ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹೆಣ್ಣುಮಕ್ಕಳು ತಮ್ಮ ಮನೆಯಲ್ಲಿ ಲಕ್ಷ್ಮಿದೇವಿ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದರು. ಮಹಿಳೆಯರು, ಮಕ್ಕಳು ಮುಂಜಾನೆಯೇ ಎದ್ದು ಮನೆಯ ಮುಂದೆ ರಂಗೋಲಿ ಹಾಕಿ, ತಳಿರು ತೋರಣ ಕಟ್ಟಿ, ಲಕ್ಷ್ಮೀ ದೇವಿಯ ಸ್ತ್ರೋತ್ರ, ವ್ರತ ಆಚರಣೆ ಮಾಡಿದರು. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಓಲೈಸುವ ಹಬ್ಬ ಎಂದೆ ಪ್ರಸಿದ್ಧಿ ಪಡೆದಿದ್ದು, ಎಲ್ಲೆಡೆ ವರಮಹಾಲಕ್ಷ್ಮಿಯ ಹಬ್ಬದ ಸಡಗರ ಕಂಡುಬಂದಿತು.
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕರ್ಯ ನಡೆದವು. ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆಯಿಂದಲೇ ಭಕ್ತರು ಸರತಿಯಲ್ಲಿ ನಿಂತು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಖರೀದಿ ಭರಾಟೆ: ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳು ಜನರಿಂದ ತುಂಬಿಕೊಂಡಿದ್ದವು. ಹಬ್ಬದ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿತ್ತು. ಹಬ್ಬಕ್ಕೆ ಬೇಕಾದ ಹೂವು-ಹಣ್ಣುಗಳನ್ನು ಜನರು ಖರೀದಿಸುತ್ತಿದ್ದರು. ಜನರಿಗೆ ಬೆಲೆ ಏರಿಕೆಯ ಶಾಕ್ ತಟ್ಟಿತು. ಹೂವು, ಹಣ್ಣುಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ಹೀಗಿದ್ದರೂ ಕೂಡ ಜನರು ಹಬ್ಬಕ್ಕೆ ಬೇಕಾದ ಹೂ, ಹಣ್ಣು, ಖರೀದಿಸುವಲ್ಲಿ ಮಗ್ನರಾಗಿದ್ದು ಕಂಡು ಬಂತು.
ನಗರದ ಗಾಂಧಿ ಬಜಾರ್, ನೆಹರು ರಸ್ತೆ, ಗೋಪಿ ವೃತ್ತ, ಲಕ್ಷ್ಮಿ ಚಿತ್ರಮಂದಿರ ವೃತ್ತ, ಪೊಲೀಸ್ ಚೌಕಿ ಸೇರಿದಂತೆ ಎಲ್ಲೆಡೆ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.