ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಶೇ. 80 ಮತದಾನ

KannadaprabhaNewsNetwork |  
Published : Aug 18, 2025, 12:00 AM IST
ರಟ್ಟೀಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್ ಸಂಗ್ರೇಶ್ ಭೇಟಿ ನೀಡಿ ಮತದಾನ ಕೇಂದ್ರಗಳ ಅವ್ಯವಸ್ಥೆ ಕಂಡು ಜಿಲ್ಲಾಡಳಿತ ವಿರುದ್ಧ ಗರಂ ಆದರು. | Kannada Prabha

ಸಾರಾಂಶ

ಬೆಳಗ್ಗೆಯಿಂದಲೇ ನಿರಂತರ ಮಳೆಯಿಂದಾಗಿ 7 ಗಂಟೆಗೆ ಮತದಾನದ ಪ್ರಕ್ರಿಯೆ ಪ್ರಾರಂಭವಾದರೂ ಮತದಾರರು ಮತಗಟ್ಟೆಗಳಿಗೆ ಬರಲು ಉತ್ಸಾಹ ತೋರಲಿಲ್ಲ.

ರಟ್ಟೀಹಳ್ಳಿ: ರಟ್ಟೀಹಳ್ಳಿ ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯಿತಿಯಾಗಿ ಬಡ್ತಿ ಹೊಂದಿದ್ದು, ಪಟ್ಟಣ ಪಂಚಾಯಿತಿಯ ಪ್ರಥಮ ಚುನಾವಣೆಯು ಶಾಂತಿಯುತವಾಗಿ ಭಾನುವಾರ ನಡೆಯಿತು.

ಒಟ್ಟು 15 ವಾರ್ಡ್‌ಗಳ 11815 ಮತದಾರರಲ್ಲಿ 9527 ಮತದಾರರು ಮತದಾನ ಮಾಡಿದರು. ವಾರ್ಡ್ ನಂ. 1ರಲ್ಲಿ ಶೇ. 76.2, ವಾರ್ಡ್ ನಂ. 2ರಲ್ಲಿ ಶೇ. 81, ವಾರ್ಡ್ ನಂ. 3ರಲ್ಲಿ ಶೇ. 81.31, ವಾರ್ಡ್ ನಂ. 4ರಲ್ಲಿ ಶೇ. 86.84, ವಾರ್ಡ್ ನಂ. 5ರಲ್ಲಿ ಶೇ. 82.9, ವಾರ್ಡ್ ನಂ. 6ರಲ್ಲಿ ಶೇ. 77.19, ವಾರ್ಡ್ ನಂ. 7 ಶೇ. 74.23, ವಾರ್ಡ್ ನಂ. 8ರಲ್ಲಿ ಶೇ. 89.39, ವಾರ್ಡ್ ನಂ. 9ರಲ್ಲಿ ಶೇ. 83.54, ವಾರ್ಡ್ ನಂ. 10ರಲ್ಲಿ ಶೇ. 84.62, ವಾರ್ಡ್ ನಂ. 11ರಲ್ಲಿ ಶೇ. 88.28, ವಾರ್ಡ್ ನಂ. 12ರಲ್ಲಿ ಶೇ. 80.98, ವಾರ್ಡ್ 13ರಲ್ಲಿ ಶೇ. 80.35, ವಾರ್ಡ್ ನಂ. 14ರಲ್ಲಿ ಶೇ. 71.44, ವಾರ್ಡ್ 15ರಲ್ಲಿ ಶೇ. 79.63ರಷ್ಟು ಸೇರಿ ಒಟ್ಟು ಶೇ. 80.63ರಷ್ಟು ಮತದಾನವಾಗಿದೆ.

ನಿರಂತರ ಮಳೆ: ಬೆಳಗ್ಗೆಯಿಂದಲೇ ನಿರಂತರ ಮಳೆಯಿಂದಾಗಿ 7 ಗಂಟೆಗೆ ಮತದಾನದ ಪ್ರಕ್ರಿಯೆ ಪ್ರಾರಂಭವಾದರೂ ಮತದಾರರು ಮತಗಟ್ಟೆಗಳಿಗೆ ಬರಲು ಉತ್ಸಾಹ ತೋರಲಿಲ್ಲ. ಇದರಿಂದ ಬೆಳಗ್ಗೆ 10 ಗಂಟೆಯವರೆಗೂ ಮತದಾನ ಮಂದಗತಿಯಲ್ಲಿ ಸಾಗಿತ್ತು. ನಂತರ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದರಿಂದ ಉತ್ಸಾಹದಿಂದಲೇ ಮತಗಟ್ಟೆಗೆ ಆಗಮಿಸಿದ ಮತದಾರರು ಮಧ್ಯಾಹ್ನದ ವೇಳೆಗೆ ಶೇ. 5ಂರಷ್ಟು ಮತದಾನವಾಯಿತು. ಮತ್ತೆ ಮಳೆ ಪ್ರಾರಂಭವಾಗಿದ್ದರಿಂದ ಸಂಜೆ 4 ಗಂಟೆಯವರೆಗೆ ಮಂದಗತಿಯಲ್ಲಿ ಸಾಗಿತು. ನಂತರ ಮತ್ತೆ ಚುರುಕು ಪಡೆದು 15 ವಾರ್ಡ್‌ಗಳ ಒಟ್ಟು ಶೇ. 80.63ರಷ್ಟು ಮತದಾನವಾಯಿತು.

