ನಾಳೆ ಡಾ.ಬಿ.ಆರ್.ರವಿಕಾಂತೇಗೌಡ ಅಭಿನಂದನಾ ಸಮಾರಂಭ

KannadaprabhaNewsNetwork |  
Published : Sep 26, 2026, 01:15 AM IST
೨೫ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ಬಿ.ಆರ್.ರವಿಕಾಂತೇಗೌಡ ಸ್ನೇಹಬಳಗದ ಎ.ಸಿ.ರಮೇಶ್ ಮಾತನಾಡಿದರು. | Kannada Prabha

ಸಾರಾಂಶ

ಡಾ.ಬಿ.ಆರ್.ರವಿಕಾಂತೇಗೌಡ ತಮ್ಮ ವೃತ್ತಿ ಬದುಕಿನ ವಿಶಿಷ್ಟ ಸೇವೆಗೆ ರಾಷ್ಟ್ರಪತಿಗಳ ಪದಕ, ಎರಡು ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕ ಗಳಿಸಿದ್ದಾರೆ. ಕುವೆಂಪು ಒಂದು ಸಾಂಸ್ಕೃತಿಕ ವಿದ್ಯಮಾನ ಪ್ರಬಂಧ ರಚಿಸಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ-ಲಿಟ್ ಪದವಿ ಪಡೆದಿದ್ದಾರೆ. ಕುಟುಂಬ ಪ್ರೇಮಿಯಾಗಿ ವಿಶಾಲವಾದ ಸ್ನೇಹದಲ್ಲಿ ರುಚಿಶುದ್ಧ ಬದುಕಿನ ಮಾದರಿ ಎನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಡಾ.ಬಿ.ಆರ್.ರವಿಕಾಂತೇಗೌಡ ಅವರಿಗೆ ಸೆ.೨೭ರಂದು ಸಂಜೆ ೫ ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸ್ನೇಹ ಬಳಗದ ಎ.ಸಿ.ರಮೇಶ್ ತಿಳಿಸಿದರು.

ದಿವ್ಯಸಾನ್ನಿಧ್ಯವನ್ನು ಶ್ರೀಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸಾಮೀಜಿ, ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಪೀಠಾಧ್ಯಕ್ಷ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಗೋಪಾಲ್ ಬಿ.ಹೊಸೂರ್, ಬೆಂಗಳೂರು ಸಿಐಡಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಬಿ.ಕೆ.ಶಿವರಾಂ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಬಿ.ಶಂಕರಗೌಡ ಭಾಗವಹಿಸುವರು. ನಿವೃತ್ತ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಉಪಸ್ಥಿತರಿರುವರು. ಕಾರ್ಯಕ್ರಮಕ್ಕೂ ಮುನ್ನ ಸಂಜೆ ೪ ಗಂಟೆಗೆ ಪಂಡಿತ್ ರವೀಂದ್ರ ಸೊರಗಾವಿ ತಂಡದವರಿಂದ ಭಾವ ಗಾಯನ ಆಯೋಜಿಸಲಾಗಿದೆ ಎಂದರು.

ಮಾನವೀಯ ನಡವಳಿಕೆ, ಸಹಾನುಭೂತಿ, ಸಾಂಘಿಕ ಶಕ್ತಿಯಲ್ಲಿ ನಂಬಿಕೆ ಇಟ್ಟು ತಮ್ಮ ಬದುಕಿನ ಸಾತ್ವಿಕತೆಯನ್ನು ರೂಪಿಸಿಕೊಂಡು ಅದರಂತೆ ನಡೆದವರು ಡಾ.ಬಿ.ಆರ್.ರವಿಕಾಂತೇಗೌಡ. ಸುಪ್ರಸಿದ್ಧ ಕತೆಗಾರ ಡಾ.ಬೆಸಗರಹಳ್ಳಿ ರಾಮಣ್ಣನವರ ಪುತ್ರರಾಗಿ ಕನ್ನಡ ಶಾಲೆಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ, ಮೈಸೂರಿನ ಎನ್‌ಐಇ ಸಂಸ್ಥೆಯಿಂದ ಎಂಟೆಕ್ ಪದವಿಯನ್ನು ಪಡೆದು ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಪೊಲೀಸ್ ಇಲಾಖೆಯ ಡಿವೈಎಸ್ಪಿ ಹುದ್ದೆಗೇರಿದರು. ಬಾಲ್ಯದಿಂದಲೂ ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಚರ್ಚೆಗಳ ವಾತಾವರಣದಲ್ಲಿ ಕವಿ ಹೃದಯದವರಾಗಿ ಬೆಳೆದ ಅವರಿಗೆ ಪೊಲೀಸ್ ಒಲ್ಲದ ಉದ್ಯೋಗವಾಗಿತ್ತು. ಆದರೂ ತಂದೆ ಮತ್ತು ಹಿತೈಷಿಗಳ ಒತ್ತಾಯದಿಂದ ಇಲಾಖೆಗೆ ಬಂದ ಅವರಿಗೆ ಜನರಿಗೆ ನೆರವಾಗಲು ಅತ್ಯುತ್ತಮ ಅವಕಾಶ ಎಂಬುದು ಅರಿವಾಯಿತು ಎಂದರು.

