ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಅರ್ಚಕ ವಿಜಯ್ ಸಾರಥ್ಯದಲ್ಲಿ ಜರುಗಿದ ಅಮ್ಮನವರ ವಾರ್ಷಿಕ ಪೂಜೆ, ಹೋಮ ಕಾರ್ಯಕ್ರಮಕ್ಕೆ ಜಿಲ್ಲೆ, ಹೊರ ಜಿಲ್ಲೆಗಳಿಂದ ದೇವಿ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಹರಕೆ ಹೊತ್ತ ಕಂಕಣಕಟ್ಟಿಸಿಕೊಂಡ ಭಕ್ತರು ಶುಚಿಭ್ರೂತರಾಗಿ ಮೆಣಸಿನಕಾಯಿ, ಮಂಗಳದ್ರವ್ಯಗಳೊಂದಿಗೆ ದೇವಿ ಗುಡಿಯಲ್ಲಿ ಭಾಗವಹಿಸಿ ದೇವಿ ಸ್ಮರಣೆಗೆ ಹಾಜರಾದರು.
ನಾಡಿನ ಶಾಂತಿ ನೆಮ್ಮದಿ, ರೈತರ ಬದುಕು ಹಸನಾಗಲು ಪ್ರಾರ್ಥಿಸುತ್ತ ದೇವಿಗೆ ಹೋಮ ಕುಂಡದ ಬಳಿ ದೇವಿಗೆ ವಿವಿಧ ಸ್ತ್ರೋತ್ರಗಳನ್ನು ಪಠಿಸಲಾಯಿತು. ಭಕ್ತರು ಸರತಿಯಲ್ಲಿ ನಿಂತು ಹೋಮಕುಂಡಕ್ಕೆ ದೊಡ್ಡದಾದ ತಟ್ಟೆಯಲ್ಲಿ ಮೆಣಸಿನಕಾಯಿ ಹಾಕಿಕೊಂಡು ಅಷ್ಟದ್ರವ್ಯದೊಂದಿಗೆ ಅರ್ಪಿಸಿದರು.ಪ್ರಧಾನ ಅರ್ಚಕ ವಿಜಯ್ ತಮ್ಮ ಪರಿವಾರದೊಂದಿಗೆ ಮೆಣಸಿನಕಾಯಿಯೊಂದಿಗೆ ಮಂಗಳದ್ರವ್ಯ, ನವ ಬಗೆಯ ಅರಿಷಿಣ, ನೈವೇದ್ಯ, ರೇಷ್ಮೆ ವಸ್ತ್ರ, ಕನಕ ಪುಷ್ಪ, ವಿವಿಧ ಪರಿಮಳ ಪುಷ್ಪಗಳನ್ನು ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ದೇವಿಗೆ ಪಂಚಾಮೃತಾಭಿಷೇಕ, ಗಂಗಾಜಲಾಭಿಷೇಕ ನೆರವೇರಿಸಿ ವಿವಿಧ ಆಭರಣ, ವಸ್ತ್ರ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಸಂಜೆ ಹೋಮ ನಡೆದರೆ ರಾತ್ರಿದೇವಿಗೆ ಶ್ರೀನಿವಾಸ ದೇವರ ಅಲಂಕಾರ, ಮಧ್ಯರಾತ್ರಿಯಲ್ಲಿ ಉಯ್ಯಾಲೆ ಸೇವೆ, ಬೆಳಗ್ಗಿನ ಜಾವದೇವಿಗೆ ಸ್ಮಶಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸುಮಂಗಲಿಯರು ದೇವಿಗೆತುಪ್ಪದಆರತಿ ಬೆಳಗಿದರು. ಉಡಿ ತುಂಬಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.ಹೋಮಕ್ಕೂ ಮುನ್ನ ಪ್ರಮುಖ ಬೀದಿಯಲ್ಲಿ ಅಮ್ಮನವರ ಮೆರವಣಿಗೆ. ಗಂಗಾಸ್ನಾನ, ಪೂಜೆ ನಡೆಯಿತು. ಅಷ್ಟೋತ್ತರ ಪಠಣೆ, ಸಹಸ್ರನಾಮಾವಳಿಯಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಸಿಹಿ ಪೊಂಗಲ್, ತೀರ್ಥಪ್ರಸಾದ ವಿತರಿಸಲಾಯಿತು.
ದೇವಿಗೆ ಕುರಿ ಬಲಿ ನೀಡಿನೈವೇದ್ಯ ಅರ್ಪಿಸಿ ಭಕ್ತರಿಗೆ ಭೋಜನ ನೀಡಲಾಯಿತು.