ನುಡಿ ತೋರಣ ಕಟ್ಟಿದ ಭತ್ತದ ನಾಡು ಕಾರಟಗಿಯಲ್ಲಿ ಶನಿವಾರ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಕಣ್ಮನ ತಣಿಸುವಂತಿತ್ತು.

ಕಾರಟಗಿ: ನುಡಿ ತೋರಣ ಕಟ್ಟಿದ ಭತ್ತದ ನಾಡು ಕಾರಟಗಿಯಲ್ಲಿ ಶನಿವಾರ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಕಣ್ಮನ ತಣಿಸುವಂತಿತ್ತು.

ಸುಡಿ ಬಿಸಿಲನ ನಡುವೆಯೂ ಅಕ್ಷರ ಲೋಕಜಾತ್ರೆ ಸಡಗರ ಸಂಭ್ರಮದ ಜನ ನೋಡುವಂತೆ ಮಾಡಿತು. ಇಲ್ಲಿನ ವಿಶೇಷ ಎಪಿಎಂಸಿ ಆವರಣದಿಂದ ೧೫ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಶರಣಬಸಪ್ಪ ಕೋಲ್ಕಾರ್ ದಂಪತಿ ಮೊದಲು ಆಗಮಿಸಿ ಅಲ್ಲಿನ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾರೋಟ ಏರಿದರು. ಶಿಕ್ಷಣ ಪ್ರೇಮಿ ಹಾಗೂ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಕನ್ನಡ ಧ್ವಜವನ್ನು ಹಾರಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಅಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದ ಮಾತನಾಡಿದ ನೆಕ್ಕಂಟಿ ಸೂರಿಬಾಬು, ಇಂಥ ಐತಿಹಾಸಿಕ ಸಮ್ಮೇಳನದ ಮೆರವಣಿಗೆ ಚಾಲನೆ ನೀಡಲು ಅವಕಾಶ ದೊರೆತಿದ್ದು, ಈ ನಾಡಿನಲ್ಲಿ ಹುಟ್ಟಿದಕ್ಕೆ ಪುಣ್ಯ ಮಾಡಿರುವೆ. ನನ್ನ ಹೆತ್ತ ತಾಯಿ ತೆಲುಗು ಭಾಷಿಕರು. ಅವರು ಮೊದಲ ತಾಯಿ ಆದರೆ, ನನ್ನನ್ನು ಸಾಕು ಸಲಹಿ ಬೆಳೆಸಿದ್ದು ಹೊತ್ತಿದ್ದು ಕನ್ನಡಾಂಬೆ ತಾಯಿ ಭುವನೇಶ್ವರಿ ಎರಡನೇ ತಾಯಿ ಎಂದರು.

ಬೆಳಗ್ಗೆ ೧೦.೫೦ಕ್ಕೆ ಗಂಟೆಗೆ ಆರಂಭಗೊಂಡ ಮೆರವಣಿಗೆ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಪಟ್ಟಣದ ಆರ್.ಜಿ. ರಸ್ತೆ ಮೂಲಕ ಕನಕದಾಸ ವೃತ್ತ, ಹೇಮರೆಡ್ಡಿ ಮಲ್ಲಮ್ಮ ವೃತ್ತದಿಂದ ದಲಾಲಿ ಬಜಾರ್ ಮೂಲಕ ಮೂರು ಗಂಟೆಗಳ ಕಾಲ ಸಾಗಿ ಶ್ರೀ ಸಿದ್ಧೇಶ್ವರ ರಂಗಮಂದಿರದಲ್ಲಿನ ಮುಖ್ಯ ವೇದಿಕೆ ತಲುಪಿತು.

ಮೆರವಣಿಗೆಯುದ್ದಕ್ಕೂ ೫೦ ಕುಂಭ-ಕಳಸ ಹೊತ್ತ ಮಹಿಳೆಯರು, ಬಳ್ಳಾರಿ ಜಿಲ್ಲೆಯ ವಸಂತ ಕುಮಾರ ತಂಡದ ಕಹಳೆವಾದನ, ವಿಜಯನಗರ ಜಿಲ್ಲೆಯ ಕೆ. ರಾಮಾಂಜನೇಯ ಮತ್ತು ಸಂಗಡಿಗರ ಡೊಳ್ಳು ಕುಣಿತ, ಚಿರ್ಚಿನಗುಡ್ಡ ತಾಂಡದ ವಿದ್ಯಾರ್ಥಿನಿಯರ ಲಂಬಾಣಿ ನೃತ್ಯ, ರಾಮನಸಾಗರ ಕಹಳೆ ವಾದನ, ನವಿಲು ಕುಣಿತ, ಕೋಲಾಟ, ವೀರಗಾಸೆ, ಸಿದ್ದಾಪುರದ ಹಗಲುವೇಷ, ಸೇರಿದಂತೆ ಬುಡಕಟ್ಟು ಕಲಾ ಪ್ರಕಾರಗಳು ಪಾಲ್ಗೊಂಡು ಕಳೆ ತುಂಬಿದವು. ಇಲ್ಲಿನ ಗೋಬಲ್ ಶಾಲಾ ವಿದ್ಯಾರ್ಥಿಗಳು ನೂರು ಮೀಟರ್ ಉದ್ದದ ಕನ್ನಡ ಬಾವುಟ ಹಿಡಿದು ಸಾಗಿದರು.