ಡಿವೈಎಸ್ಪಿಯಿಂದ ಆರಂಭವಾದ ವೃತ್ತಿ ಬದುಕು ಐಜಿಪಿ ಹುದ್ದೆಯವರೆಗೆ ಮುಂದುವರೆಯಿತು. ಹುಬ್ಬಳ್ಳಿಯಲ್ಲಿ ಅನಿಯಂತ್ರಿತವಾಗಿ ನಡೆಯುತ್ತಿದ್ದ ಕಳ್ಳ ಮದ್ಯ ದಂಧೆಗೆ ಕಡಿವಾಣ, ಭಯೋತ್ಪಾದನೆಯಂಥ ಹಲವು ಗಂಭೀರ ಪ್ರಕರಣಗಳನ್ನು ಪತ್ತೆಹಚ್ಚಿ ಆಗಬಹುದಾಗಿದ್ದ ಅನಾಹುತಗಳು ತಪ್ಪಿದವು. ಎದುರಿಗೆ ವಜ್ರದಷ್ಟು ಕಠಿಣವಾಗಿ ನಿಲ್ಲುತ್ತಿದ್ದ ಅವರಲ್ಲಿ ನೊಂದವರನ್ನು ಸಂತೈಸುವ ತಾಯಿ ಹೃದಯವಿತ್ತುದಸ. ಪೊಲೀಸ್ ಕರ್ತವ್ಯದ ಜೊತೆಯಲ್ಲೇ ಇಲಾಖೆಯ ಕಾರ್ಯವೈಖರಿ ಸುಧಾರಣೆಗೆ ಕನ್ನಡ ಭಾಷೆಯ ಬಳಕೆಗೆ ತಮ್ಮ ವಿನೂತನ ದೃಷ್ಟಿಯಿಂದ ಹೊಸ ಆಯಾಮ ನೀಡಿದರು ಎಂದರು.

ತಮ್ಮ ವೃತ್ತಿ ಬದುಕಿನ ವಿಶಿಷ್ಟ ಸೇವೆಗೆ ರಾಷ್ಟ್ರಪತಿಗಳ ಪದಕ, ಎರಡು ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕ ಗಳಿಸಿದ್ದಾರೆ. ಕುವೆಂಪು ಒಂದು ಸಾಂಸ್ಕೃತಿಕ ವಿದ್ಯಮಾನ ಪ್ರಬಂಧ ರಚಿಸಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ-ಲಿಟ್ ಪದವಿ ಪಡೆದಿದ್ದಾರೆ. ಕುಟುಂಬ ಪ್ರೇಮಿಯಾಗಿ ವಿಶಾಲವಾದ ಸ್ನೇಹದಲ್ಲಿ ರುಚಿಶುದ್ಧ ಬದುಕಿನ ಮಾದರಿ ಎನಿಸಿದ್ದಾರೆ ಎಂದು ಬಣ್ಣಿಸಿದರು.

ಗೋಷ್ಠಿಯಲ್ಲಿ ಲೋಕಾನಂದ, ಮುರಳಿ, ರಾಕೇಶ್, ದೇವೇಗೌಡ, ಕೃಷ್ಣೇಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ಸಂರಕ್ಷಿಸಿದರೆ ಮನುಷ್ಯನ ಆರೋಗ್ಯ ಸುಧಾರಣೆ: ಕೆ.ಆರ್.ಶ್ರೀನಿವಾಸ್
ಆರೋಗ್ಯಯುತ ಜೀವನಕ್ಕೆ ಕ್ರೀಡೆಗಳು ಅವಶ್ಯಕ: ಎ.ಸಿ.ಗೀತಾ