುತ್ತಿರುವ ಬಡ ರೈತರು

KannadaprabhaNewsNetwork |  
Published : Jul 03, 2026, 02:15 AM IST
2ಎಚ್‌ವಿಆರ್‌1, 1ಎ | Kannada Prabha

ಸಾರಾಂಶ

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಬರಗಾಲದ ಕರಾಳ ಛಾಯೆ ದಿನದಿಂದ ದಿನಕ್ಕೆ ದಟ್ಟವಾಗುತ್ತಿದೆ. ಮಳೆಯಿಲ್ಲದೆ ಕಂಗಾಲಾಗಿರುವ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ರೈತರು ಬರಗಾಲದ ಭೀಕರತೆಯನ್ನು ಊಹಿಸಿಕೊಂಡು ಜಾನುವಾರುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿವೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಬರಗಾಲದ ಕರಾಳ ಛಾಯೆ ದಿನದಿಂದ ದಿನಕ್ಕೆ ದಟ್ಟವಾಗುತ್ತಿದೆ. ಮಳೆಯಿಲ್ಲದೆ ಕಂಗಾಲಾಗಿರುವ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ರೈತರು ಬರಗಾಲದ ಭೀಕರತೆಯನ್ನು ಊಹಿಸಿಕೊಂಡು ಜಾನುವಾರುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿವೆ.

ಹೊರೆಯಾಗುತ್ತಿರುವ ಉಳುಮೆ ಎತ್ತುಗಳು

ಈಗಾಗಲೇ ಬಿದ್ದ ಅಲ್ಪಸ್ವಲ್ಪ ಮಳೆ, ತೇವಾಂಶದಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಬಿತ್ತನೆ ಮುಗಿದ ತಕ್ಷಣವೇ ಸಣ್ಣ ಮತ್ತು ಅತಿಸಣ್ಣ ರೈತರು ತಮ್ಮ ಉಳುಮೆ ಎತ್ತುಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಜಮೀನಿನಲ್ಲಿ ಪ್ರಸ್ತುತ ಯಾವುದೇ ಕೆಲಸವಿಲ್ಲದಿರುವುದು ಮತ್ತು ಮುಂದಿನ ದಿನಗಳಲ್ಲಿ ತೀವ್ರ ಮೇವಿನ ಕೊರತೆ ಎದುರಾಗುವ ಮುನ್ಸೂಚನೆ ಇರುವುದರಿಂದ ಎತ್ತುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡು ಸಾಕುವುದು ಬಡ ರೈತರಿಗೆ ಆರ್ಥಿಕವಾಗಿ ಭರಿಸಲಾಗದ ಹೊರೆಯಾಗಿ ಪರಿಣಮಿಸಿದೆ.

ಹೊರೆಯಾಗುವ ಆತಂಕ: ಈಗ ಬಿತ್ತನೆ ಏನೋ ಮುಗಿದಿದೆ, ಆದರೆ ಮಳೆಯಾಗದಿದ್ದರೆ ಬೆಳೆ ಕೈಗೆ ಬರುವುದಿಲ್ಲ. ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ಮುಂದಿನ ಮುಂಗಾರು ಹಂಗಾಮು ಆರಂಭವಾಗುವವರೆಗೆ, ಅಂದರೆ ಇನ್ನೂ ಸುಮಾರು 8ರಿಂದ 10 ತಿಂಗಳುಗಳ ಕಾಲ ಜಾನುವಾರುಗಳಿಗೆ ಮೇವು ಮತ್ತು ಕುಡಿಯಲು ನೀರು ಒದಗಿಸುವುದು ಕಷ್ಟಕರ ಎಂಬುದು ಬಹುತೇಕ ರೈತರ ಅಳಲಾಗಿದೆ. ಗ್ರಾಮೀಣ ಭಾಗದಲ್ಲಿ ಹಸಿರು ಮೇವಿರಲಿ, ಒಣ ಮೇವಿನ ಬೆಲೆಯೂ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಸದಸ್ಯರ ಹೊಟ್ಟೆ ತುಂಬಿಸುವುದೋ ಅಥವಾ ಮೂಕಪ್ರಾಣಿಗಳನ್ನು ಸಾಕುವುದು ಎಂಬ ಗೊಂದಲದಲ್ಲಿ ರೈತರು ಬೇಸರದಲ್ಲೇ ಉಳುಮೆ ಎತ್ತುಗಳನ್ನು ಜಾನುವಾರು ಸಂತೆಗೆ ತರುತ್ತಿದ್ದಾರೆ.

