ಸಂಭ್ರಮದ ಬೆಟ್ಟದರಸಮ್ಮ ದೇವಿ ಜಾತ್ರೆ: ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತಸಾಗರ

KannadaprabhaNewsNetwork |  
Published : Mar 13, 2025, 12:45 AM IST
12ಕೆಎಂಎನ್ ಡಿ25,26,27,28 | Kannada Prabha

ಸಾರಾಂಶ

ಗುಂಡಾಪುರ ಗ್ರಾಮದ ಮಧ್ಯಭಾಗದ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ನಂತರ ದೇವರ ಗುಡ್ಡರು ತಮ್ಮ ಹೆಬ್ಬಾರಗಳಿಗೆ ಪೂಜೆ ಸಲ್ಲಿಸಿಕೊಂಡು ಹೂ ಹೊಂಬಾಳೆ ಪ್ರಸಾದ ಪಡೆದು ಪಾರಂಪಾರಿಕವಾಗಿ ನಡೆದು ಬಂದಂತಹ ಆಯ್ದ ಕೆಲವು ಮನೆಗಳಿಗೆ ಅಚ್ಚಂದಕ್ಕೆ ಹೋಗಿ ಪೂಜೆ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಹಲಗೂರು

ಗುಂಡಾಪುರದ ಬೆಟ್ಟದರಸಮ್ಮನ ಜಾತ್ರೆಯ ಮೊದಲನೇ ಪೂಜೆಯಲ್ಲಿ ಬುಧವಾರ ಸಾವಿರಾರು ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿದರು.

ಗ್ರಾಮದ ಮಧ್ಯಭಾಗದ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ನಂತರ ದೇವರ ಗುಡ್ಡರು ತಮ್ಮ ಹೆಬ್ಬಾರಗಳಿಗೆ ಪೂಜೆ ಸಲ್ಲಿಸಿಕೊಂಡು ಹೂ ಹೊಂಬಾಳೆ ಪ್ರಸಾದ ಪಡೆದು ಪಾರಂಪಾರಿಕವಾಗಿ ನಡೆದು ಬಂದಂತಹ ಆಯ್ದ ಕೆಲವು ಮನೆಗಳಿಗೆ ಅಚ್ಚಂದಕ್ಕೆ ಹೋಗಿ ಪೂಜೆ ಸ್ವೀಕರಿಸಿದರು.

ಮರಳಿ ಕರಗದ ಮನೆ ಬಳಿ ಬಂದು ಮಹಾಮಂಗಳಾರತಿ ನಡೆಸಿ ಪೂಜೆ ಪುನಸ್ಕಾರಗಳು ಮುಗಿದ ನಂತರ ಬೆಟ್ಟದ ತಪ್ಪಲಿನ ಶ್ರೀ ಬೆಟ್ಟದರಸಮ್ಮನವರ ದೇವಸ್ಥಾನಕ್ಕೆ ದೇವರ ಕರಗವನ್ನು ಹೊತ್ತು ಸಂಜೆ ದೇವರ ಉತ್ಸವ ಹೋರಟಾಗ ಜೊತೆಯಲ್ಲಿ ಬಾಯಿ ಬೀಗ, ಗಂಧದಕಡ್ಡಿ ಬೇವಿನಸೊಪ್ಪನ್ನು ಹಿಡಿದು ಸಾವಿರಾರು ಭಕ್ತರು ಜೊತೆಯಲ್ಲಿ ಸಾಗಿದರು.

ಈ ವೇಳೆ ಕಳಸ ಹೊತ್ತ ಮುತ್ತೈದೆಯರು, 3 ಬಸವನ ಜೊತೆ ದೇವರಿಗೆ ಚಾಮರ ಬೀಸುತ್ತ ಛತ್ರಿ ಚಾಮರವನ್ನು ಹಿಡಿದು ಮಡಿವಾಳ ಹಾಸಿದ ಮಡಿಯ ಮೇಲೆ ಕರಗವನ್ನು ಹೊತ್ತ ವೀರಭದ್ರಪ್ಪ ಮತ್ತು ಅರ್ಚಕರುಗಳಾದ ವೀರತಪ್ಪ ಮತ್ತು ಸಹಾಯಕ ಅರ್ಚಕ ರಮೇಶ್ ಸೇರಿದಂತೆ ಇತರರು ಮೆರವಣಿಗೆ ಮೂಲಕ ಮೂಲ ದೇವಸ್ಥಾನಕ್ಕೆ ಸಂಜೆ 6 ಗಂಟೆ ನಂತರ ತಲುಪಿದರು.

