ಸಂಭ್ರಮದ ಕಾರ ಹುಣ್ಣಿಮೆ ಆಚರಣೆ

KannadaprabhaNewsNetwork |  
Published : Jun 30, 2026, 02:15 AM IST
ಗದಗ ನಗರದಲ್ಲಿ ಮಕ್ಕಳು ರಂಗು ರಂಗಿನ ಗಾಳಿಪಟ ಹಾರಿಸಿದರು.  | Kannada Prabha

ಸಾರಾಂಶ

ಸಂಜೆಯಾಗುತ್ತಿದ್ದಂತೆ ಹಳ್ಳಿಗಳ ಪ್ರಮುಖ ಬೀದಿಗಳಲ್ಲಿ ಕರಿ ಹರಿಯುವ(ಎತ್ತುಗಳನ್ನು ಓಡಿಸುವ) ರೋಮಾಂಚನಕಾರಿ ಸ್ಪರ್ಧೆ ಜರುಗಿತು.

ಗದಗ: ಸತತವಾಗಿ ಉಂಟಾಗುತ್ತಿರುವ ಮಳೆ ಕೊರತೆಯ ನಡುವೆಯೂ ಸೋಮವಾರ ರೈತರ ಸಾಂಸ್ಕೃತಿಕ ಹಬ್ಬ ಕಾರ ಹುಣ್ಣಿಮೆಯನ್ನು ಜಿಲ್ಲಾದ್ಯಂತ ಅತ್ಯಂತ ವೈಭವ ಮತ್ತು ಸಡಗರದಿಂದ ಆಚರಿಸಲಾಯಿತು. ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸೋಮವಾರ ಸಾಂಪ್ರದಾಯಿಕ ಆಚರಣೆಗಳು ಮನೆಮಾಡಿದ್ದು, ರೈತಾಪಿ ವರ್ಗವು ತಮ್ಮ ಜೀವನಾಡಿಯಾಗಿರುವ ಎತ್ತುಗಳನ್ನು ಪೂಜಿಸಿ, ಕೃತಜ್ಞತೆ ಸಲ್ಲಿಸಿದರು.

ವರ್ಷಪೂರ್ತಿ ಭೂಮಿತಾಯಿಯನ್ನು ನಂಬಿ ದುಡಿಯುವ ರೈತರಿಗೆ ಕಾರ ಹುಣ್ಣಿಮೆ ಅತ್ಯಂತ ವಿಶೇಷವಾದ ದಿನ. ಹಬ್ಬದ ನಿಮಿತ್ತ ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲೂ ರೈತರು ತಮ್ಮ ನೆಚ್ಚಿನ ಎತ್ತುಗಳನ್ನು ಮುಂಜಾನೆಯೇ ಕೆರೆ, ಬಾವಿಗಳಿಗೆ ಕರೆದೊಯ್ದು ಮೈತೊಳೆದು ಸ್ವಚ್ಛಗೊಳಿಸಿದ್ದರು. ನಂತರ ಎತ್ತುಗಳ ಕೊಂಬುಗಳಿಗೆ ಬಣ್ಣ ಹಚ್ಚಿ, ಗೆಜ್ಜೆ, ಟೂಪು, ಬಾಸಿಂಗ, ಜೂಲ ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ವಿಶೇಷವಾಗಿ ಶೃಂಗರಿಸಿ, ಮೆರವಣಿಗೆ ಮಾಡಿದ್ದರು.