ಬೆಲೆಯಲ್ಲಿ ಕುಸಿತವಿಲ್ಲ: ಉತ್ತರ ಕರ್ನಾಟಕದ ಪ್ರಮುಖ ಜಾನುವಾರು ವ್ಯಾಪಾರ ಕೇಂದ್ರವಾದ ಹಾವೇರಿ ಸಂತೆಯಲ್ಲಿ ಕಳೆದ ಎರಡು ವಾರಗಳಿಂದ ಉಳುಮೆ ಎತ್ತು ಹಾಗೂ ಎಮ್ಮೆಗಳ ಮಾರಾಟ ಜೋರಾಗಿದೆ. ಎಂದಿಗಿಂತಲೂ ದುಪ್ಪಟ್ಟು ಸಂಖ್ಯೆಯಲ್ಲಿ ಜಾನುವಾರುಗಳು ಸಂತೆಗೆ ಲಗ್ಗೆ ಇಡುತ್ತಿವೆ. ಇದೇ ವೇಳೆ ಮಾರುಕಟ್ಟೆಯಲ್ಲಿ ಖರೀದಿಸುವವರ ಸಂಖ್ಯೆಯೂ ಜೋರಾಗಿಯೇ ಇದೆ. ಬಳ್ಳಾರಿ, ಆಂಧ್ರ ಗಡಿ ಭಾಗದಿಂದಲೂ ಇಲ್ಲಿಗೆ ಆಗಮಿಸಿ ಖಿಲಾರಿ ತಳಿಯ ಎತ್ತುಗಳನ್ನು ಖರೀದಿಸುತ್ತಿದ್ದಾರೆ. ದಷ್ಟಪುಷ್ಟವಾಗಿರುವ ಖಿಲಾರಿ ತಳಿಯ ಉಳುಮೆ ಗೊತ್ತಿರುವ ಜೋಡಿ ಎತ್ತಿಗೆ ಗುರುವಾರದ ಜಾನುವಾರು ಸಂತೆಯಲ್ಲಿ 1.80 ಲಕ್ಷ ರು.ವರೆಗೂ ಮಾರಾಟವಾಗಿದೆ. ಎಮ್ಮೆ, ಆಕಳು, ಕರುಗಳ ಮಾರಾಟವೂ ಜೋರಾಗಿ ನಡೆದಿದೆ. ಆದರೆ, ಕೆಲ ಮಧ್ಯವರ್ತಿಗಳು ರೈತರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳುತ್ತಿದ್ದು, ಕಡಿಮೆ ಬೆಲೆಗೆ ವ್ಯವಹಾರ ಮಾಡಿಸಲು ಮುಂದಾಗುತ್ತಿರುವುದೂ ನಡೆದಿದೆ.

ರೈತರ ಅಳಲು: ಈ ಸಲ ಈಗಲೇ ಮಳೆಯಿಲ್ಲ. ಬರಗಾಲ ನಿಶ್ಚಿತ ಎಂಬ ಮಾತು ಕೇಳಿಬರುತ್ತಿದೆ. ಸಾವಿರಾರು ರುಪಾಯಿ ಕೊಟ್ಟು ಮೇವು ಕೊಂಡು ತರುವ ಶಕ್ತಿ ನಮಗಿಲ್ಲ. ಎರಡು ವರ್ಷದ ಹಿಂದೆ ಖರೀದಿಸಿದ್ದ ಎತ್ತುಗಳನ್ನು ಅನಿವಾರ್ಯವಾಗಿ ಮಾರಾಟ ಮಾಡಲು ಮುಂದಾಗಿದ್ದೇನೆ. ನಾನೇ ಸಲಹಿದ ಎತ್ತುಗಳನ್ನು ಮಾರಾಟ ಮಾಡಲು ಮನಸ್ಸು ಬರುತ್ತಿಲ್ಲ. ಆದರೆ, ಅನಿವಾರ್ಯವಾಗಿದೆ ಎಂದು ದೇವಿಹೊಸೂರು ಗ್ರಾಮದ ರೈತ ಮಾಲತೇಶ ಮುರಾರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಹರು ಮತದಾರ ಪಟ್ಟಿಯಲ್ಲಿ ಉಳಿಯಲಿ
ಫ.ಗು.ಹಳಕಟ್ಟಿಯಿಂದ ವಚನಗಳಿಗೆ ಶಾಶ್ವತ ಅಸ್ತಿತ್ವ