ಹರಕೆ ಹೊತ್ತುಕೊಂಡ ಭಕ್ತರು ದೇವಸ್ಥಾನಕ್ಕೆ ಬಂದ ಭಕ್ತರಿಗೆ ಎತ್ತಿನಗಾಡಿಯಲ್ಲಿ ತಂದು ಪಾನಕ, ಮಜ್ಜಿಗೆ ನೀಡಿ ಬಿಸಿಲಿನ ತಾಪವನ್ನು ನೀಗಿಸಿ ದೇವರ ಕೃಪೆಗೆ ಪಾತ್ರರಾದರು.

ಮತ್ತೆ ರಾತ್ರಿ 10 ಗಂಟೆ ಶ್ರೀ ಅಮ್ಮನವರ ಕರಗವನ್ನು ಉತ್ಸವ ಮತ್ತು ಉರ್ಜಿ ಕುಣಿತದೋಂದಿಗೆ ಹೆಬ್ಬಾರೆಗಳ ನಾದ ನುಡಿಸುತ್ತಾ ಮೆರವಣಿಗೆಯಲ್ಲಿ ಮತ್ತೆ ಕರಗದ ಬೀದಿಯಲ್ಲಿ ಬರುವಾಗ ಶ್ರೀ ಅಮ್ಮನವರಿಗೆ ಮತ್ತು ಶ್ರೀ ಹೆಬ್ಬಾರೆಗಳಿಗೆ ಗ್ರಾಮದ ಮುತ್ತೈದೆಯರು ಹಾಗೂ ಭಕ್ತ ಮಹಿಳೆಯರು ಆರತಿ ನೀಡಿ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಈ ಪಾರಂಪರಿಕ ಆಚರಣೆಗಳನ್ನು ಅಪಾರ ಭಕ್ತರು ಕಣ್ದುಂಬಿಕೊಂಡರು.

ಬೆಟ್ಟದ ತಪ್ಪಲನ ಬೆಟ್ಟದ ಅರಸಮ್ಮ ದೇವಿ ಕನಕಾಂಬರ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ತಾಲೂಕು ದಂಡಾಧಿಕಾರಿ ಎಸ್.ವಿ.ಲೋಕೇಶ್ ಮೊದಲನೇ ಪೂಜೆಗೆ ಆಗಮಿಸಿ ದೇವರ ಆಶೀರ್ವಾದ ಪಡೆದರು. ಈ ವೇಳೆ ಮಾತನಾಡಿದ ಅವರು, ಒಂಬತ್ತು ಗ್ರಾಮಗಳ ಜನರು ಭಕ್ತಿಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಆಚರಿಸುತ್ತಾರೆ. ಸಾರ್ವಜನಿಕರು ಹಾಗೂ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಬೇಕು. ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ತಿಳಿಸಿದರು.

ಮುಂಜಾಗ್ರತೆ ಕ್ರಮವಾಗಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.

ಗುಂಡಾಪುರ ಬೆಟ್ಟದರಸಮ್ಮನ ಜಾತ್ರೆಗೆ ಸಾವಿರಾರು ಭಕ್ತರು ಸೇರುತ್ತಾರೆ. ದೊಡ್ಡ ಜಾತ್ರೆದಿನ ಆರೋಗ್ಯ ಇಲಾಖೆ ವತಿಯಿಂದ ವೈದಾಧಿಕಾರಿಗಳ ತಂಡ , ದಳವಾಯಿ ಕೊಡಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಉದಯ್ ಮತ್ತು ರೂಪಕಲಾ, ಆಶಾ ಕಾರ್ಯಕರ್ತರು ಪಾಲ್ಗೊಂಡು ಜಾತ್ರೆಗೆ ಬರುವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.

-ವೀರಭದ್ರಪ್ಪ, ಡಿಎಚ್ ಓ, ಮಳವಳ್ಳಿ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