ಸಂಜೆಯಾಗುತ್ತಿದ್ದಂತೆ ಹಳ್ಳಿಗಳ ಪ್ರಮುಖ ಬೀದಿಗಳಲ್ಲಿ ಕರಿ ಹರಿಯುವ(ಎತ್ತುಗಳನ್ನು ಓಡಿಸುವ) ರೋಮಾಂಚನಕಾರಿ ಸ್ಪರ್ಧೆ ಜರುಗಿತು. ಗ್ರಾಮದ ಪ್ರಮುಖ ವೃತ್ತದಲ್ಲಿ ಕಟ್ಟಲಾಗಿದ್ದ ಕರಿಯನ್ನು(ಶೃಂಗಾರಗೊಂಡ ಹಗ್ಗ) ಹರಿದು ಮುನ್ನುಗ್ಗಲು ಎತ್ತುಗಳನ್ನು ಓಡಿಸುತ್ತಿದ್ದ ದೃಶ್ಯ ನೆರೆದಿದ್ದ ಜನರಲ್ಲಿ ರೋಮಾಂಚನ ಉಂಟು ಮಾಡಿತು.

ಹಿರಿಯರು, ಯುವಕರು ಜೋಶ್‌ನಿಂದ ಎತ್ತುಗಳನ್ನು ಓಡಿಸುತ್ತಾ, ಸಾಂಪ್ರದಾಯಿಕ ಆಚರಣೆಗೆ ಸಾಕ್ಷಿಯಾದರು. ಈ ಬಾರಿ ಯಾವ ದಿಕ್ಕಿನ ಎತ್ತು ಮೊದಲು ಕರಿ ಹರಿಯಿತು ಎಂಬುದರ ಆಧಾರದ ಮೇಲೆ ಮುಂಬರುವ ಬೆಳೆಯ ಇಳುವರಿಯ ಭವಿಷ್ಯವನ್ನು ಹಿರಿಯರು ಲೆಕ್ಕಾಚಾರ ಹಾಕಿದರು.ಚಿತ್ತಾರ ಮೂಡಿಸಿದ ಗಾಳಿಪಟಗಳ ಹಬ್ಬ

ಒಂದೆಡೆ ಹಿರಿಯರು ಮತ್ತು ಯುವಕರು ಎತ್ತುಗಳ ಓಟ ಹಾಗೂ ಕೃಷಿ ಪೂಜೆಯಲ್ಲಿ ನಿರತರಾಗಿದ್ದರೆ, ಇನ್ನೊಂದೆಡೆ ಮಕ್ಕಳು ಗಾಳಿಪಟ ಹಾರಿಸುವ ಮೂಲಕ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದರು.

ಕಾರ ಹುಣ್ಣಿಮೆಯ ದಿನ ಆಕಾಶದಲ್ಲಿ ರಂಗುರಂಗಿನ ಗಾಳಿಪಟಗಳು ತೇಲಾಡಿದವು. ಹಳ್ಳಿಗಳಲ್ಲಿ ಮಕ್ಕಳು ತಾವೇ ಸ್ವತ ಕಾಗದ, ಬಿದಿರಿನ ಕಡ್ಡಿ ಹಾಗೂ ಗಂಜಿಯನ್ನು ಬಳಸಿ ಪಾರಂಪರಿಕ ಶೈಲಿಯ ಗಾಳಿಪಟಗಳನ್ನು ಸಿದ್ಧಪಡಿಸಿ ಹಾರಿಸಿದ್ದು ವಿಶೇಷವಾಗಿತ್ತು. ನಗರ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಮಾರುಕಟ್ಟೆಯಿಂದ ಖರೀದಿಸಿದ ವಿವಿಧ ವಿನ್ಯಾಸದ, ಕಾರ್ಟೂನ್ ಚಿತ್ರಗಳಿರುವ ಸಿದ್ಧಪಡಿಸಿದ ಗಾಳಿಪಟಗಳು ಬಾನಂಗಳದಲ್ಲಿ ರಾರಾಜಿಸಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಾಪುರ ಗ್ರಾಮ ಪಂಚಾಯಿತಿ ಮೇಲೆ ಲೋಕಾಯುಕ್ತ ದಾಳಿ
ಮತದಾರರ ಸಂವಿಧಾನಬದ್ಧ ಹಕ್ಕು ರಕ್ಷಣೆಗೆ ಶ್ರಮಿಸಿ: ಮಿಥುನ್ ಪಾಟೀಲ