ನಿರ್ಭೀತ ಪತ್ರಿಕೋದ್ಯಮವೇ ಪ್ರಜಾಪ್ರಭುತ್ವದ ಜೀವಾಳ

KannadaprabhaNewsNetwork |  
Published : Jul 02, 2026, 02:15 AM IST
ಪೋಟೊ1.2: ಕೊಪ್ಪಳದ ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಾರ್ಷಿಕ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸುವರ್ಣ ಸುದ್ದಿ ವಾಹಿನಿಯ ಪೊಲಿಟಿಕಲ್ ಬ್ಯೂರೊ ಮುಖ್ಯಸ್ಥ ಆನಂದ ಬೈದನಮನೆ ಅವರಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಪ್ರದಾನಿಸಿದರು. | Kannada Prabha

ಸಾರಾಂಶ

ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆ

ಕೊಪ್ಪಳ: ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ದಿನದಿಂದ ದಿನಕ್ಕೆ ಸಂಕಷ್ಟದ ಸ್ಥಿತಿಗೆ ತಲುಪುತ್ತಿದ್ದು, ಪತ್ರಕರ್ತರು ಅನೇಕ ಒತ್ತಡ, ಸವಾಲು ಹಾಗೂ ಅಭದ್ರತೆಯ ನಡುವೆ ವೃತ್ತಿ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ಪತ್ರಕರ್ತರಿಗೆ ನಿರ್ಭೀತಿಯಿಂದ ಪ್ರಶ್ನಿಸುವ ಹಾಗೂ ಸತ್ಯ ಬರೆಯುವ ಅವಕಾಶ ಕ್ಷೀಣಿಸುತ್ತಿವೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಪಾತ್ರ ಪ್ರಶ್ನಿಸುವುದಾಗಿದ್ದು, ಯಾವುದೇ ಒತ್ತಡಕ್ಕೂ ಮಣಿಯದೆ ಪತ್ರಕರ್ತರು ತಮ್ಮ ವೃತ್ತಿಧರ್ಮ ಪಾಲಿಸಬೇಕು ಎಂದು ಕರೆ ನೀಡಿದರು.

ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ತನಿಖಾ ಪತ್ರಿಕೋದ್ಯಮ ಬಹುತೇಕ ನಶಿಸುತ್ತಿದ್ದು, ಯುವ ಪತ್ರಕರ್ತರು ಮೌಲ್ಯಾಧಾರಿತ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮ ಉಳಿಸುವ ಸಂಕಲ್ಪ ಮಾಡಬೇಕು. ಪತ್ರಕರ್ತರು ನಿರ್ಭೀತಿಯಿಂದ ಪ್ರಶ್ನಿಸಿದರೆ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದರು.

ವಾರ್ಷಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಆನಂದ ಬೈದನಮನೆ, ಪತ್ರಿಕೋದ್ಯಮದಲ್ಲಿ 25 ವರ್ಷಗಳ ಸೇವೆಗೆ ದೊರೆತ ಗೌರವ ಸಂತಸ ತಂದಿದೆ ಎಂದರು.

ವೃತ್ತಿ ಬದುಕಿನಲ್ಲಿ ವೈಯಕ್ತಿಕ ಸಂತೋಷ ತ್ಯಾಗ ಮಾಡಿ ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕಾಗುತ್ತದೆ. ಮಾಧ್ಯಮ ಕ್ಷೇತ್ರ ಇಂದು ಉದ್ಯಮವಾಗಿ ರೂಪಾಂತರಗೊಂಡಿರುವುದರಿಂದ ಹಲವು ಸವಾಲುಗಳು ಎದುರಾಗುತ್ತಿವೆ. ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳಿಗೆ ಸರ್ಕಾರ ಸ್ಪಂದಿಸುತ್ತಿದ್ದರೆ ಈಗ ಆ ಗಂಭೀರತೆ ಕಾಣುತ್ತಿಲ್ಲ ಎಂದು ವಿಷಾದಿಸಿದರು.

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಪ್ರತಿಯೊಬ್ಬ ಪತ್ರಕರ್ತರೂ ತಮ್ಮ ವೃತ್ತಿಪರತೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಹಿರಿಯ ಪತ್ರಕರ್ತ ಶರಣಬಸವ ಹುಲಿಹೈದರ, ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಹಾಗೂ ನಾಭಿರಾಜ ದಸ್ತೇನವರ ಅವರನ್ನು ಸನ್ಮಾನಿಸಲಾಯಿತು. ಅನುಪಸ್ಥಿತರಾಗಿದ್ದ ಭರತ್ ಕಂದಕೂರ ಪರವಾಗಿ ಅವರ ಪತ್ನಿ ಸುಧಾ ಕಂದಕೂರ ಗೌರವ ಸ್ವೀಕರಿಸಿದರು. ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲು ಸಹಕರಿಸಿದ ಕೆ.ಎಸ್. ಆಸ್ಪತ್ರೆಯ ಮುಖ್ಯಸ್ಥ ಡಾ. ಬಸವರಾಜ ಕ್ಯಾವಟರ್ ಅವರನ್ನು ಅಭಿನಂದಿಸಲಾಯಿತು.

ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಲಾವಿದೆ ಶಕುಂತಲಾ ಬೆನ್ನಾಳ ಮತ್ತು ತಂಡದ ಸಂಗೀತ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು. ಪತ್ರಿಕಾ ವಿತರಕ ನಾಗರಾಜ ಕಲಾಲ್ ಅವರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮೀಡಿಯಾ ಕ್ಲಬ್ ಅಧ್ಯಕ್ಷ ದೇವು ನಾಗನೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮೀಡಿಯಾ ಕ್ಲಬ್‌ ಪದಾಧಿಕಾರಿಗಳು, ಪತ್ರಕರ್ತರು ಸೇರಿದಂತೆ ಅನೇಕ ಗಣ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಲಿನ್ಯ ನಿಯಂತ್ರಣ ಇಲಾಖೆ ಕಣ್ಣಿದ್ದೂ ಕುರುಡು
ವಾರದೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸಲು ಆದೇಶ: ಎನ್.ಕೆ. ಭಟ್ಟ