ಕಪ್ಪು ಸೈನಿಕ ಹುಳು-ಅದರ ಲಾಭಗಳ ಬಗ್ಗೆ ಚರ್ಚಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಕಪ್ಪು ಸೈನಿಕ ಹುಳುವಿನ ಸಹಾಯದಿಂದ ಫಲವತ್ತಾದ ಗೊಬ್ಬರ ಮಾಡಬಹುದು ಎಂದು ಶಿವಮೊಗ್ಗ ಕೃಷಿ ಮಹಾ ವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿ ಯಶಸ್ ಹೇಳಿದ್ದಾರೆ.
ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಶಾಖೆಯಿಂದ ಏರ್ಪಡಿಸಿದ್ದ ಕಪ್ಪು ಸೈನಿಕ ಹುಳು ಮತ್ತು ಅದರ ಲಾಭಗಳ ಬಗ್ಗೆ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತು ಅನುಪಯುಕ್ತ ಭಾಗಗಳನ್ನು ಕಪ್ಪು ಸೈನಿಕ ಹುಳುವಿನ ಸಹಾಯದಿಂದ ಫಲವತ್ತಾದ ಗೊಬ್ಬರ ಮಾಡಬಹುದು. ಎರೆಹುಳು ಗೊಬ್ಬರಕ್ಕೆ ಹೋಲಿಸಿದರೆ ಇದರಲ್ಲಿ ಸಾರಜನಕ ರಂಜಕ ಮತ್ತು ಪೊಟ್ಯಾಷ್ ಅಂಶಗಳು ಹೆಚ್ಚಾಗಿರುತ್ತವೆ. ಮನೆಯಲ್ಲಿ ಸಿಗುವ ಯಾವುದೇ ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಶಕ್ತಿ ಕಪ್ಪು ಸೈನಿಕ ಹುಳುಗಳಿಗಿರುತ್ತದೆ, ಗೊಬ್ಬರ ತಯಾರಾಗುವ ಸ್ವಲ್ಪ ಸಮಯದ ಮುನ್ನ ಕೋಶಾವಸ್ಥೆಯಲ್ಲಿರುವ ಹುಳುಗಳನ್ನು ಮೀನು ಮತ್ತು ಕೋಳಿಗಳಿಗೆ ಆಹಾರವನ್ನಾಗಿ ಬಳಸಬಹುದು. ಅದರಲ್ಲಿ ಪ್ರೋಟೀನ್ ಅಂಶ ಯಥೇಚ್ಛವಾಗಿರುವುದರಿಂದ ಕೋಳಿ ಮತ್ತು ಮೀನುಗಳಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದೆ. ಎರೆಹುಳು ಗೊಬ್ಬರಕ್ಕೆ ಕಪ್ಪು ಸೈನಿಕ ಹುಳು ಗೊಬ್ಬರ ಪರ್ಯಾಯವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗ್ರಾಮದ ರೈತರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಉಮಾದೇವಿ, ಕೃಷಿ ವಿದ್ಯಾರ್ಥಿಗಳಾದ ಸಾಗರ್, ಯಶವಂತ್, ಶಮಂತ್, ಪ್ರಜ್ವಲ್, ನಿತಿನ್, ಸಚಿನ್ ನಾಯಕ್, ಹೇಮಂತ ಅರಸ್ ಮತ್ತಿತರರು ಭಾಗವಹಿಸಿದ್ದರು.---------------
ಫೋಟೋ ಇದೆಃ24ಕೆಟಿಆರ್.ಕೆ.16ಃ ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಶಾಖೆಗಳು ವತಿಯಿಂದ ಏರ್ಪಾಡಾಗಿದ್ದ ಕಪ್ಪು ಸೈನಿಕ ಹುಳು ಮತ್ತು ಅದರ ಲಾಭಗಳ ಬಗ್ಗೆ ಚರ್ಚಾ ಕಾರ್ಯಕ್ರಮದಲ್ಲಿ ಕೃಷಿ ವಿದ್ಯಾರ್ಥಿ ಯಶಸ್ ಅವರು ಮಾತನಾಡಿದರು.