ಹೊಸಕೋಟೆ: ಮಹನೀಯರ ಜಯಂತಿಗಳನ್ನು ಆಚರಣೆ ಮೂಲಕ ಅವರ ಆಶಯಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕು ಎಂದು ತಹಸೀಲ್ದಾರ್ ಸೋಮಶೇಖರ್ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು ಮಾತನಾಡಿ, ಕ್ರಿ.ಪೂ.ದಲ್ಲೇ ಸಾಮ್ರಾಟ್ ಅಶೋಕ ಮಹಾಶಯನಾಗಲು ಬುದ್ಧನ ಚಿಂತನೆಗಳು ಎಷ್ಟು ಪ್ರಭಾವ ಬೀರಿದ್ದವು ಎಂಬುದನ್ನು ಆತನ ದಮ್ಮದಿಂದ ನಾವು ಅರ್ಥ ಮಾಡಿಕೊಳ್ಳಬಹುದು. ಅಂಬೇಡ್ಕರ್ ಸಹ ಮಹಾ ಮಾನವತಾವಾದಿಯಾಗಲು ಬುದ್ಧನಲ್ಲಿ ಕಂಡ ಜ್ಞಾನದ ಬೆಳಕು ಎಂಬುದನ್ನು ಮರೆತು ಇಂದು ಬುದ್ದನನ್ನು ಕೇವಲ ಧರ್ಮಕ್ಕೆ ಮಾತ್ರ ಸೀಮಿತಗೊಳಿಸಿ ನೋಡುತ್ತಿದ್ದೇವೆ. ಪ್ರತಿಯೊಬ್ಬರೂ ಜ್ಞಾನದ ಆಸ್ತಿಯನ್ನಾಗಿ ಬುದ್ಧನನ್ನು ಯಾಕೆ ನೋಡಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.ಬುದ್ಧನ ಪ್ರೀತಿ, ಕರುಣೆ, ಮೈತ್ರೇಯಿ ಗುಣಗಳು ಜಗತ್ತಿಗೆ ಎಷ್ಟು ಅನಿವಾರ್ಯ ಎಂಬುದು ತಿಳಿಯದಿರುವ ಕಾರಣಕ್ಕೆ ಇಂದು ಎಲ್ಲಿ ನೋಡಿದರೂ ಸಂಘರ್ಷಗಳು ತಾಂಡವಾಡುತ್ತಿವೆ. ಬುದ್ದ ಹೇಳಿದ ಪ್ರೀತಿ ಎಂದರೆ ಎಲ್ಲರನ್ನೂ ಪ್ರೀತಿಸುವುದಲ್ಲ, ನಿನ್ನನ್ನು ನೀನು ಮೊದಲು ಪ್ರೀತಿಸು. ಹೆಂಗೆ ಎಂದರೆ ನಮಗೆ ಬೇಕಾದ ಜ್ಞಾನ, ಆರೋಗ್ಯ, ಶುಚಿತ್ವವನ್ನು ಕಾಪಾಡಿಕೊಳ್ಳುವುದು ಎಂದರ್ಥ. ಕರುಣೆ ಎಂದರೆ ಬೇರೆಯವರ ಬಗ್ಗೆ ಕರುಣೆ ತೋರಿಸುವ ಮುನ್ನ ನಿನ್ನ ಮೇಲೆ ನಿನಗೆ ಕರುಣೆ ಇರಲಿ. ಅಂದರೆ ನಿನ್ನ ಮಾನಸಿಕ ಮತ್ತು ದೈಹಿಕ ಸುರಕ್ಷತೆ ಬಗ್ಗೆ ನೀನೆ ಯೋಚಿಸಿಕೊಳ್ಳಬೇಕು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ತಾಲೂಕು ಪಶು ಮತ್ತು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್, ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಣುಕಾ ಪ್ರಸನ್ನ, ಡಾ.ಎಂ.ಮುನಿರಾಜು, ವಕೀಲರಾದ ಹರೀಂದ್ರ, ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚಿನ್ನಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಅಭಿಮಾನಿ ಮುನಿರಾಜು, ಶಿಕ್ಷಕ ಅಣ್ಣಯ್ಯ, ಹೋರಾಟಗಾರ ಐ.ಆರ್.ನಾರಾಯಣಸ್ವಾಮಿ, ವಿವಿಧ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.ಫೋಟೋ: 3 ಹೆಚ್‌ಎಸ್‌ಕೆ 1