ಬ್ಯಾಡಗಿ:ಕರ್ತವ್ಯ ನಿರತ ಮಹಿಳಾ ಬಸ್ ನಿರ್ವಾಹಕಿ ಎಂಬುದನ್ನೂ ಲೆಕ್ಕಿಸದೆ, ಪ್ರಯಾಣಿಕನೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿ, ಬಟ್ಟೆ ಹರಿದು ಸಾರ್ವಜನಿಕವಾಗಿ ಎಳೆದಾಡಿದ ಘಟನೆ ಶನಿವಾರ ಬೆಳಗ್ಗೆ ತಡಸ ಹಾಗೂ ಅಗಸನಹಳ್ಳಿ ಗ್ರಾಮದ ಮಧ್ಯದಲ್ಲಿ ನಡೆದಿದೆ.
ಅಷ್ಟಕ್ಕೂ ನಡೆದಿದ್ದೇನು?: ಹಿರೇಕೆರೂರಿನಿಂದ ಬ್ಯಾಡಗಿ ಮಾರ್ಗವಾಗಿ ಸವದತ್ತಿಗೆ ಪ್ರತಿನಿತ್ಯ ಸಂಚರಿಸುವ ಬಸ್ ಶನಿವಾರ ಬೆಳಗ್ಗೆ ಎಂದಿನಂತೆ ತಡಸ ಗ್ರಾಮದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತ್ತು. ಇದೇ ಸಂದರ್ಭದಲ್ಲಿ ಬಸ್ ಹಿಂಭಾಗದಲ್ಲಿ ಮತ್ತೊಂದು ಬಸ್ ಆಗಮಿಸಿತ್ತು. ಮೊದಲ ಬಸ್‌ನಲ್ಲಿ ಸ್ಥಳಾವಕಾಶವಿಲ್ಲದ ಕಾರಣ, ಹತ್ತಿದ್ದ ಕೆಲ ವಿದ್ಯಾರ್ಥಿಗಳು ಕೆಳಗಿಳಿದು ಹಿಂದಿನ ಬಸ್‌ನಲ್ಲಿ ತೆರಳಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಜಾಫರ್, ವಿದ್ಯಾರ್ಥಿಗಳನ್ನು ಬಸ್‌ನಿಂದ ಏಕೆ ಕೆಳಗಿಳಿಸಿದ್ದೀರಿ ಎಂದು ಪ್ರಶ್ನಿಸಿ ನಿರ್ವಾಹಕಿ ಹುಲಿಗೆಮ್ಮ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ನಿರ್ವಾಹಕಿಯ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾನೆ ಎನ್ನಲಾಗಿದೆ.
ಬಸ್ ಸಂಚರಿಸುತ್ತಿದ್ದರೂ ಆರೋಪಿ ಜಗಳ ಮುಂದುವರಿಸಿದ್ದಾನೆ. ಅಗಸನಹಳ್ಳಿ ಗ್ರಾಮದ ಸಮೀಪ ಬರುತ್ತಿದ್ದಂತೆ ಏಕಾಏಕಿ ನಿರ್ವಾಹಕಿ ಮೇಲೆ ಹಲ್ಲೆ ನಡೆಸಿದ್ದಾನೆ. ಹಣೆಗೆ ಹೊಡೆದು, ತಲೆಯನ್ನು ಬಸ್‌ನ ಸೀಟಿಗೆ ಬಡಿದು, ಸಾರ್ವಜನಿಕವಾಗಿ ಎಳೆದಾಡಿದ್ದಾನೆ. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿದ್ದ ಮಹಿಳೆಯ ಸಮವಸ್ತ್ರವನ್ನೂ ಹರಿದು ಹಾಕಿದ್ದಾನೆ. ಮಹಿಳಾ ಸಿಬ್ಬಂದಿ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ಕಂಡು ಬೆಚ್ಚಿಬಿದ್ದ ಪ್ರಯಾಣಿಕರು ಹಾಗೂ ಬಸ್ ಚಾಲಕ ತಕ್ಷಣ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಘಟನೆಯ ಬಳಿಕ ಚಾಲಕ ಬಸ್ ಸಮೇತ ಪೊಲೀಸ್ ಠಾಣೆಗೆ ಆಗಮಿಸಿ, ಹಲ್ಲೆ ನಡೆಸಿದ ಪ್ರಯಾಣಿಕನ ವಿರುದ್ಧ ದೂರು ದಾಖಲಿಸಿದ್ದಾರೆಮಹಿಳಾ ಸಿಬ್ಬಂದಿಗೇ ರಕ್ಷಣೆ ಇಲ್ಲವೇ?: ಸಾರ್ವಜನಿಕ ಸಾರಿಗೆಯಲ್ಲಿ ಪ್ರತಿನಿತ್ಯ ನೂರಾರು ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಮಹಿಳಾ ಸಿಬ್ಬಂದಿಯ ಮೇಲೆಯೇ ಇಂತಹ ಹಲ್ಲೆಗಳು ನಡೆದರೆ, ಅವರ ಸುರಕ್ಷತೆಯ ಹೊಣೆ ಯಾರು ಹೊರುತ್ತಾರೆ? ಪ್ರಯಾಣಿಕರೊಂದಿಗೆ ಸಣ್ಣಪುಟ್ಟ ವಿಚಾರಕ್ಕೆ ವಾಗ್ವಾದ ನಡೆದರೂ ಕಾನೂನನ್ನು ಕೈಗೆತ್ತಿಕೊಂಡು ಮಹಿಳೆಯರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿಗೆ ಕಡಿವಾಣ ಬೀಳಬೇಕಿದೆ.