ಮುಂಡರಗಿ: ಪಟ್ಟಣದಲ್ಲಿನ ಕೈಗಾರಿಕಾ ವಸಾಹತು ಪ್ರದೇಶ ಸೇರಿದಂತೆ ಸಾರ್ವಜನಿಕರು ನಿವೇಶನ ಮಾಡಿ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ನಾಗರಿಕ ಸೌಲಭ್ಯ ಹಾಗೂ ಉದ್ಯಾನವನ ನಿರ್ಮಾಣಕ್ಕಾಗಿ ಬಿಟ್ಟಿರುವ ಖಾಲಿ ಜಾಗೆಗಳನ್ನು ಅನೇಕರು ನಿಯಮ ಬಾಹಿರವಾಗಿ ಬಳಸಿಕೊಳ್ಳುತ್ತಿದ್ದು, ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳು ಆ ಜಾಗೆ ಗುರುತಿಸಿ ತಂತಿ ಬೇಲಿ ಹಾಕಿಸಬೇಕು ಎಂದು ಸದಸ್ಯ ಲಿಂಗರಾಜಗೌಡ ಪಾಟೀಲ ಒತ್ತಾಯಿಸಿದರು. ಅವರು ಮಂಗಳವಾರ ಪುರಸಭೆ ಸಭಾಭವನದಲ್ಲಿ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಕೈಗಾರಿಕಾ ವಸಾಹತು ಪ್ರದೇಶ ಸೇರಿದಂತೆ ಪಟ್ಟಣದ್ಯಂತ ಈಗಾಗಲೇ ಅನೇಕ ಕಡೆಗಳಲ್ಲಿ ಪುರಸಭೆಗೆ ಸಂಬಂಧಿಸಿದ ಖಾಲಿ ನಿವೇಶನ ವಶಪಡಿಸಿಕೊಂಡಿದ್ದು ಕಂಡು ಬಂದಿದ್ದು, ತಕ್ಷಣವೇ ಅವುಗಳನ್ನು ಪತ್ತೆ ಹಚ್ಚಿ ಗುರುತಿಸುವ ಕಾರ್ಯವಾಗಬೇಕು ಎಂದರು.ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನ್ನವರ, ಈ ಕೂಡಲೇ ನಾಗರಿಕ ಸೌಲಭ್ಯ ಹಾಗೂ ಉದ್ಯಾನವನದ ನಿವೇಶನಗಳಿಗೆ ಸದಸ್ಯರು ಹೇಳುವ ಪ್ರಕಾರ ತಂತಿಬೇಲಿ ಅಳವಡಿಸುವುದಾಗಿ ಭರವಸೆ ನೀಡಿದರು.
ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಪಟ್ಟಣದ ಗದಗ ರಸ್ತೆಯಲ್ಲಿರುವ ಅನ್ನದಾನೀಶ್ವರ ರುದ್ರಭೂಮಿಯಲ್ಲಿ ನಿತ್ಯವೂ ಸಾರ್ವಜನಿಕರು ಬಹಿರ್ದೆಸೆಗೆ ತೆರಳುತ್ತಿದ್ದು, ಪಟ್ಟಣದ ಜನತೆ ಶವಸಂಸ್ಕಾರಕ್ಕೆ ಬಂದಾಗ ನಮಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿಂದೆಯೇ ಅದಕ್ಕಾಗಿ ಅಂದಾಜು ಪತ್ರಿಕೆ ತಯಾರಿಸಲು ತಿಳಿಸಲಾಗಿತ್ತು. ಅಲ್ಲಿ ತಕ್ಷಣವೇ ಗೇಟು ಅಳವಡಿಸುವ ಕಾರ್ಯ ಮಾಡಬೇಕು ಎಂದರು. ಇದಕ್ಕೆ ಪುರಸಭೆ ಅಭಿಯಂತರ ಉತ್ತರಿಸಿ ಈಗಾಗಲೇ ಅಂದಾಜು ಪತ್ರಿಕೆ ತಯಾರಿಸಿದ್ದು, ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.