ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ತೀವ್ರ ವಿರೋಧಕ್ಕೆ ಮಣಿದ ಜಿಬಿಎ ವಾರ್ಷಿಕ ಪಾರ್ಕಿಂಗ್ ಶುಲ್ಕ ಹಾಗೂ ಮನೆ ಮುಂದೆ ನಿಲ್ಲಿಸುವ ಕಾರುಗಳಿಗೆ ಪಾರ್ಕಿಂಗ್ ಶುಲ್ಕ ನಿಯಮ ಕೈಬಿಟ್ಟು, ವಾಹನ ನಿಲುಗಡೆಗೆ ಅವಕಾಶ ನೀಡಿದರೆ ತೆರಿಗೆ ವಿನಾಯಿತಿ ಹಾಗೂ ರಸ್ತೆಗಳಲ್ಲಿ ವೈಜ್ಞಾನಿಕ ಪಾರ್ಕಿಂಗ್ ಶುಲ್ಕ ವಿಧಿಸುವ ಹೊಸ ನಿಯಮಾವಳಿ ಪ್ರಕಟಿಸಿದೆ. ಅಲ್ಲದೆ, ಸೆ.10ರ ಒಳಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಸಲಹೆ ಆಹ್ವಾನಿಸಿದೆ.
ಪಾರ್ಕಿಂಗ್‌ಗೆ ಖಾಲಿ ನಿವೇಶನ ನೀಡಿದರೆ ಶೇ.50ರಷ್ಟು ತೆರಿಗೆ ವಿನಾಯಿತಿ ಆಫರ್
-ಸೆ.10ರ ಒಳಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಸಲಹೆಗೆ ಆಹ್ವಾನ । ಬೇಸ್ಮೆಂಟ್ ಜಾಗ ವಾಣಿಜ್ಯಕ್ಕೆ ಬಳಸಿದರೆ ಕಠಿಣ ಕ್ರಮ: ಜಿಬಿಎ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ತೀವ್ರ ವಿರೋಧಕ್ಕೆ ಮಣಿದ ಜಿಬಿಎ ವಾರ್ಷಿಕ ಪಾರ್ಕಿಂಗ್ ಶುಲ್ಕ ಹಾಗೂ ಮನೆ ಮುಂದೆ ನಿಲ್ಲಿಸುವ ಕಾರುಗಳಿಗೆ ಪಾರ್ಕಿಂಗ್ ಶುಲ್ಕ ನಿಯಮ ಕೈಬಿಟ್ಟು, ವಾಹನ ನಿಲುಗಡೆಗೆ ಅವಕಾಶ ನೀಡಿದರೆ ತೆರಿಗೆ ವಿನಾಯಿತಿ ಹಾಗೂ ರಸ್ತೆಗಳಲ್ಲಿ ವೈಜ್ಞಾನಿಕ ಪಾರ್ಕಿಂಗ್ ಶುಲ್ಕ ವಿಧಿಸುವ ಹೊಸ ನಿಯಮಾವಳಿ ಪ್ರಕಟಿಸಿದೆ. ಅಲ್ಲದೆ, ಸೆ.10ರ ಒಳಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಸಲಹೆ ಆಹ್ವಾನಿಸಿದೆ.
ಈ ಬೆಳವಣಿಗೆಯಿಂದಾಗಿ ಜಿಬಿಎ ಇದೇ ತಿಂಗಳು ಅಥವಾ ಅ.1ರಿಂದ ಪಾರ್ಕಿಂಗ್ ಶುಲ್ಕ ಜಾರಿಗೆ ತರುವ ಸಾಧ್ಯತೆ ಇದೆ. ಜಿಬಿಎ ಹಾಗೂ ಅಭಿವೃದ್ಧಿ ಸಚಿವರ ಹಲವು ಸುತ್ತುಗಳ ಸಭೆಗಳು, ಚರ್ಚೆ ನಡೆಸಿದ ನಂತರ ಜಾರಿಗೆ ತರಲು ಉದ್ದೇಶಿಸಿರುವ ನಿಯಮಗಳಂತೆ ಮೂಲ ಕಟ್ಟಡ ನಿರ್ಮಾಣ ನಿಯಮ ಉಲ್ಲಂಘಿಸಿ ಕಟ್ಟಡದ ನೆಲಮಹಡಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಮಾಲಿಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನಿಯಮ ರೂಪಿಸಲಾಗಿದೆ. ಖಾಸಗಿ ಖಾಲಿ ನಿವೇಶನಗಳಲ್ಲಿ ಪಾರ್ಕಿಂಗ್, ಬಹುಮಹಡಿ ವಾಹನ ನಿಲುಗಡೆಗೆ ಅವಕಾಶ ಹಾಗೂ ನಗರದಲ್ಲಿ ಮತ್ತೆ ಪಾರ್ಕಿಂಗ್ ಶುಲ್ಕ ವಿಧಿಸಲು ತೀರ್ಮಾನಿಸಿದೆ.
