ಗದಗ ಜಿಲ್ಲೆಯಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ

KannadaprabhaNewsNetwork |  
Published : Jul 29, 2025, 01:03 AM IST
ಗದಗ ನಗರದಲ್ಲಿ ಮಹಿಳೆಯರು ನಾಗಪಂಚಮಿ ಹಿನ್ನೆಲೆಯಲ್ಲಿ ನಾಗದೇವರಿಗೆ ಹಾಲು ಎರೆದರು. | Kannada Prabha

ಸಾರಾಂಶ

​ಗದಗ ಜಿಲ್ಲೆಯಾದ್ಯಂತ ಶ್ರಾವಣ ಮಾಸದ ಮೊದಲ ಸೋಮವಾರ ಬಂದ ನಾಗ ಪಂಚಮಿ ಹಬ್ಬವನ್ನು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿದರು. ಆನಂತರ ಗ್ರಾಮೀಣ ಭಾಗದಲ್ಲಿ ಅಲ್ಲಿ ಜೋಕಾಲಿ ಜೀಕಿ ಸಂಭ್ರಮಿಸಿದರು.

​ಗದಗ: ಜಿಲ್ಲೆಯಾದ್ಯಂತ ಶ್ರಾವಣ ಮಾಸದ ಮೊದಲ ಸೋಮವಾರ ಬಂದ ನಾಗ ಪಂಚಮಿ ಹಬ್ಬವನ್ನು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ಆಚರಿಸಿದರು.

ಪ್ರತಿಬಾರಿಗಿಂತಲೂ ಈ ಬಾರಿ ಮುಂಗಾರು ಬೇಗನೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಬೆಳೆಗಳು ಉತ್ತಮವಾಗಿದ್ದು, ರೈತರು ಕೊಂಚ ಹೆಚ್ಚಿನ ಉತ್ಸಾಹದಲ್ಲಿಯೇ ಹಬ್ಬ ಆಚರಿಸಿದ್ದಾರೆ.

ನಾಗ ಪಂಚಮಿಯ ಹಿನ್ನೆಲೆಯಲ್ಲಿ ಭಕ್ತರು ನಸುಕಿನ ಜಾವದಿಂದಲೇ ಅವಳಿ ನಗರದ ಪ್ರತಿಯೊಂದು ಬಡಾವಣೆಗಳಲ್ಲಿರುವ ನಾಗಪ್ಪನ ಕಟ್ಟೆಗಳಿಗೆ, ಗ್ರಾಮೀಣ ಪ್ರದೇಶಗಳಲ್ಲಿಯೂ ನಾಗಪೂಜೆಗಳಿಗಾಗಿ ನಿರ್ಮಿಸಿರುವ ನಾಗರ ಕಲ್ಲುಗಳಿರುವ ದೇವಾಲಯಗಳಿಗೆ, ಆಲದ ಮರದ ಕೆಳಗೆ ಇರುವ ನಾಗರಕಲ್ಲುಗಳ ಬಳಿ ತೆರಳಿ ಪೂಜೆ ಸಲ್ಲಿಸಿದರು. ಆನಂತರ ಗ್ರಾಮೀಣ ಭಾಗದಲ್ಲಿ ಅಲ್ಲಿ ಜೋಕಾಲಿ ಜೀಕಿ ಸಂಭ್ರಮಿಸಿದರು.

​ಹಾಲು ನೈವೇದ್ಯ: ಭಕ್ತರು ನಾಗರ ಕಲ್ಲುಗಳಿಗೆ ಅರಿಶಿನ, ಕುಂಕುಮ, ಅಕ್ಕಿ, ನವಧಾನ್ಯಗಳು, ಹೂವು ಮತ್ತು ತೆಂಗಿನಕಾಯಿ ಮೂಲಕ ಮೊದಲು ಪೂಜೆ ಸಲ್ಲಿಸಿ, ಆನಂತರ ಕೊಬ್ಬರಿ ಬಟ್ಟಲಿನಲ್ಲಿ ಹಾಲು ಹಾಕಿ ಮನೆಯಲ್ಲಿರುವ ಎಲ್ಲರೂ ಸೇರಿ ನನ್ನ ಪಾಲು... ದೇವರ ಪಾಲು ಎಂದು ನಾಗ ದೇವರಿಗೆ ಹಾಲು ಹಾಕುವ ವಿಶೇಷ ಪೂಜೆ ಸಲ್ಲಿಸಿದರು.