ಪಟ್ಟಣದಲ್ಲಿ ಕಳೆದ ವರ್ಷದಿಂದ ನಗರೋತ್ಥಾನ ಕಾಮಗಾರಿ ನಡೆಯುತ್ತಿದ್ದು, ವಿವಿಧ ವಾರ್ಡ್‌ಗಳಲ್ಲಿ ಕಾಮಗಾರಿ ವಿಳಂಬವಾಗುತ್ತಿವೆ. ಇದುವರೆಗೂ ಯಾವೊಬ್ಬ ಸದಸ್ಯರೂ ಟೆಂಡರ್ ಪಡೆದ ಗುತ್ತಿಗೆದಾರರ ಮುಖ ನೋಡಿಲ್ಲ. ಪಟ್ಟಣದಲ್ಲಿ ಕಾಮಗಾರಿ ನಡೆಯುತ್ತಿರುವ ವಾರ್ಡ್‌ನ ಜನತೆ ನಮಗೆ ಛೀಮಾರಿ ಹಾಕುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಕೇಳಿದರೆ ಸೌಜನ್ಯಕ್ಕೂ ಸರಿಯಾಗಿ ಮಾತನಾಡುವುದಿಲ್ಲ ಎಂದು ಬಹುತೇಕ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಅಭಿಯಂತರರು ತಮಗೆ ಬೇಕಾದಾಗ ಕಾಮಗಾರಿ ಟೆಂಡರ್ ಕರೆದು ಮಂಜೂರಾತಿ ಕೊಡುತ್ತಿದ್ದಾರೆ, ಇದು ಸರಿಯೇ ಹಾಗೂ ಪಟ್ಟಣದ ಗರಡಿಮನಿ ಓಣಿಯಲ್ಲಿ ₹23 ಲಕ್ಷ ಕಾಮಗಾರಿ ನಡೆದು ಮೂರು ತಿಂಗಳಾದರೂ ಇನ್ನೂ ಮುಗಿದಿಲ್ಲ ಏಕೆ ಎಂದು ಲಿಂಗರಾಜಗೌಡ ಪಾಟೀಲ ಪ್ರಶ್ನಿಸಿದರೆ, ನಾನು ಸದಸ್ಯನಾಗಿ, ಉಪಾಧ್ಯಕ್ಷನಾಗಿ ಮತ್ತೆ ಸದಸ್ಯನಾಗಿ ಅಧಿಕಾರ ಮುಗಿಯುತ್ತಾ ಬಂದರೂ ನನ್ನ 5ನೇ ವಾರ್ಡ್‌ನಲ್ಲಿ ಹಾಕಿದ ₹ 24.50 ಲಕ್ಷಗಳ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ ಏಕೆ ಎಂದು ಶಿವಪ್ಪ ಚಿಕ್ಕಣ್ಣವರ ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ನಮ್ಮಲ್ಲಿ ಅಭಿಯಂತರರ ಹುದ್ದೆ ಖಾಲಿ ಇದ್ದು, ಬೇರೆಡೆಯಿಂದ ನಿಯೋಜನೆ ಮಾಡಿದ್ದರಿಂದ ಅವರು ಸರಿಯಾಗಿ ಸಮಯ ಕೊಡಲು ಆಗುತ್ತಿಲ್ಲವಾದ್ದರಿಂದ ಕಾಮಗಾರಿಗಳ ಪ್ರಾರಂಭಕ್ಕೆ ವಿಳಂಬವಾಗುತ್ತಿದೆ ಎಂದು ಸಮಜಾಯಿಸಿದರು. ಆದರೆ ಸದಸ್ಯರು ಶೀಘ್ರವೇ ಎಲ್ಲರೂ ಜಿಲ್ಲಾಧಿಕಾರಿಗೆ ಭೇಟಿ ಮಾಡಿ ನಮ್ಮ ಪುರಸಭೆಗೆ ಕಾಯಂ ಅಭಿಯಂತರರನ್ನು ನೇಮಿಸುವಂತೆ ಒತ್ತಾಯಿಸೋಣ ಎಂದರು.
