ಕನ್ನಡಪ್ರಭ ವಾರ್ತೆ ಹಾಸನ
ನಗರದ ಬಿ.ಎಂ. ರಸ್ತೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯ ೬೦ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದಲ್ಲಿ ಅಪಾರ ಬದಲಾವಣೆಗಳು ಕಂಡುಬರುತ್ತಿದ್ದು, ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ತಮ್ಮನ್ನು ತಾವು ಸಿದ್ಧಗೊಳಿಸಿಕೊಳ್ಳಬೇಕು. ಹಿಂದೆ ಐಟಿಐ ಎಂದರೆ ಕೇವಲ ಸಾಮಾನ್ಯ ತಾಂತ್ರಿಕ ಶಿಕ್ಷಣ ಸಂಸ್ಥೆ ಎಂಬ ಭಾವನೆ ಇತ್ತು, ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ, ಕೈಗಾರಿಕೆಗಳ ಅವಶ್ಯಕತೆಗೆ ತಕ್ಕಂತೆ ಹೊಸ ಯಂತ್ರೋಪಕರಣಗಳು, ಆಧುನಿಕ ತಂತ್ರಜ್ಞಾನ ಮತ್ತು ಉದ್ಯೋಗಾಧಾರಿತ ತರಬೇತಿ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು. ಐಟಿಐಗಳಲ್ಲಿ ಹೊಸತನ ತರಲು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ₹೧೩೮೬ ಕೋಟಿ ಅನುದಾನ ಲಭ್ಯವಾಗಿದ್ದು, ಇದರ ಮೂಲಕ ರಾಜ್ಯದ ವಿವಿಧ ಐಟಿಐ ಸಂಸ್ಥೆಗಳಲ್ಲಿ ಆಧುನೀಕರಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ, ಇದಕ್ಕೂ ಹೊರತಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಖಾಸಗಿ ಕೈಗಾರಿಕಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕ್ಲಸ್ಟರ್ ಆಧಾರಿತ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಒಂದು ಕ್ಲಸ್ಟರ್ ಸ್ಥಾಪನೆಗೆ ₹೨೦೦ ರಿಂದ ₹೨೪೦ ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿಯ ಜೊತೆಗೆ ನೇರ ಉದ್ಯೋಗಾವಕಾಶಗಳನ್ನೂ ಕಲ್ಪಿಸುವ ದಿಸೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.ಹಿಂದೆ ಐಟಿಐಗಳು ಶೆಡ್‌ಗಳಲ್ಲಿ ನಡೆಯುತ್ತಿದ್ದವು. ಮೂಲಭೂತ ಸೌಲಭ್ಯಗಳೇ ಇಲ್ಲದ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳು ಕಲಿತು ದೊಡ್ಡ ಹುದ್ದೆಗಳಿಗೆ ಏರಿದ್ದರು, ಈಗ ಎಲ್ಲವೂ ಅಪ್‌ಡೇಟ್ ಆಗಿದೆ. ಅತ್ಯಾಧುನಿಕ ಪ್ರಯೋಗಾಲಯಗಳು, ಡಿಜಿಟಲ್ ತರಬೇತಿ ವ್ಯವಸ್ಥೆಗಳು, ನೂತನ ಯಂತ್ರೋಪಕರಣಗಳು ಹಾಗೂ ಗುಣಮಟ್ಟದ ಬೋಧನೆ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಐಟಿಐ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ಮಾತನಾಡಿ, ಸಂಸ್ಥೆಯ ೬೦ ವರ್ಷಗಳ ಪಯಣವನ್ನು ಸ್ಮರಿಸಿ, ಐಟಿಐ ಕಾಲೇಜಿನ ಸಾಧನೆಗಳನ್ನು ವಿವರಿಸಿದರು.
ಈ ೬೦ನೇ ವರ್ಷದ ಸಂಭ್ರಮಾಚರಣೆ, ಹಳೆ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದ್ದು, ಹಳೆ ವಿದ್ಯಾರ್ಥಿಗಳೇ ಇದರ ಯಶಸ್ಸಿಗೆ ಪ್ರಮುಖ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಖ್ಯಾತ ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಅವರಿಂದ ವಿಶೇಷ ಮನರಂಜನಾ ಕಾರ್ಯಕ್ರಮ ನಡೆದು ಎಲ್ಲರ ಗಮನ ಸೆಳೆಯಿತು. ಗುರುವಂದನೆ ಕಾರ್ಯಕ್ರಮ ಗಮನ ಸೆಳೆಯಿತು.