- ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ನಿರ್ಲಕ್ಷ್ಯ: ಒಕ್ಕೂಟ ಆರೋಪ
- - - ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆಯಲ್ಲಿ ಅನಧಿಕೃತ ದ್ವಿಚಕ್ರ ವಾಹನ ಟ್ಯಾಕ್ಸಿಯನ್ನು ಫೆ.28ರೊಳಗೆ ನಿಷೇಧಿಸಬೇಕು. ಇಲ್ಲದಿದ್ದರೆ ಮಾ.1ರಿಂದಲೇ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ಚಾಲಕರ ಒಕ್ಕೂಟ ಜಿಲ್ಲಾಧ್ಯಕ್ಷ ಪಿ.ಬಿ. ಅಂಜುಕುಮಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಗೆ ಎಚ್ಚರಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ನಿರ್ಲಕ್ಷ್ಯ ತೋರಲಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಲಕ್ಷಾಂತರ ಆಟೋ, ಕಾರು ಚಾಲಕರ ಬದುಕನ್ನೇ ಹಾಳು ಮಾಡಿರುವ ರ್ಯಾಪಿಡೋ ಹೆಸರಿನ ಅನಧಿಕೃತ ಬೈಕ್ ಟ್ಯಾಕ್ಸಿ ಇದೀಗ ದಾವಣಗೆರೆಗೂ ಕಾಲಿಟ್ಟಿದೆ. ನೂರಾರು ಅನಧಿಕೃತ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಇಲಾಖೆಗಳು ಕಾರ್ಯಾಚರಣೆ ಕೈಗೊಂಡು, ಕಾನೂನು ಕ್ರಮ ಜರುಗಿಸಲಿ ಎಂದರು.ಒಕ್ಕೂಟದ ಎಲ್ಲ ಸದಸ್ಯರು ನಿರಂತರ ರ್ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಮೊಬೈಲ್‌ಗಳಲ್ಲಿ ಬುಕ್ ಮಾಡಿ, ಆರ್‌ಟಿಒ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಬೈಕ್ ಟ್ಯಾಕ್ಸಿಗಳನ್ನು ಜಪ್ತಿ ಮಾಡಿಸುವ ಹೋರಾಟ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಬೈಕ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದು ಗಮನಕ್ಕೆ ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರ್‌ಟಿಒ ಅಧಿಕಾರಿಗಳು ಹೇಳಿದ್ದಾರೆ. ಕಂಪನಿ ಆರಂಭಿಸಲು ಟೌನ್ ಆ್ಯಪ್ ಮಾದರಿಯಲ್ಲಿ ಕಂಪನಿ ಆಟೋ ಮತ್ತು ಕಾರುಗಳಿಗಾಗಿ ತಾಂತ್ರಿಕತೆ ಸಿದ್ಧಪಡಿಸುತ್ತಿದ್ದು, ಆದಷ್ಟು ಬೇಗನೆ ಆರಂಭಿಸುತ್ತೇವೆ. ಸಾರಿಗೆ ಇಲಾಖೆ ಒಂದೂವರೆ ವರ್ಷದಿಂದ ಆಟೋ ಮತ್ತು ಕಾರು ಚಾಲಕರಿಗೆ ಆ್ಯಪ್ ಮಾಡುವುದಾಗಿ ಘೋಷಿಸಿದ್ದರೂ ಇಂದಿಗೂ ಕಾರ್ಯರೂಪಕ್ಕೆ ತಂದಿಲ್ಲ ಎಂದರು.ಆದರೆ, ಟೌನರ್ ಕಂಪನಿಯು ಸರ್ಕಾರ ಕೇಳಿದರೆ ತನ್ನ ತಾಂತ್ರಿಕತೆ ನೀಡುವುದಾಗಿ ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಹೇಳಿದೆ. ಕಡೇ ಪಕ್ಷ ಸಾರಿಗೆ ಇಲಾಖೆ ಇಂತಹ ನೂತನ ಆ್ಯಪ್‌ಗಳ ಸಹಕಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರಲಿ ಎಂದರು.
ಒಕ್ಕೂಟದ ಡಿ.ಆರ್.ಅರವಿಂದಾಕ್ಷ, ಗುರುರಾಜ, ಸಂತೋಷ, ತಿಪ್ಪೇಶ, ಸಿದ್ದಾರ್ಥ, ಮಂಜುನಾಥ, ಬಸವರಾಜ, ಶಿವಯೋಗಿ, ಅಣ್ಣಪ್ಪ ಇದ್ದರು.- - - -17ಕೆಡಿವಿಜಿ5: ದಾವಣಗೆರೆಯಲ್ಲಿ ಸೋಮವಾರ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಬಿ.ಅಂಜುಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.