2021ರಲ್ಲಿ ಪಾರ್ಕಿಂಗ್ ನೀತಿಯಂತೆ ಕರಡು ನಿಯಮಗಳನ್ನು ರಚಿಸಲಾಗಿದೆ ಎಂದು ತಿಳಿಸಿರುವ ಜಿಬಿಎ, ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯಗಳನ್ನು ಹೆಚ್ಚಿಸಲು, ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಸೌಲಭ್ಯಗಳಾಗಿ ಪರಿವರ್ತಿಸಲು ಉತ್ತೇಜಿಸಲು, ಪಾರ್ಕಿಂಗ್ ಪದ್ಧತಿ ಪ್ರೋತ್ಸಾಹಿಸಲು, ಕಟ್ಟಡ ನಿಯಮಗಳ ಉಲ್ಲಂಘನೆ ಮತ್ತು ನಿಗದಿತ ಪಾರ್ಕಿಂಗ್ ಸ್ಥಳಗಳ ದುರ್ಬಳಕೆಯನ್ನು ತಡೆಯಲು, ರಸ್ತೆ-ಮೇಲಿನ ಪಾರ್ಕಿಂಗ್ ವೈಜ್ಞಾನಿಕವಾಗಿ ನಿಯಂತ್ರಿಸಲು ಹಾಗೂ ಶುಲ್ಕ ವಿಧಿಸುವುದಾಗಿ ಸಮರ್ಥಿಸಿಕೊಂಡಿದೆ. ಖಾಲಿ ನಿವೇಶನಗಳಲ್ಲಿ ಬಹು ಹಂತದ ಕಾರ್ ಪಾರ್ಕಿಂಗ್ ಅಥವಾ ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆ ಒದಗಿಸಿದರೆ ಸಂಪೂರ್ಣ ಆಸ್ತಿ ತೆರಿಗೆ ವಿನಾಯಿತಿ, ನೆಲಮಟ್ಟದ ಪಾರ್ಕಿಂಗ್ ಗಾಗಿ ಬಳಸುವ ಖಾಲಿ ನಿವೇಶನಗಳಿಗೆ ಶೇ 50ರಷ್ಟು ಆಸ್ತಿತೆರಿಗೆ ವಿನಾಯಿತಿ ದೊರೆಯಲಿದೆ.
ಸಾರ್ವಜನಿಕ ರಸ್ತೆಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳನ್ನು ಉಪಯೋಗಿಸುವ ವಾಹನಗಳ ಮಾಲೀಕರಿಗೆ ಮಾಸಿಕ ಪಾಸ್ ನೀಡಲಾಗುವುದು. ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವುದರಿಂದ ಹೆಚ್ಚಿನ ಒತ್ತಡ ಇರುವ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಹಾಗೂ ಸಂಚಾರ ವ್ಯವಸ್ಥೆ ಸುಧಾರಿಸಲು ಗರಿಷ್ಠ ಸಂಚಾರಿ ಅವಧಿಯ ಪಾರ್ಕಿಂಗ್ ನಿಷೇಧಿಸಲೂ ತೀರ್ಮಾನಿಸಲಾಗಿದೆ.
ವಾಹನ ನಿಲುಗಡೆ ಶುಲ್ಕ ಸಂಗ್ರಹವಾಗುವ ಹಣವನ್ನು ಸಂಚಾರ ಸುಧಾರಣೆಗಳು, ಜಂಕ್ಷನ್ ಸುಧಾರಣೆಗಳು, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯಗಳಿಗೆ ಬಳಸುವುದಾಗಿ ತಿಳಿಸಿದೆ.
ಸೆ.10 ಅಥವಾ ಅದಕ್ಕೂ ಮೊದಲು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಇ-ಮೇಲ್ ವಿಳಾಸ acsuddoffice@gmail.com ಅಥವಾ ಅಂಚೆ ಮೂಲಕ ಅಥವಾ ಖುದ್ದಾಗಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ವಿಕಾಸ ಸೌಧ, ಬೆಂಗಳೂರು ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.