ಅನುಗ್ರಹ ಪಡೆದ ಸಹಸ್ರಾರು ಭಕ್ತರು । ಜಾತ್ಯಾತೀತವಾಗಿ ನಡೆದ ಉತ್ಸವ
ಸಾಂಸ್ಕೃತಿಕ ಕಲಾತಂಡಗಳ ಝಲಕ್, ಕಣ್ಮನ ಸೆಳೆದ ವೀರಗಾಸೆ ನೃತ್ಯ, ಪೂರ್ಣಕುಂಭಗಳೊಂದಿಗೆ ಸಾಗಿದ ಸುವಾಸಿನಿಯರು, ರಸ್ತೆಯ ಇಕ್ಕೆಲಗಳಲ್ಲಿ ಭಕ್ತಿ ಪರವಶರಾಗಿ ನಿಂತು ಪಂಚ ಪೀಠಾಧೀಶ್ವರರ ಅನುಗ್ರಹದಲ್ಲಿ ಮಿಂದೆದ್ದ ಭಕ್ತ ಸಮೂಹ.
ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿ ನ ಭೂತೋ ನ ಭವಿಷ್ಯತಿ ಎಂಬಂತೆ ಜರುಗಿದ ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದಿಂದ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಸಾಹಿತ್ಯಕ ವಾತಾವರಣ ಅನಾವರಣಗೊಂಡಿತು. ಉತ್ಸವ ಆರಂಭದಲ್ಲಿ ಪಂಚಪೀಠಗಳನ್ನು ಪ್ರತಿನಿಧಿಸುವ ಧ್ವಜಾ ರೋಹಣ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಅಲಂಕೃತ ಭಿನ್ನಬಗೆ ವರ್ಣರಂಜಿತ ಅಡ್ಡಪಲ್ಲಕ್ಕಿಗಳಲ್ಲಿ ಆಸೀನರಾದ ಶ್ರೀ ರಂಭಾಪುರಿ, ಶ್ರೀ ಕಾಶಿ, ಶ್ರೀ ಶೈಲಾ, ಮತ್ತು ಉಜ್ಜಯಿನಿ ಪೀಠಾಧೀಶ್ವರರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತ ಸಮೂಹಕ್ಕೆ ಅಕ್ಷತೆ ನೀಡಿ ಆರ್ಶಿವದಿಸಿದರು.ಅಡ್ಡಪಲ್ಲಕ್ಕಿ ಮಹೋತ್ಸವ ಎರಡು ತಾಸು ವಿಳಂಬವಾಗಿ ಆರಂಭವಾದರೂ ಭಕ್ತರು ಬೆಳಿಗ್ಗೆಯಿಂದಲೇ ಮೈದಾನದಲ್ಲಿ ನೆರೆದು ಉತ್ಸವ ಕಣ್ತುಂಬಿಕೊಂಡರು. ಪಂಚಪೀಠಗಳ ಆಧ್ಯಾತ್ಮಿಕ ಕುರುಹಾದ ಶಲ್ಯಗಳನ್ನು ಧರಿಸಿದ್ದ ಪೀಠಗಳ ಭಕ್ತರು ಮೈದಾನದಿಂದ ಸಭಾ ವೇದಿಕೆವರೆಗೆ ರಸ್ತೆ ಇಕ್ಕೆಲಗಳಲ್ಲಿ ನಿಂತು ಅಡ್ಡಪಲ್ಲಕ್ಕಿ ಉತ್ಸವಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ವಿವಿಧ ಜೈನ , ಮುಸ್ಲಿಂ ಸಮಾಜದವರು ಕುಡಿಯುವ ನೀರು, ತಂಪು ಪಾನೀಯ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಿದ್ದರಿಂದ ನೆತ್ತಿ ಸುಡುವ ಬಿಸಿಲಝಳಕ್ಕೆ ಹೈರಾಣಾಗಿದ್ದ ಭಕ್ತರು ಸಂತೃಷ್ಟರಾದರು. ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಶಾಸಕ ಕೆ.ಎಸ್. ಆನಂದ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ಮಾಜಿ ಶಾಸಕರಾದ ವೈ. ಎಸ್.ವಿ. ದತ್ತ, ಕೆ.ಬಿ.ಮಲ್ಲಿಕಾರ್ಜುನ್, ಕಡೂರು-ಬೀರೂರು ಪುರಸಭೆಗಳ ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್, ಭಾಗ್ಯಲಕ್ಷ್ಮಿ ಇತರರು ಉಪಸ್ಥಿತರಿದ್ದರು.