ಮಹಿಳೆಯರ ಹಬ್ಬ: ನಾಗ ಪಂಚಮಿಯನ್ನು ಮಹಿಳೆಯರ ಹಬ್ಬವೆಂದೇ ಕರೆಯುತ್ತಾರೆ. ಈ ಸಂದರ್ಭದಲ್ಲಿ ಮಹಿಳೆಯರು ಹೊಸ ಬಟ್ಟೆಗಳನ್ನು ಧರಿಸಿ, ತಮ್ಮ ಕುಟುಂಬದ ಒಳಿತಿಗಾಗಿ ಮತ್ತು ಸಂತಾನ ಭಾಗ್ಯಕ್ಕಾಗಿ ನಾಗದೇವತೆಯನ್ನು ಪ್ರಾರ್ಥಿಸುತ್ತಾರೆ. ತಮ್ಮ ಸಹೋದರರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಹಾರೈಸುವುದು ಈ ಹಬ್ಬದ ಒಂದು ವಿಶೇಷ ಆಚರಣೆಯಾಗಿದೆ.

ಈ ಹಬ್ಬದಲ್ಲಿ ಮನೆಯಲ್ಲಿ ನಾನಾ ರೀತಿಯ ಸಿಹಿ ತಿಂಡಿಗಳನ್ನು ತಯಾರಿಸುವುದು ವಿಶೇಷ. ಅದರಲ್ಲಿಯೂ ಪಂಚಮಿಗಾಗಿಯೇ ಹಲವಾರು ರೀತಿಯ ಉಂಡೆಗಳನ್ನು ತಯಾರಿಸಿ ಅವುಗಳನ್ನು ಪಂಚಮಿಯಂದು ನಾಗದೇವರಿಗೆ ಎಡೆ ಸಮರ್ಪಿಸಿ ಆನಂತರ ತಿಂಗಳ ಪೂರ್ತಿ ಕುಟುಂಬಸ್ಥರೆಲ್ಲ ವಿವಿಧ ನಮೂನೆಯ ಉಂಡೆಗಳನ್ನು ತಿನ್ನುತ್ತಾರೆ.

​ಮಹತ್ವ ಮತ್ತು ನಂಬಿಕೆಗಳು: ​ನಾಗ ಪಂಚಮಿ ಕೇವಲ ಒಂದು ಹಬ್ಬವಾಗಿರದೆ, ಪ್ರಕೃತಿ ಮತ್ತು ಜೀವ ಸಂಕುಲದ ಬಗೆಗಿನ ಗೌರವವನ್ನು ಬಿಂಬಿಸುವ ಆಚರಣೆಯಾಗಿದೆ. ಹಾವು ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬ ಅರಿವನ್ನು ಈ ಹಬ್ಬ ಸಾರುತ್ತದೆ. ನಾಗದೇವತೆಯನ್ನು ಪೂಜಿಸುವುದರಿಂದ ಸರ್ಪದೋಷ ನಿವಾರಣೆಯಾಗುತ್ತದೆ, ಕೃಷಿಯಲ್ಲಿ ಇಳುವರಿ ಹೆಚ್ಚುತ್ತದೆ ಮತ್ತು ರೋಗರುಜಿನಗಳಿಂದ ಮುಕ್ತಿ ದೊರೆಯುತ್ತದೆ ಎಂಬ ಬಲವಾದ ನಂಬಿಕೆ ಜಿಲ್ಲೆಯ ಜನರಲ್ಲಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