ತೀರ್ಥಹಳ್ಳಿ: ದೇಶದಲ್ಲಿ ಡಿ ಗ್ರೂಪ್ ಹುದ್ದೆಗಳೇ ನಿಂತು ಹೋಗುವ ಆತಂಕ ಎದುರಾಗಿದೆ. ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರು ಒಗ್ಗೂಡಿ ಹೋರಾಟಕ್ಕಿಳಿಯುವ ಅನಿವಾರ್ಯತೆ ಇದೆ ಎಂದು ಅಖಿಲ ಭಾರತ ಡಿ ಗ್ರೂಪ್ ನೌಕರರ ಕೇಂದ್ರ ಒಕ್ಕೂಟದ ರಾಷ್ಟ್ರಾಧ್ಯಕ್ಷ ಗಣೇಶನ್ ಕರೆ ನೀಡಿದರು.
ತಮಿಳುನಾಡಿನಲ್ಲಿ ಅಲ್ಲಿನ ಡಿ ಗ್ರೂಪ್ ನೌಕರರ ರಾಜ್ಯಾಧ್ಯಕ್ಷ ಎಸ್.ಮಧುರಾಂ ಪ್ರಯತ್ನದಲ್ಲಿ ಮದರಾಸು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಫಲವಾಗಿ 31 ಸಾವಿರ ಡಿ ಗ್ರೂಪ್ ಹುದ್ದೆಗಳನ್ನು ಮಂಜೂರು ಮಾಡಿಸಿಕೊಳ್ಳಲಾಗಿದೆ. ಇದೇ ಪ್ರಯತ್ನವನ್ನು ಇತರೆ ರಾಜ್ಯಗಳಲ್ಲೂ ಮುಂದುವರಿಸಬೇಕಿದೆ. ಹಳೇ ಪಿಂಚಣಿ ನೀತಿಯನ್ನು ಮುಂದುವರಿಸಬೇಕಿದೆ. ಈ ಬಗ್ಗೆ ಅಕ್ಟೋಬರ್ ಹತ್ತರಂದು ಚೆನ್ನೈನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನೌಕರರಂತೆ ದೇಶದ ಎಲ್ಲಾ ರಾಜ್ಯಗಳಲ್ಲೂ ಡಿ ಗ್ರೂಪ್ ನೌಕರರಿಗೆ ಒಂದೆ ಸಮನಾದ ವೇತನ ವೈದ್ಯಕೀಯ ಭತ್ಯೆ ಸೇರಿದಂತೆ ಎಲ್ಲಾ ಸವಲತ್ತುಗಳು ದೊರೆಯುವಂತಾಗಬೇಕು ಎಂಬುದು ನಮ್ಮ ಬಯಕೆ. ಮಾಸಿಕ ಕಮಿಶನ್ ಪಡೆಯುವ ಖಾಸಗಿ ಸಂಸ್ಥೆಗಳ ಮೂಲಕ ಮಾಡುವ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ಗ್ರಾಪಂ, ಪಪಂ ಮತ್ತು ಪುರಸಭೆಗಳಲ್ಲಿ ಕೆಲಸ ಮಾಡುವ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆಯಾಗಬೇಕು. ಶಿಕ್ಷಣ ಪಡೆದ ನೌಕರರನ್ನು ಹಿರಿತನದ ಆಧಾರದಲ್ಲಿ ಭಡ್ತಿ ನೀಡಬೇಕು. ರಾತ್ರಿ ಕಾವಲುಗಾರರು ಮತ್ತು ಕ್ಲೀನರ್ ಹುದ್ದೆಗಳಿಗೂ ಡಿ ವರ್ಗದ ನೌಕರರನ್ನು ಭರ್ತಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸುವುದಾಗಿ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಎಸ್.ನಾಗೇಂದ್ರ, ಗ್ರಾಮ ಪಂಚಾಯ್ತಿಯಿಂದ ರಾಷ್ಟ್ರಪತಿ ಭವನದವರೆಗೂ ಡಿ ಗ್ರೂಪ್ ನೌಕರರ ಸೇವೆಯ ಅಗತ್ಯವಿದೆ. ಆದರೆ ಸರ್ಕಾರಗಳು ಈ ನೌಕರರ ಬಗ್ಗೆ ಮಲತಾಯಿ ಧೋರಣೆ ತಾಳಿರುವುದು ವಿಷಾದನೀಯ ಸಂಗತಿಯಾಗಿದೆ ಎಂದ ಅವರು, ಖಾಯಂ ನೌಕರರ ನಾಲ್ಕು ಪಟ್ಟು ಕೆಲಸ ತೆಗೆದುಕೊಳ್ಳುವ ದಿನಗೂಲಿ ನೌಕರರ ಕಾರ್ಯಕ್ಷಮತೆಯ ಬಗ್ಗೆ ಅರಿವಿದ್ದರೂ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ದೂರಿದರು.ಸರ್ಕಾರದ ಕೆಲಸಗಳು ಸುಗಮವಾಗಿ ನಡೆಯಲು ಶ್ರಮಿಸುವ ಹೊರಗುತ್ತಿಗೆರರು ಈ ನೌಕರರಿಗೆ ಸಕಲದಲ್ಲಿ ವೇತನವನ್ನು ನೀಡದೆ ವಂಚಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡುವ ಸಲುವಾಗಿ ಸೆ.28ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪತ್ರಕರ್ತ ನಗರ ರಾಘವೇಂದ್ರ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಆಂಧ್ರ ಪ್ರದೇಶದ ವೆಂಕಟೇಶವಾರು, ತಮಿಳುನಾಡಿನ ಎಸ್.ಮತ್ತುರಾಂ, ಪಿ.ಮುನಿಯಪ್ಪನ್, ಬಿ.ಎಂ.ನಟರಾಜ್, ಸರೋಜಮ್ಮ ಇದ್ದರು.