ಸೂಕ್ತ ಬಂದೋಬಸ್ತ್: ಚುನಾವಣೆಗೆ ಪೊಲೀಸ್ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ನೇತೃತ್ವದಲ್ಲಿ 1 ಡಿವೈಎಸ್‍ಪಿ, 3 ಸಿಪಿಐ, 7 ಪಿಎಸ್‍ಐ, 100 ಪಿಸಿ, 3 ಡಿಆರ್, 3 ಕೆಎಸ್‍ಆರ್‌ಪಿ ಸೇರಿದಂತೆ 150ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು.

ಅಪರ ಜಿಲ್ಲಾಧಿಕಾರಿ ನಾಗರಾಜ ಬಾಲೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಚುನಾವಣಾ ವೀಕ್ಷಕ ಡಾ. ಪುನೀತ್, ತಹಸೀಲ್ದಾರ್ ಶ್ವೇತಾ ಅಮರಾವತಿ, ತಾಲೂಕು ಪಂಚಾಯಿತಿ ಇಒ ರವಿಕುಮಾರ, ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಡಿವೈಎಸ್‍ಪಿ ಲೋಕೇಶಕುಮಾರ, ಸಿಪಿಐ ಬಸವರಾಜ ಪಿ.ಎಸ್., ಪಿಎಸ್‍ಐ ರಮೇಶ ಪಿಎಸ್ ಮುಂತಾದ ಅಧಿಕಾರಿಗಳು ಇದ್ದರು.ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಭೇಟಿ

ಭಾನುವಾರ ಪಪಂ ಚುನಾವಣೆ ಹಿನ್ನೆಲೆ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಭೇಟಿ ನೀಡಿ ಮತದಾನ ಕೇಂದ್ರಗಳ ಅವ್ಯವಸ್ಥೆ ಕಂಡು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗರಂ ಆದರು. ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯ 4 ಬೂತ್‍ಗಳಲ್ಲಿ ಸರಿಯಾದ ಸ್ವಚ್ಛತೆ ಇಲ್ಲದೆ ನಿರ್ಲಕ್ಷ್ಯವಹಿಸಿದ್ದು ಹಾಗೂ ನಿರಂತರ ಮಳೆ ಇದ್ದರೂ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಿಲ್ಲ. ನಿರ್ಲಕ್ಷ್ಯ ವಹಿಸಿದ್ದನ್ನು ಕಂಡು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಅವರು, ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಿಂದಾಗಿ ಮೈದಾನ ಸಂಪೂರ್ಣ ಕೆಸರುಗದ್ದೆಯಾಗಿ ಮತದಾನಕ್ಕೆ ಬರುವ ಸಾರ್ವಜನರು, ವೃದ್ಧರು, ಅಂಗವಿಕಲರಿಗೆ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದಿರುವುದು ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂಥ ಅವ್ಯವಸ್ಥೆಯಲ್ಲಿ ಚುನಾವಣೆ ಮಾಡುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ ಬೇಜವಾಬ್ದಾರಿ ತೋರಿರುವುದು ಕಂಡುಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಎಚ್ಚೆತ್ತ ಅಧಿಕಾರಿಗಳು: ರಾಜ್ಯ ಚುನಾಚಣಾ ಆಯುಕ್ತ ಅಧಿಕಾರಿ ಭೇಟಿ ನೀಡಿ ಅವ್ಯವಸ್ಥೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ನಂತರ ಎಚ್ಚೆತ್ತ ಅಧಿಕಾರಿಗಳು, ಮತದಾರರಿಗೆ ವಾಹನ ವ್ಯವಸ್ಥೆ ಮಾಡಿ ಕೆಸರುಗದ್ದೆಯಾಗಿದ್ದ ಮೈದಾನಕ್ಕೆ ಕಡಿ, ಎಂ ಸ್ಯಾಂಡ್ ಹಾಕಿಸಿ ಅವ್ಯವಸ್ಥೆ ಸರಿಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ಸರ್ಪಗಾವಲು
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