ಕೊಡಗು ಜಿಲ್ಲೆಯ ವಿವಿಧೆಡೆ ಸುಗ್ಗಿ ಹಬ್ಬ ಸಂಕ್ರಾಂತಿ ಸಡಗರ

KannadaprabhaNewsNetwork |  
Published : Jan 15, 2025, 12:46 AM IST
ಕೊಡಗು ಜಿಲ್ಲೆಯ ವಿವಿಧೆಡೆ ಸುಗ್ಗಿ ಹಬ್ಬ ಸಂಕ್ರಾಂತಿ ಸಡಗರ - ಮನೆಯ ಮುಂದೆ ವಿಶೇಷ ರಂಗೋಲಿಯನ್ನು ಬಿಡಿಸಿ ವಿಶೇಷ ಪೂಜೆ ಪ್ರಾರ್ಥನೆ | Kannada Prabha

ಸಾರಾಂಶ

ದಕ್ಷಿಣ ಭಾರತದ ಜನಪ್ರಿಯ ಹಬ್ಬಗಳಲ್ಲೊಂದಾದ ಸುಗ್ಗಿಯ ಹಬ್ಬ ಸಂಕ್ರಾಂತಿ ಸಡಗರ ಕೊಡಗಿನ ವಿವಿಧ ಕಡೆಗಳಲ್ಲಿ ಕಂಡು ಬಂತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ದಕ್ಷಿಣ ಭಾರತದ ಜನಪ್ರಿಯ ಹಬ್ಬಗಳಲ್ಲೊಂದಾದ ಸುಗ್ಗಿಯ ಹಬ್ಬ ಸಂಕ್ರಾಂತಿ ಸಡಗರ ಕೊಡಗಿನ ವಿವಿಧ ಕಡೆಗಳಲ್ಲಿ ಕಂಡುಬಂತು.

ಮಹಿಳೆಯರು, ಮಕ್ಕಳು ಹೊಸ ಉಡುಪುಗಳನ್ನು ತೊಟ್ಟು ಸ್ನೇಹಿತರ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ ಬೀರಿದರೆ, ತಮಿಳು ಸಮುದಾಯ ಬಾಂಧವರು ಸೂರ್ಯನ ಪೂಜೆಯೊಂದಿಗೆ ಹೊಸ ದವಸ ಧಾನ್ಯಗಳನ್ನಿಟ್ಟು ವಿಶೇಷ ಪ್ರಾರ್ಥನೆಯೊಂದಿಗೆ ಹಾಲುಕ್ಕಿಸಿ, ಪೊಂಗಲ್ ಸಿಹಿಯೂಟ ತಯಾರಿಸಿ, ಸೇವಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಜಿಲ್ಲೆಯ ಸುಂಟಿಕೊಪ್ಪ, ಸಿದ್ದಾಪುರ, ಸೋಮವಾರಪೇಟೆ ಸೇರಿದಂತೆ ವಿವಿಧ ಕಡೆ ಕಳಸ ಹೊತ್ತು ಮೆರವಣಿಗಯೊಂದಿಗೆ ಪೊಂಗಲ್ ವಿಶೇಷ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಮಧ್ಯಾಹ್ನದ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು.

ಬೆಳಗ್ಗೆ ಜನ ಅಂಗಡಿಗಳಿಂದ ತೆರಳಿ ಎಳ್ಳು-ಬೆಲ್ಲ ಖರೀದಿಸಿ, ಮನೆಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ಮನೆಯ ಮುಂದೆ ವಿಶೇಷ ರಂಗೋಲಿಯನ್ನು ಬಿಡಿಸಿ ವಿಶೇಷ ಪೂಜೆ ಪ್ರಾರ್ಥನೆಯೊಂದಿಗೆ ನೈವೇದ್ಯ ಮಾಡಿ ಎಳ್ಳು-ಬೆಲ್ಲ ಸವಿದರು. ಜಿಲ್ಲೆಯ ಜನ ವಿವಿಧ ದೇವಾಲಯಗಳಿಗೆ ತೆರಳಿ ಧಾರ್ಮಿಕ ಕೈಂಕರ್ಯಗಳು ನೆರವೇರಿಸಿ ಪೂಜೆ ಸಲ್ಲಿಸಿದರು.

ಸಂಜೆ ಸ್ನೇಹಿತರು, ಸಂಬಂಧಿಕರ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ ಹಣ್ಣು, ಕಬ್ಬನ್ನು ಬೀರಿ ಸ್ನೇಹ ಸಂಬಂಧ ಗಟ್ಟಿಗೊಳಿಸಿದ ದೃಶ್ಯ ಕಂಡುಬಂತು.

ಇನ್ನೂ ಗ್ರಾಮೀಣ ಪ್ರದೇಶದಲ್ಲೂ ಜನ ಸಿಹಿ ಪೊಂಗಲ್ ತಯಾರಿಸಿ ಸಂಕ್ರಾಂತಿ ಆಚರಣೆ ಮಾಡಿ ಎಳ್ಳು-ಬೆಲ್ಲದ ರುಚಿ ಸವಿದರು.

ಸುಂಟಿಕೊಪ್ಪ ತಮಿಳು ಸಂಘದ ವತಿಯಿಂದ ಇಲ್ಲಿನ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ನಡೆದ ಪೊಂಗಲ್ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.

ಮಡಿಕೇರಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 35ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಜ.13ರ ಮುಂಜಾನೆಯಿಂದಲೇ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ ಇತ್ಯಾದಿ ಸೇವೆ ನಡೆಯಿತು. ಸೋಮವಾರ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಉಷಾಪೂಜೆ, ಮುತ್ತಪ್ಪ ಮತ್ತು ಸುಬ್ರಹ್ಮಣ್ಯ ದೇವರ ಪೂಜೆ, ಪಂಚಾಮೃತಾಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಸ್ಮಾಭಿಷೇಕ, ಎಳನೀರಭಿಷೇಕ, ಪುಷ್ಪಾರ್ಚನೆ ಜರುಗಿತು. ನಂತರ ಶ್ರೀ ಕುಟ್ಟಿಚಾತನ್ ವೆಳ್ಳಾಟಂ, ಮುತ್ತಪ್ಪ ವೆಳ್ಳಾಟಂ, ಶ್ರೀ ಪೋದಿ ದೇವರ ವೆಳ್ಳಾಟಂ ಹಾಗೂ ಶ್ರೀ ಅಯ್ಯಪ್ಪ ದೇವರ ಅಲಂಕಾರ ಪೂಜೆ, ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ನಗರದ ವಿವಿಧ ಬಡಾವಣೆಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಸಂಜೆ 6ರಿಂದ ಭಜನೆ, 7ರಿಂದ ಅಲಂಕಾರ ಪೂಜೆ ಮತ್ತು ಪಡಿಪೂಜೆ ನಡೆದ ಬಳಿಕ ರಾತ್ರಿ 8 ಗಂಟೆಗೆ ದೀಪಾರಾಧನೆ ನಂತರ ಪ್ರಸಾದ ವಿತರಣೆ ನಡೆಯಿತು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