ಪಟ್ಟಣದಲ್ಲಿ ಸಾರ್ವಜನಿಕರು ನಮಗೆ ಸಣ್ಣ ಪುಟ್ಟ ಸಮಸ್ಯೆ ಹೇಳುತ್ತಾರೆ. ಅವುಗಳನ್ನು ಪರಿಹರಿಸುವುದಕ್ಕಾಗಿ ಸಂಬಂಧಿಸಿದ ವಿಭಾಗಗಳ ಅಧಿಕಾರಿಗಳಿಗೆ ತಿಳಿಸಿದರೆ ಅವರು ಸದಸ್ಯರ ಮಾತಿಗೆ ಮನ್ನಣೆ ನೀಡುವುದಿಲ್ಲ. ಅಧಿಕಾರಿಗಳು ಸದಸ್ಯರ ಮಾತಿಗೆ ಗೌರವ ಕೊಟ್ಟು ಕೆಲಸ ಮಾಡುವುದಾದರೆ ಮಾಡಿ ಇಲ್ಲದಿಲ್ಲದೆ ಬೇರೆಡೆ ಹೋಗಿರಿ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿಯೂ ಬಯಲು ಬಹಿರ್ದೇಸೆ ಬಹಿರಂಗವಾಗಿಯೇ ನಡೆಯುತ್ತಿದ್ದು, ಪುರಸಭೆ ಅಧಿಕಾರಿಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ಗಮನಹರಿಸುತ್ತಿಲ್ಲ. ಮೇಲಾಗಿ ಅವರು ಕೇಂದ್ರ ಸರ್ಕಾರಕ್ಕೆ ಬಯಲು ಬಹುರ್ದೇಸೆ ಮುಕ್ತ ಪಟ್ಟಣ ಎಂದು ತಿಳಿಸುವುದ್ಕಾಗಿ ಇತ್ತೀಚೆಗೆ ಪ್ರಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು,ಅದು ಸರಿಯಲ್ಲ. ಮೊದಲು ನಿಜವಾದ ಬಯಲು ಬಹಿರ್ದೇಸೆ ಮುಕ್ತ ಪಟ್ಟಣ ಮಾಡೋಣ ಎಂದು ಸದಸ್ಯ ಪ್ರಹ್ತಾದ ಹೊಸಮನಿ ತಿಳಿಸಿದರು. ತಕ್ಷಣವೇ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಪಟ್ಟಣದ ಹೆಸರೂರು ರಸ್ತೆ ಹಾಗೂ ಅದರ ಪಕ್ಕದಲ್ಲಿನ ಒಳ ರಸ್ತೆ, ಮುಂಡರಗಿ-ಶಿರಹಟ್ಟಿ ರಸ್ತೆಯ ಪಕ್ಕದಲ್ಲಿ ಎಲ್ಲೆಂದರಲ್ಲಿ ಪಟ್ಟಣದ ವಿವಿಧ ವ್ಯಾಪಾರಸ್ಥರು ತಮ್ಮ ಕಸವನ್ನು ಇಲ್ಲಿ ತಂದು ಹಾಕುತ್ತಿದ್ದಾರೆ. ಅದಕ್ಕಾಗಿ ಜಾಗೃತಿ ಮೂಡಿಸಬೇಕು. ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಒತ್ತಾಯಿಸಿದರು. ಪಟ್ಟಣದಲ್ಲಿ ಕೋಳಿ ಮಾಂಸ, ಕುರಿ ಮಾಂಸ, ಮೀನು ಮಾರಾಟದ ಅಂಗಡಿಗಳನ್ನು ಪಟ್ಟಣದ ಹೊರಭಾಗದಲ್ಲಿ ಜಾಗೆ ಗುರುತಿಸಿ ಮಾಡಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಸೂಕ್ತ ಜಾಗೆ ಹಾಗೂ ನೀರು, ಬೆಳಕು ಎಲ್ಲ ವ್ಯವಸ್ಥೆ ಇರುವ ಜಾಗೆ ಗುರುತಿಸಿ ನಿರ್ಧರಿಸುವುದಾಗಿ ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.ಅಂಬೇಡ್ಕರ್ ನಗರದಲ್ಲಿನ ಬಹುತೇಕ ನಿವಾಸಿಗಳಿಗೆ ಉತಾರವಿರುವುದಿಲ್ಲ. ಆದ್ದರಿಂದ ಎಲ್ಲರಿಗೂ ತಕ್ಷಣವೇ ಉತಾರ ನೀಡುವ ವ್ಯವಸ್ಥೆಯಾಗಬೇಕು ಎಂದು ಸದಸ್ಯರಾದ ಪವನ್ ಮೇಟಿ ಹಾಗೂ ಸಂತೋಷ ಹಿರೇಮನಿ ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಾಯಿ ಸಮೀತಿ ಅಧ್ಯಕ್ಷ ಮಹ್ಮದರಫಿ ಮುಲ್ಲಾ, ಸದಸ್ಯರಾದ ತಿಮ್ಮಪ್ಪ ದಂಡಿನ, ಜ್ಯೋತಿ ಹಾನಗಲ್, ಸುಮಾ ಬಳ್ಳಾರಿ, ಕವಿತಾ ಉಳ್ಳಾಗಡ್ಡಿ, ಪ್ರಕಾಶ ಹಲವಾಗಲಿ, ಪವನ್ ಮೇಟಿ, ಸಂತೋಷ ಹಿರೇಮನಿ, ರೆಹೆಮಾನಸಾಬ್ ಮಲ್ಲನಕೇರಿ, ರಾಜಾಸಾಬ್ ಬೆಟಗೇರಿ, ದೇವಕ್ಕ ದಂಡಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.