)
ಗಣೇಶ್ ತಮ್ಮಡಿಹಳ್ಳಿ
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಲೇ ಇದೆ. ವಿದ್ಯಾರ್ಥಿಗಳ ಸಂಖ್ಯೆ ಕೊರತೆಯಿಂದ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಿರುವುದು ಒಂದೆಡೆಯಾದರೆ, ಮಕ್ಕಳ ಸಂಖ್ಯೆ ಕಡಿಮೆ ಇರುವ 22 ಅನುದಾನಿತ ಪ್ರೌಢ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ.
ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಿಗೆ ಈಗಾಗಲೇ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ. ಈ ಬಾರಿಯೂ ಈ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯಲ್ಲಿ ಯಾವುದೇ ಸುಧಾರಣೆ ಆಗದಿದ್ದರೆ ಪ್ರಸಕ್ತ ಶೈಕ್ಷಣಿಕ ಅವಧಿಯಿಂದಲೇ ಈ 22 ಶಾಲೆಗಳ ಮಾನ್ಯತೆ ರದ್ದಾಗುವ ಸಾಧ್ಯತೆ ಇದೆ.ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ಅನುದಾನಿತ ಪ್ರೌಢ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರತಿ ತರಗತಿಯಲ್ಲಿ ಕನಿಷ್ಠ 25 ಮಕ್ಕಳು ಕಡ್ಡಾಯವಾಗಿ ಇರಬೇಕು. ಆದರೆ ಜಿಲ್ಲೆಯ 22 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇದಕ್ಕಿಂತ ಕಡಿಮೆ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆ ಇಂತಹ ಶಾಲೆಗಳ ಮೇಲೆ ಚಾಟಿ ಬೀಸಿದ್ದು, ಈ ಬಾರಿಯೂ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 25ಕ್ಕಿಂತ ಕಡಿಮೆ ಇರುವುದು ಕಂಡು ಬಂದರೆ ಶಾಲೆಯ ಮಾನ್ಯತೆ ರದ್ದು ಮಾಡುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.
ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2018-19ರಲ್ಲಿ 148 ಅನುದಾನಿತ ಪ್ರೌಢ ಶಾಲೆಗಳಿದ್ದವು, ಸದ್ಯ ಈ ಸಂಖ್ಯೆ 144ಕ್ಕೆ ಇಳಿದಿದೆ.
ಕನಿಷ್ಠ 25 ವಿದ್ಯಾರ್ಥಿಗಳ ಹಾಜರಾತಿ ಕಾಯ್ದುಕೊಳ್ಳಲು ವಿಫಲವಾಗಿರುವ ಶಾಲೆಗಳಿಗೆ ಒಂದು ಸಲ ಮನ್ನಾ ಮಾಡಲು ಅವಕಾಶವಿತ್ತು. ಈ ಕುರಿತು ಶಾಲೆಗಳಿಗೆ ಡಿಡಿಪಿಐ ಕಚೇರಿಯಿಂದ ನೋಟಿಸ್ ಸಹ ನೀಡಲಾಗಿತ್ತು. ಆದರೆ, ನಿರಂತರವಾಗಿ ಇದು ಮುಂದುವರಿದಿರುವುದರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳ ಸಂಖ್ಯೆ ಹೊಂದಿರದ 27 ಪ್ರೌಢ ಶಾಲೆಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ದಾಖಲಾತಿ ಕಾಯ್ದುಕೊಳ್ಳಲು ವಿಫಲರಾದರೆ ನಿಯಮದಂತೆ ಕ್ರಮಕೈಗೊಳ್ಳುವ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ. ಈ ಬಾರಿಯೂ ಆ ಶಾಲೆಗಳ ಪ್ರವೇಶಾತಿಯಲ್ಲಿ ಸುಧಾರಣೆ ಕಾಣದಿದ್ದರೆ ಅವುಗಳ ಮಾನ್ಯತೆಯನ್ನು ಈ ವರ್ಷವೇ ರದ್ದುಪಡಿಸಲಾಗುವುದು.