ಕಾರಟಗಿಯಲ್ಲಿ ಶ್ರೀ ಸಿದ್ಧೇಶ್ವರ ಬಯಲು ರಂಗಮಂದಿರದ ಆವರಣದಲ್ಲಿ ಶನಿವಾರ ಪ್ರಾರಂಭವಾದ ಜಿಲ್ಲಾ ೧೫ನೇ ಸಾಹಿತ್ಯ ಸಮ್ಮೇಳನದಲ್ಲಿ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಅಧ್ಯಕ್ಷೀಯ ಭಾಷಣ ಮಾಡಿದರು.
ಎ.ಜಿ. ಕಾರಟಗಿ
ರಾಜಾ ಹಿರೇರಂಗಪ್ಪ ನಾಯಕ ವೇದಿಕೆ, ಕಾರಟಗಿ:ಪದವನರಿದು ನುಡಿಯಲುಂ ನುಡೀ
ದುದನರಿಯದಾರಯಲು ಮಾರ್ಪರಾ ನಾಡವರ್ಗಗಳ್ ಚದುದರ್ ನಿಜದಿಂದಂ ಕುರಿತೊ ದದೆಯುಂ
ಕಾವ್ಯ ಪ್ರಯೋಗ ಪರಿಣಿತ ಮತಿಗಳ್- ಕವಿರಾಜಮಾರ್ಗಕಾರ
ಕನ್ನಡ ಸಾಹಿತ್ಯ ಸಮ್ಮೇಳನಗಳು ಕೇವಲ ಜಾತ್ರೆಗಳಾಗದೆ, ನಾಡಿನ ಭೂತಕಾಲದ ಇತಿಹಾಸವನ್ನು ಸ್ಮರಿಸುವ, ವರ್ತಮಾನದ ಸಮಸ್ಯೆಗಳನ್ನು ಚರ್ಚಿಸುವ ಹಾಗೂ ಭವಿಷ್ಯದ ಅಭಿವೃದ್ಧಿಗೆ ಹೊಸ ದಾರಿಗಳನ್ನು ಕಂಡುಕೊಳ್ಳುವ ಚಿಂತನಾ ವೇದಿಕೆಗಳಾಗಬೇಕು ಎಂದು ಕೊಪ್ಪಳ ಜಿಲ್ಲಾ ೧೫ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಹೇಳಿದರು.ಇಲ್ಲಿನ ಶ್ರೀ ಸಿದ್ಧೇಶ್ವರ ಬಯಲು ರಂಗಮಂದಿರದ ಆವರಣದಲ್ಲಿ ಶನಿವಾರ ಪ್ರಾರಂಭವಾದ ಜಿಲ್ಲಾ ೧೫ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದರು.
ಭಾಷಣದುದ್ದಕ್ಕೂ ಜಿಲ್ಲೆಯ ವಿವಿಧ ಕವಿಗಳ ಕವಿತೆಯ ಸಾಲುಗಳನ್ನು ಸಂದರ್ಭಕ್ಕೆ ಅನುಗುಣವಾಗಿ ವಾಚಿಸಿದ ಸಮ್ಮೇಳನದ ಸರ್ವಾಧ್ಯಕ್ಷರು, ತಮ್ಮ ಭಾಷಣದಲ್ಲಿ ನಮ್ಮ ಹಿರಿಮೆ, ನಮ್ಮ ಕರೆ ಮತ್ತು ನಮ್ಮ ಮೊರೆ ಎಂಬ ಮೂರು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದರು.ನಮ್ಮ ಹಿರಿಮೆ: ಕೊಪ್ಪಳ ಜಿಲ್ಲೆಯು ಹತ್ತು ಸಾವಿರ ವರ್ಷಗಳಿಗೂ ಮೀರಿದ ಮಾನವ ಇತಿಹಾಸ, ಬೃಹತ್ ಶಿಲಾಯುಗದ ಸಮಾಧಿಗಳು, ಹಿರೇಬೆಣಕಲ್ನ ಮೊರೇರಗುಡ್ಡದ ಸ್ಮಾರಕಗಳು ಹಾಗೂ ಆದಿಮ ಜನರ ಗವಿಚಿತ್ರಗಳ ಮೂಲಕ ವಿಶಿಷ್ಟ ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ಮೌರ್ಯರು, ಶಾತವಾಹನರು, ಕದಂಬರು, ಸಿಂಧರು, ಕುಮ್ಮಟದ ಅರಸರು, ಕನಕಗಿರಿ ಪಾಳೆಯಗಾರರು ಸೇರಿದಂತೆ ಅನೇಕ ರಾಜಮನೆತನಗಳು ಈ ನೆಲವನ್ನು ಆಳಿವೆ. ಕನ್ನಡದ ಆದಿಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ವರ್ಣಿತವಾದ ಕನ್ನಡಿಗರ ಭಾಷಾಪ್ರೇಮ, ವಿವೇಕ, ಕಾವ್ಯಪ್ರತಿಭೆ ಮತ್ತು ಅಭಿಮಾನ ನಮ್ಮ ನಾಡಿನ ಹೆಮ್ಮೆಯಾಗಿದೆ. ಕುಮಾರರಾಮನ ವೀರತೆ, ಪರನಾರಿ ಸಹೋದರತ್ವದ ಆದರ್ಶ, ಚಿದಾನಂದಾವಧೂತರ ದೇವಿಪುರಾಣ ಹಾಗೂ ಕಲ್ಲಿನಾಥ ಶಾಸ್ತ್ರಿಗಳ ಶರಣಬಸವೇಶ್ವರ ಪುರಾಣಗಳು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ವಿಮೋಚನಾ ಚಳವಳಿಗಳಲ್ಲಿಯೂ ಜಿಲ್ಲೆಯ ಜನರ ಕೊಡುಗೆ ಸ್ಮರಣೀಯವಾಗಿದೆ. ಈ ನೆಲದ ಸಾಹಿತ್ಯ, ಕಲೆ, ರಂಗಭೂಮಿ, ಸಂಗೀತ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರು ಹಾಗೂ ಇಂದಿನ ಸೃಜನಶೀಲ ಮನಸ್ಸುಗಳು ನಮ್ಮ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆಯಾಗಿದ್ದಾರೆ.
ನಮ್ಮ ಮೊರೆ: ಪರಿಸರ ಮಾಲಿನ್ಯ ಉಂಟುಮಾಡುವ ಕಾರ್ಖಾನೆಗಳ ವಿಸ್ತರಣೆಗೆ ಕಡಿವಾಣ ಹಾಕಿ ಜನರ ಆರೋಗ್ಯ, ನೆಲ, ಜಲ ಮತ್ತು ಗಾಳಿಯನ್ನು ರಕ್ಷಿಸಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು. ಎಲ್ಲ ಮಾದರಿಯ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದರು.ಹಿರೇಬೆಣಕಲ್, ಅಂಜನಾದ್ರಿ, ಕೊಪ್ಪಳ ಕೋಟೆ, ಕುಮ್ಮಟದುರ್ಗ, ಕನಕಗಿರಿ, ಆನೆಗೊಂದಿ ಸೇರಿದಂತೆ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಬೇಕು. ಆನೆಗೊಂದಿ ಮತ್ತು ಏಳುಗುಡ್ಡ ಪ್ರದೇಶದ ಪರಂಪರೆ ಹಾಗೂ ಜನರ ಬದುಕನ್ನು ರಕ್ಷಿಸಲು ಪ್ರತ್ಯೇಕ ಕಿಷ್ಕಿಂಧಾ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಆಗ್ರಹಿಸಿದರು.
ನವಲಿ ಸಮಾನಾಂತರ ಜಲಾಶಯಕ್ಕೆ ಪರ್ಯಾಯವಾಗಿ ಬ್ಯಾರೇಜ್ಗಳ ನಿರ್ಮಾಣದ ಸಾಧ್ಯತೆಯನ್ನು ಪರಿಶೀಲಿಸಿ ರೈತರ ಹಿತ ಕಾಪಾಡಬೇಕು. ನವಲಿ ರೈಸ್ ಟೆಕ್ನಾಲಜಿ ಪಾರ್ಕ್ನ್ನು ಕೃಷಿ ಆಧಾರಿತ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ದರೋಜಿ-ಗಂಗಾವತಿ ರೈಲು ಮಾರ್ಗಕ್ಕೆ ಅನುದಾನ ನೀಡಿ ಕಾಮಗಾರಿ ಆರಂಭಿಸಬೇಕು. ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಸ್ವಂತ ಕಟ್ಟಡ, ಕಲಾಗ್ರಾಮ ಮತ್ತು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.