ಜಿಬಿಎ ಜಾರಿಗೆ ತರಲು ಮುಂದಾಗಿದ್ದ ಮನೆ ಮುಂದೆ ವಾಹನ ನಿಲ್ಲಿಸಿದರೆ ಶುಲ್ಕವಿಧಿಸುವ ಪ್ರಸ್ತಾವನೆಗೆ ಸಾವಿರಾರು ಆಕ್ಷೇಪಣೆಗಳು ಸಾರ್ವಜನಿಕರಿಂದ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ತಡೆಹಿಡಿದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಜಿಬಿಎ ಜಾರಿಗೆ ತರಲು ಮುಂದಾಗಿದ್ದ ಮನೆ ಮುಂದೆ ವಾಹನ ನಿಲ್ಲಿಸಿದರೆ ಶುಲ್ಕವಿಧಿಸುವ ಪ್ರಸ್ತಾವನೆಗೆ ಸಾವಿರಾರು ಆಕ್ಷೇಪಣೆಗಳು ಸಾರ್ವಜನಿಕರಿಂದ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ತಡೆಹಿಡಿದಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ಡಿಸೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇರುವುದರಿಂದ ಈ ಪ್ರಸ್ತಾವನೆ ಸದ್ಯಕ್ಕೆ ಜಾರಿ ಮಾಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಬಾರಿ ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಜಿಬಿಎ ಪ್ರಕಟಿಸಿದ್ದು, ಮೊದಲ ಬಾರಿಗೆ ಪ್ರಕಟಿಸಿದ್ದ ಪ್ರಸ್ತಾವನೆಯಲ್ಲಿ ನಗರದ ನಾಗರಿಕರು ತಮ್ಮ ಮನೆ ಮುಂದೆ ಕಾರು, ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದರೂ ಶುಲ್ಕ ವಿಧಿಸುವುದಾಗಿ ತಿಳಿಸಿ ಆಕ್ಷೇಪಗಳಿಗೆ ಆಹ್ವಾನಿಸಿತ್ತು.
ಈ ಪ್ರಸ್ತಾವನೆಗೆ ನಗರದ ಶಾಸಕರು, ಸಚಿವರಿಂದಲೇ ಆಕ್ಷೇಪಗಳು ಬಂದ ಕಾರಣ ಮನೆ ಮುಂದೆ ಕಾರು ನಿಲ್ಲಿಸುವ ಪ್ರಸ್ತಾವನೆಯನ್ನು ಪರಿಷ್ಕರಿಸಿ ಆಯ್ದ ರಸ್ತೆಗಳಲ್ಲಿ ಮಾತ್ರ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸುವುದಾಗಿ ತಿಳಿಸಿತ್ತು. ಅಲ್ಲದೆ, ಆಗಸ್ಟ್ 13ರಂದು ಪ್ರಸ್ತಾವನೆಗೆ ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿತ್ತು.
ಈ ಪ್ರಸ್ತಾವನೆಗೆ ನಗರದ ಸಾವಿರಾರು ನಾಗರಿಕರು ಆಕ್ಷೇಪಗಳನ್ನು ಸಲ್ಲಿಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಗರಾಭಿವೃದ್ಧಿ ಇಲಾಖೆ ಈಗ ಪ್ರಸ್ತಾವನೆ ಜಾರಿಗೆ ತಂದರೆ ಡಿಸೆಂಬರ್ನಲ್ಲಿ ಚುನಾವಣೆ ನಡೆದು ಆಡಳಿತ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ ಎನ್ನಲಾಗಿದೆ. ಇದರಿಂದಾಗಿ ಈ ಪ್ರಸ್ತಾವನೆಗೆ ಸದ್ಯಕ್ಕೆ ಜಾರಿಯಾಗುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.