ನಾರಾಯಣ ಹೆಗಡೆ
ಮುಂಗಾರುಪೂರ್ವ ಮಳೆ ಜಿಲ್ಲೆಯಲ್ಲಿ ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಬೀಜಕ್ಕಾಗಿ ಪರದಾಡುತ್ತಿರುವ ಜತೆಗೆ ರಸಗೊಬ್ಬರ ಕೊರತೆ ಆತಂಕ ಎದುರಾಗಿದೆ.
ಯುದ್ಧದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ರಸಗೊಬ್ಬರ ಸರಬರಾಜಿನ ಮೇಲೆ ಪರಿಣಾಮ ಬೀರಿದರೆ ಕೃಷಿ ಕಾರ್ಯಕ್ಕೆ ಹಿನ್ನಡೆಯಾದರೆ ಗತಿಯೇನು ಎಂಬ ದುಗುಡ ರೈತರಲ್ಲಿ ಮನೆಮಾಡಿದೆ.ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಬಿತ್ತನೆ ಕಾರ್ಯಕ್ಕೆ ರೈತರು ಸಿದ್ಧತೆ ನಡೆಸುತ್ತಿದ್ದಾರೆ. ಮೇ ಅಂತ್ಯದೊಳಗೆ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ರೈತ ಸಂಪರ್ಕ ಕೇಂದ್ರಗಳು ಹಾಗೂ ಖಾಸಗಿ ಅಂಗಡಿಗಳ ಮುಂದೆ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಮುಗಿಬೀಳುತ್ತಿದ್ದಾರೆ.ಆದರೆ ಇದೇ ಸಮಯದಲ್ಲಿ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರ ಆಮದು ಮೇಲೆ ಪರಿಣಾಮ ಬಿದ್ದರೆ ಮುಂದಿನ ದಿನಗಳಲ್ಲಿ ಕೊರತೆ ಎದುರಾಗಬಹುದು ಎಂಬ ಭೀತಿ ರೈತರಲ್ಲಿ ಮನೆ ಮಾಡಿದೆ. ಹೀಗಾಗಿ ಕೆಲವು ರೈತರು ಮುಂಗಡವಾಗಿ ರಸಗೊಬ್ಬರ ಖರೀದಿಸಲು ಮುಂದಾಗಿದ್ದಾರೆ.ಬಿತ್ತನೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ:ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ 3.28 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಇತ್ತೀಚೆಗೆ ಮೆಕ್ಕೆಜೋಳದ ಕಣಜ ಎಂದು ಗುರುತಿಸಿಕೊಳ್ಳುತ್ತಿರುವ ಹಾವೇರಿ ಜಿಲ್ಲೆಯಲ್ಲಿ ಈ ಬಾರಿಯೂ ಮೆಕ್ಕೆಜೋಳವನ್ನು ಹೆಚ್ಚು ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. 31,710 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 2,55,113 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿದೆ. 12,000 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 8000 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 12,500 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್, 8076 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, 400 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 500 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತುವ ಗುರಿ ಹೊಂದಲಾಗಿದೆ. 2,87,208 ಹೆಕ್ಟೇರ್ ಏಕದಳ, 1137 ಹೆಕ್ಟೇರ್ ದ್ವಿದಳ, 20,535 ಹೆಕ್ಟೇರ್ ಎಣ್ಣೆಕಾಳು ಹಾಗೂ 20,076 ಹೆಕ್ಟೇರ್ ವಾಣಿಜ್ಯ ಬೆಳೆಗಳ ಬಿತ್ತನೆಯ ಗುರಿ ಹೊಂದಲಾಗಿದೆ. ರಸಗೊಬ್ಬರ ಲಭ್ಯತೆ ಎಷ್ಟು?:ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು ಸುಮಾರು 1.41 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಅಂದಾಜಿಸಲಾಗಿದೆ. ಇದರಲ್ಲಿ ಯೂರಿಯಾ, ಡಿಎಪಿ, ಎನ್‌ಪಿಕೆ ಹಾಗೂ ಪೊಟಾಶ್ ಪ್ರಮುಖವಾಗಿವೆ. ಪ್ರಸ್ತುತ ಜಿಲ್ಲೆಗೆ 81 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಪೂರೈಕೆಯಾಗಿದ್ದು, ಇದರಲ್ಲಿ 36 ಸಾವಿರ ಮೆಟ್ರಿಕ್ ಟನ್ ಗೊಬ್ಬರ ವಿತರಿಸಲಾಗಿದೆ. 16000 ಮೆ. ಟನ್ ಯೂರಿಯಾ, 6640 ಮೆ. ಟನ್ ಡಿಎಪಿ, 19400 ಟನ್ ಕಾಂಪ್ಲೆಕ್ಸ್ ಸೇರಿ ಇನ್ನೂ 44984 ಮೆ. ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಮುಂದಿನ ವಾರಗಳಲ್ಲಿ ಇನ್ನಷ್ಟು ಪೂರೈಕೆ ಆಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.ರೈತರ ಆತಂಕ ಏನು?: ಮಳೆ ಚೆನ್ನಾಗಿ ಬಂದಿರುವುದರಿಂದ ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಿದೆ. ಆದರೆ ರಸಗೊಬ್ಬರ ಕೊರತೆ ಬಂದರೆ ಸಂಕಷ್ಟ ಎದುರಾಗಬಹುದು ಎಂದು ಜಿಲ್ಲೆಯ ರೈತರು ಆತಂಕ ವ್ಯಕ್ತ ವ್ಯಕ್ತಪಡಿಸಿದ್ದಾರೆ. ಹಲವೆಡೆಗಳಲ್ಲಿ ಸೋಯಾಬಿನ್ ಹಾಗೂ ಗೋವಿನಜೋಳ ಬೀಜಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಮೊದಲ ಹಂತದಲ್ಲೇ ಸಾಕಷ್ಟು ದಾಸ್ತಾನು ಒದಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ರಸಗೊಬ್ಬರಕ್ಕೂ ಎಫ್‌ಐಡಿ ಕಡ್ಡಾಯಗೊಳಿಸಿರುವುದು, ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟು ಹೀಗೆ ವಿವಿಧ ಕಾರಣ ಹೇಳಿ ರಸಗೊಬ್ಬರ ಅಭಾವವಾದರೆ ಸರ್ಕಾರ ದೊಡ್ಡ ಸವಾಲು ಎದುರಿಸಬೇಕಾಗಬಹುದು. ಬಿತ್ತನೆ ಬೀಜಕ್ಕೆ ಈಗಾಗಲೇ ರೈತರು ಪರದಾಡುತ್ತಿದ್ದಾರೆ. ಡೀಸೆಲ್ ಅಭಾವ ಕೂಡ ಎದುರಾಗಿದ್ದು, ಕೃಷಿ ಯಂತ್ರೋಪಕರಣಗಳನ್ನು ಬಳಸಲಾಗದೇ ಹಿನ್ನಡೆಯಾಗುತ್ತಿದೆ. ಇನ್ನು ರಸಗೊಬ್ಬರ ಕೊರತೆ ಎದುರಾದರೆ ರೈತರ ಸಹನೆಯ ಕಟ್ಟೆ ಒಡೆಯಬಹುದು. ಅದಕ್ಕಾಗಿ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ದಾಸ್ತಾನು, ವಿತರಣೆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ.