ಆಹಾರವಿಲ್ಲದ ಕೋತಿಗಳಿಗೆ ಯುವಕರಿಂದ ಆಹಾರ ಪೂರೈಕೆ

KannadaprabhaNewsNetwork | Published : May 11, 2025 1:15 AM
Follow Us

ಸಾರಾಂಶ

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಾಣಿ ಪಕ್ಷಿಗಳು ಬಿಸಿಲಿನಲ್ಲಿ ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಲ್ಲಿ ವಾಸವಾಗಿರುವ ಕೋತಿಗಳಿಗೆ ಯುವಕರ ಗುಂಪೊಂದು ಆಹಾರ ಪೂರೈಸುವ ಕಾರ್ಯಕ್ಕೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಾಣಿ ಪಕ್ಷಿಗಳು ಬಿಸಿಲಿನಲ್ಲಿ ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಲ್ಲಿ ವಾಸವಾಗಿರುವ ಕೋತಿಗಳಿಗೆ ಯುವಕರ ಗುಂಪೊಂದು ಆಹಾರ ಪೂರೈಸುವ ಕಾರ್ಯಕ್ಕೆ ಮುಂದಾಗಿದೆ.

ಬೆಟ್ಟದಲ್ಲಿ ಕಲ್ಲು ಬಂಡೆಗಳ ನಡುವೆ ಗಿಡಮರಗಳಿಲ್ಲದ ಕಾರಣ ಪೂರಕ ಆಹಾರ ಸಿಗುತ್ತಿಲ್ಲ. ಈ ಕೋತಿಗಳು ಆಹಾರಕ್ಕಾಗಿ ಪರದಾಡುವ ಸ್ಥಿತಿಯನ್ನು ಕಂಡು ಕೋತಿಗಳ ಆಹಾರ ಪೂರೈಸಲು ಯುವಕರ ತಂಡವೊಂದು ವಾಟ್ಸ್ ಪ್ ಗ್ರೂಪ್ ಮಾಡಿ ಆಹಾರ ಪೂರೈಕೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದು ಮಾನವೀಯತೆ ಮೆರೆಯುತ್ತಿದ್ದಾರೆ.

ಶಿವಗಂಗೆ ಬೆಟ್ಟದ ಮೇಲೆ ಅಂಗಡಿ ಇಟ್ಟು ವ್ಯಾಪಾರ ಮಾಡುವ ಮಹೇಶ್ ಹಾಗೂ ವೃತ್ತಿಯಲ್ಲಿ ಚಾಲಕನಾಗಿರುವ ಗೌರಾಪುರ ರುದ್ರೇಶ್ ಬೆಟ್ಟಕ್ಕೆ ಭೇಟಿ ನೀಡಿದಾಗೆಲ್ಲಾ ಕೋತಿಗಳ ಹಿಂಡುಗಳ ಹಸಿವನ್ನು ಕಂಡು ಹೇಗಾದರೂ ಮಾಡಿ ಹಸಿವನ್ನು ನೀಗಿಸಬೇಕೆಂದು ಯೋಚನೆ ಮಾಡಿ ಸಾಮಾಜಿಕ ಜಾಲತಾಣವಾದ ವಾಟ್ಸ್‌ಪ್‌ನಲ್ಲಿ "ಶಿವಗಂಗಾ ವಾನರ ಸೇವಾ ಸಂಘ ಶಿವಗಂಗೆ " ಎಂಬ ಗ್ರೂಪ್ ಸೃಷ್ಟಿಸಿ, ಅದಕ್ಕಾಗಿ ವಾನರ ಆಹಾರಕ್ಕಾಗಿ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿ ಪೋನ್ ಪೇ ನಂಬರ್ ಹಾಕಿದ್ದು, ತಮ್ಮ ಜನ್ಮದಿನ, ವಿಶೇಷ ದಿನ, ಹಬ್ಬ ಹರಿದಿನಗಳಂದು ನೆನಪಿಗಾಗಿ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಪೋನ್ ಪೇ ಗೆ ಹಣ ನೀಡಿ ಅಥವಾ ಕೋತಿಗಳಿಗೆ ತಿನ್ನಲು ಆಹಾರ, ನೀರು ತಂದುಕೊಂಡುವಂತೆ ಮನವಿ ಮಾಡಿದ್ದಾರೆ. ಗ್ರೂಪ್ ನಲ್ಲಿರುವ 300ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಕೋತಿಗಳ ಆಹಾರಕ್ಕಾಗಿ ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಹಣ ಕಳಿಸುತ್ತಾ ಕೋತಿಗಳ ಊಟಕ್ಕೆ ನೆರವಾಗಿದ್ದಾರೆ.

ಬೆಟ್ಟದ ಮೇಲಿರುವ ಕೋತಿಗಳಿಗೆ ಆಹಾರ ನೀಡಲು ಮುಂದಾದರೆ ಕೋತಿಗಳ ಹಿಂಡು ಓಡೋಡಿ ಬರುತ್ತದೆ. ಅದರ ವಿಡಿಯೋ ತೆಗೆದು ವಾಟ್ಸ್ ಪ್ ಗ್ರೂಪ್ ನಲ್ಲಿ ನಿತ್ಯ ಹಾಕುತ್ತೇನೆ. ಪ್ರತಿ ತಿಂಗಳು ಸಂಗ್ರಹವಾಗುವ ಹಣದಲ್ಲಿ 30 ದಿನಗಳಿಗೆ ವಿಭಜಿಸಿ ಆಹಾರ ಪೂರೈಸಲಾಗುತ್ತಿದೆ.

ಮಹೇಶ್, ಬೆಟ್ಟದ ಮೇಲೆ ಕೋತಿಗಳಿಗೆ ಆಹಾರ ನೀಡುವವ

ಭಕ್ತರು ಕೋತಿಗಳಿಗೆ ಒಂದಿಷ್ಟು ಆಹಾರ ನೀಡಿದರೆ, ಮೂಕ ಪ್ರಾಣಿಗಳ ಹೊಟ್ಟೆ ತುಂಬಲು ಸಹಾಯವಾಗುತ್ತದೆ. ನಾವು ಬೆಟ್ಟಕ್ಕೆ ಹೋದಾಗ ಕೋತಿಗಳ ವೇದನೆ ನೀಡಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ.

ಗೌರಾಪುರ ರುದ್ರೇಶ್ ಪರಿಸರ ಪ್ರೇಮಿ,