ಬ್ಯಾಡಗಿ: ಆಧುನಿಕತೆಯ ಭರಾಟೆಯಲ್ಲಿ ಜನರು ಭಕ್ತಿ ಹಾಗೂ ಸಂಪ್ರದಾಯಗಳಿಂದ ವಿಮುಖವಾಗುತ್ತಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಆಚರಣೆಗೊಳ್ಳಬೇಕಾದ ಹಬ್ಬ- ಹರಿದಿನಗಳು ನಿರ್ದಿಷ್ಟ ಸಮುದಾಯಗಳಿಗೆ ಸೀಮಿತವಾಗುತ್ತಿದ್ದು, ನಮಗರಿವಿಲ್ಲದಂತೆ ಸಮಾಜ ವಿಘಟನೆಯತ್ತ ಸಾಗುತ್ತಿವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಖೇದ ವ್ಯಕ್ತಪಡಿಸಿದರು.
ಲಿಂಗಾಯತರಿಗೆ ಸೀಮಿತವಾಗುತ್ತಿರುವ ಬಸವೇಶ್ವರ, ಕುರುಬ ಸಮುದಾಯಕ್ಕೆ ಕನಕದಾಸರು, ತಳವಾರ ಜನಾಂಗಕ್ಕೆ ಮಹರ್ಷಿ ವಾಲ್ಮೀಕಿ, ಯಾದವ ಸಮಾಜಕ್ಕೆ ಶ್ರೀಕೃಷ್ಣ, ರಡ್ಡಿ ಸಮುದಾಯಕ್ಕೆ ವೇಮನ ಹೀಗೇ ಬಹುತೇಕ ಶರಣರು ದಾರ್ಶಕನಿಕರನ್ನು ವಿವಿಧ ಸಮುದಾಯಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಇದು ಸರಿಯಲ್ಲ ಎಂದರು.
ಕಣ್ಮರೆಯಾಗುತ್ತಿದೆ ಸಹಭಾಗಿತ್ವ: ಧಾರ್ಮಿಕ ಆಚರಣೆಗಳು ಬಹು ಹಿಂದಿನಿಂದಲೂ ಪ್ರತಿಯೊಂದು ಜಾತಿ ಮತ ಧರ್ಮ ಹಾಗೂ ಸಮುದಾಯದಗಳಿಗೆ ಅನ್ವಯಿಸುತ್ತಿದ್ದವು. ಇತ್ತೀಚಿನ ದಶಕಗಳಲ್ಲಿ ಇಂತಹ ವಾತಾವರಣಗಳು ಕಣ್ಮರೆಯಾಗುತ್ತಿದ್ದು, ಒಂದೊಂದು ಸಮುದಾಯಕ್ಕೆ ಒಂದೊಂದು ಹಬ್ಬ ಹರಿದಿನಗಳು ದಾರ್ಶನಿಕರ ಪುಣ್ಯತಿಥಿಗಳು ಮಠಗಳು ಸೀಮಿತಗೊಳಿಸುತ್ತಿದ್ದು, ಇದರಿಂದ ಜನರಲ್ಲಿರುವ ಸಂಕುಚಿತ ಮನೋಭಾವ ಅನಾವರಣಗೊಳ್ಳಿತ್ತಿದೆ ಎಂದರು.ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್ . ಪಾಟೀಲ ಮಾತನಾಡಿ, ಗೋಕುಲಾಷ್ಟಮಿ ಅಥವಾ ಕೃಷ್ಣ ಜಯಂತಿ ಎಂದೂ ಕರೆಯಲ್ಪಡುವ ಕೃಷ್ಣ ಜನ್ಮಾಷ್ಟಮಿ, ಆಧ್ಯಾತ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಸಂದರ್ಭವಾಗಿದೆ. ವಿಷ್ಣುವಿನ ಎಂಟನೇ ಅವತಾರವಾದ ಶ್ರೀಕೃಷ್ಣನ ಜನನವನ್ನು ಸ್ಮರಿಸುವ ಪ್ರಮುಖ ಹಿಂದೂಗಳ ಹಬ್ಬವಾಗಿದೆ ಎಂದರು.