ಹೊಸಪೇಟೆಯಲ್ಲಿ ಸಂಭ್ರಮದ ಹೋಳಿ ಆಚರಣೆ

KannadaprabhaNewsNetwork |  
Published : Mar 15, 2025, 01:03 AM IST
14ಎಚ್‌ಪಿಟಿ7- ಹೊಸಪೇಟೆಯಲ್ಲಿ ಶುಕ್ರವಾರ ಹೋಳಿ ಹಬ್ಬ ಆಚರಣೆ ಮಾಡಲಾಯಿತು. | Kannada Prabha

ಸಾರಾಂಶ

ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಶುಕ್ರವಾರ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬಿಸಿಲು ಲೆಕ್ಕಿಸದೇ ಯುವ ಸಮೂಹ ಬಣ್ಣದೋಕುಳಿಯಲ್ಲಿ ಮಿಂದೆದ್ದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಶುಕ್ರವಾರ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬಿಸಿಲು ಲೆಕ್ಕಿಸದೇ ಯುವ ಸಮೂಹ ಬಣ್ಣದೋಕುಳಿಯಲ್ಲಿ ಮಿಂದೆದ್ದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ ಎಚ್.ಆರ್. ಗವಿಯಪ್ಪ ಆಯೋಜಿಸಿದ್ದ ಗಾಯಕ ಆಲ್‌ಓಕೆ ನೇತೃತ್ವದ ಹೋಳಿ ಉತ್ಸವದಲ್ಲಿ ಯುವಜನರು ಹುಚ್ಚೆದ್ದು ಕುಣಿದರು.

ಯುವಕರು ಹಾಗೂ ಯುವತಿಯರೇ ತುಂಬಿದ್ದ ಕ್ರೀಡಾಂಗಣದಲ್ಲಿ ಹಾಡು, ಕುಣಿತಕ್ಕೆ ಮಿತಿ ಇರಲಿಲ್ಲ. ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಅವರೆಲ್ಲ ಮೂರು ಗಂಟೆಗಳ ಕಾಲ ರಂಗಿನಾಟದಲ್ಲಿ ನಿರತರಾಗಿದ್ದರು. ನಗರ ಮಾತ್ರವಲ್ಲದೇ ಕಮಲಾಪುರ, ಮಲಪನಗುಡಿ, ಪಾಪಿನಾಯಕನಹಳ್ಳಿ, ಸೇರಿದಂತೆ ಇತರೆ ಗ್ರಾಮಗಳಿಂದ ಯುವ ಸಮೂಹ ಸೇರಿ ಕುಣಿದಾಡಿದರು.

ಹಬ್ಬದ ನಿಮಿತ್ತ ಗುರುವಾರ ರಾತ್ರಿ ನಗರ ಸೇರಿದಂತೆ ವಿವಿಧೆಡೆ ಬಡಾವಣೆ, ರಸ್ತೆ ಬದಿಗಳಲ್ಲಿ, ದೇಗುಲಗಳ ಸಮೀಪದಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಮನ್ಮಥನನ್ನು ಪ್ರತಿಷ್ಠಾಪಿಸಿ, ಹಾಡುಗಳನ್ನು ಹೇಳಿ ಕೂಗುತ್ತ ದಹಿಸಿದರು. ಮರುದಿನ ಬೆಳಗ್ಗೆ ಯುವಕ-ಯುವತಿಯರು, ಚಿಣ್ಣರು ವಿವಿಧ ವರ್ಣದ ಬಣ್ಣಗಳನ್ನು ಕೈಯಲ್ಲಿಡಿದು ಬಣ್ಣದಾಟವಾಡಲು ಬೀದಿಗೆ ಇಳಿದಿದ್ದರು. ಮಧ್ಯಾಹ್ನ ಒಂದು ಗಂಟೆಯವರೆಗೂ ರಂಗಿನಾಟ ಮುಂದುವರೆದಿತ್ತು. ಡೊಳ್ಳು, ತಮಟೆ ವಾದ್ಯಗಳು ಯುವಕರನ್ನು ಮತ್ತಷ್ಟು ಸಂಭ್ರಮದಲ್ಲಿ ತೇಲಾಡುವಂತೆ ಮಾಡಿತು.

ಹಂಪಿಯಲ್ಲಿ ಇಂದು ಹೋಳಿ:

ವಿಶ್ವ ವಿಖ್ಯಾತ ಹಂಪಿಯಲ್ಲಿ ಮಾ.15ರಂದು ಬೆಳಗ್ಗೆ 8 ಗಂಟೆಯಿಂದ ಹೋಳಿ ಆಚರಣೆ ನಡೆಯಲಿದೆ. ಸಾಣಾಪುರ ಘಟನೆ ಬಳಿಕ ಹಂಪಿಯಲ್ಲಿ ಹೋಳಿ ಆಚರಣೆ ಕುರಿತು ಈಗಾಗಲೇ ಪೊಲೀಸ್‌ ಇಲಾಖೆ ಸಭೆ ನಡೆಸಿ, ಕೆಲ ಮಾರ್ಗಸೂಚಿಗಳನ್ನು ಪಾಲಿಸಲು ಸ್ಥಳೀಯರಿಗೆ ಸೂಚಿಸಿದ್ದಾರೆ. ದೇಶ, ವಿದೇಶಿ ಪ್ರವಾಸಿಗರು ಒಂದೆಡೆ ಸೇರಿ ಹಂಪಿಯಲ್ಲಿ ಹೋಳಿ ಆಚರಣೆ ಮಾಡಲಿರುವ ಹಿನ್ನೆಲೆ ನಿಯಮಗಳನ್ನು ಪರಿಪಾಲಿಸಲು ಸೂಚಿಸಿದ್ದಾರೆ. ಏತನ್ಮಧ್ಯೆ 30 ಜನ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದ್ದು, ವಿಡಿಯೋ ಚಿತ್ರೀಕರಣ ನಡೆಸಲು ಪೊಲೀಸ್‌ ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