
ಕರಾವಳಿ ಉತ್ಸವ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕಾರವಾರಕರಾವಳಿಯ ವೈವಿಧ್ಯತೆ, ಕಲೆ, ಪ್ರವಾಸೋದ್ಯಮ ಉತ್ತೇಜನಕ್ಕೆ ಕರಾವಳಿ ಉತ್ಸವ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸೋಮವಾರ ರಾತ್ರಿ ವಿದ್ಯುಕ್ತವಾಗಿ ಕದಿರನ್ನು ತೆರೆಯುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು.ಕರಾವಳಿ ಉತ್ಸವ ಸಪ್ತಾಹವನ್ನು ಈ ಬಾರಿ ಮೊದಲ ಬಾರಿಗೆ ಆಚರಿಸುತ್ತಿದ್ದೇವೆ. ಕಳೆದ 7 ವರ್ಷಗಳಿಂದ ಆಸಕ್ತಿ ಕೊರತೆಯಿಂದ ಆಚರಣೆಯಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರ ಕಲೆಯನ್ನು ಉಳಿಸಬೇಕು, ಬೆಳೆಸಬೇಕು ಜೊತೆಗೆ ರಾಷ್ಟ್ರಮಟ್ಟದ ಕಲಾವಿದರನ್ನು ಕರೆಯಿಸಿ ಸ್ಥಳೀಯರನ್ನು ಪ್ರೇರೇಪಿಸಬೇಕು ಎನ್ನುವ ಉದ್ದೇಶದಿಂದ ಕರಾವಳಿ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಈ ಮೂಲಕ ನಮ್ಮ ಪ್ರವಾಸೋದ್ಯಮವನ್ನು ಪರಿಚಯಿಸುವ ಕಾರ್ಯವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ ಶೇ 80ರಷ್ಟು ಅರಣ್ಯ ಪ್ರದೇಶವಿದ್ದು, ಜಿಲ್ಲೆಯಲ್ಲಿ ಹಲವಾರು ನದಿಗಳಿವೆ. ಪ್ರಪಂಚದಲ್ಲಿ ಜೂನ್‌ನಲ್ಲಿ ನಿಗದಿತವಾಗಿ ಮಳೆಯಾಗುವ ಏಕೈಕ ಜಿಲ್ಲೆ ಉತ್ತರಕನ್ನಡವಾಗಿದೆ. ಕಾರಣ ಇದು ದೈವಭೂಮಿಯಾಗಿದ್ದು, ಇಲ್ಲಿಯ ಜನ ನಿಸರ್ಗವನ್ನು ಹಾಳುಮಾಡದೇ ಮೀನುಗಾರಿಕೆ, ಪ್ರವಾಸೋದ್ಯಮವನ್ನು ಬೆಳೆಸಿಕೊಂಡು ಬರುತ್ತಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಎಂಸಿಎ ಅಧ್ಯಕ್ಷ, ಶಾಸಕ ಸತೀಶ್ ಸೈಲ್, ಗೋವಾಕ್ಕಿಂತ ಉತ್ತರ ಕನ್ನಡದ ನಿಸರ್ಗ ಆಕರ್ಷಕವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕಾಗಿದೆ. ಇಲ್ಲಿ ಉದ್ಯೋಗ ನೀಡಿಕೆಗೆ ಯೋಜನೆ ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರಾಸ್ತಾವಿಕವಾಗಿ ಮಾತನಾಡಿ, ಕರಾವಳಿ ಉತ್ಸವ ಕೇವಲ ಕಾರ್ಯಕ್ರಮವಲ್ಲ, ನಮ್ಮ ಜಿಲ್ಲೆಯ ಹೆಮ್ಮೆ. 1992 ರಲ್ಲಿ ಆರಂಭವಾಗಿ 1995 ರಿಂದ ಅದ್ದೂರಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದು, 18ನೇ ಕರಾವಳಿ ಉತ್ಸವವನ್ನು, ಕಳೆದ 7 ವರ್ಷಗಳ ಬಳಿಕ ಈ ಬಾರಿ ನಾವು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಉತ್ಸವದ ನಿಮಿತ್ತ ಹಲವಾರು ವಿಭಿನ್ನ ಬಗೆಯ ಕಾರ್ಯಕ್ರಮ, ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, 7 ದಿನಗಳ ಕಾಲ ಅದ್ದೂರಿಯಾಗಿ ಸಪ್ತಾಹವನ್ನಾಗಿ ಆಚರಿಸುತ್ತಿದ್ದೇವೆ. ಜಿಲ್ಲೆಯ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಪೊಲೀಸ್ ವರಿಷ್ಠ ದೀಪನ್ ಎಂ.ಎನ್. ಮತ್ತಿತರರು ಇದ್ದರು.ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್ ಹಾಗೂ ಶಾಂತಾರಾಮ ಸಿದ್ದಿ ಉತ್ಸವಕ್ಕೆ ಶುಭ ಕೋರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಡಿಯೋ ಸಂದೇಶವನ್ನು ಪ್ರದರ್ಶಿಸಲಾಯಿತು.ಆರಂಭದಲ್ಲಿ ಬೈತಖೋಲ್ ಮೀನುಗಾರರು ಹಸಿರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ವೇದಿಕೆಯಲ್ಲಿ ಯಕ್ಷಗಾನ, ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ಸ್ಥಳೀಯ ಕಲಾತಂಡಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು. ಬಳಿಕ ಖ್ಯಾತ ಹಿನ್ನೆಲೆ ಗಾಯಕರಿಂದ ನಡೆದ ರಸಮಂಜರಿ ಕಾರ್ಯಕ್ರಮ ಜನರನ್ನು ರಂಜಿಸಿತು.