ಜಿಲ್ಲಾ 17ನೇ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ

KannadaprabhaNewsNetwork |  
Published : May 30, 2026, 02:30 AM IST
ಚಿತ್ರ : 29ಎಂಡಿಕೆ10 : ಸಮ್ಮೇಳನದಲ್ಲಿ ಪುಸ್ತಕ ಮಳಿಗೆ.  | Kannada Prabha

ಸಾರಾಂಶ

ಎಂ.ಬಿ. ವಿನ್ಸೆಂಟ್ ಸುಂಟಿಕೊಪ್ಪ: ಬಹುಭಾಷಿಕರ ನಾಡು ಸುಂಟಿಕೊಪ್ಪದಲ್ಲಿ ಎಲ್ಲೆಲ್ಲೂ ಕನ್ನಡ ಬಾವುಟ ರಾರಾಜಿಸಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸುಂಟಿಕೊಪ್ಪದಲ್ಲಿ ಶುಕ್ರವಾರ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೈಭವದ ಚಾಲನೆ ದೊರೆಯಿತು.

ಸುಂಟಿಕೊಪ್ಪ: ಬಹುಭಾಷಿಕರ ನಾಡು ಸುಂಟಿಕೊಪ್ಪದಲ್ಲಿ ಎಲ್ಲೆಲ್ಲೂ ಕನ್ನಡ ಬಾವುಟ ರಾರಾಜಿಸಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸುಂಟಿಕೊಪ್ಪದಲ್ಲಿ ಶುಕ್ರವಾರ ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೈಭವದ ಚಾಲನೆ ದೊರೆಯಿತು. ಸಮ್ಮೇಳನಾಧ್ಯಕ್ಷ ಸಾಹಿತಿ, ಕಥೆಗಾರ ಅಬ್ದುಲ್ ರಶೀದ್ ಅವರ ಭವ್ಯ ಮೆರವಣಿಗೆ ಸರ್ಕಾರಿ ಶಾಲಾ ಮೈದಾನದಿಂದ ಆರಂಭಗೊಂಡು, ಅಯ್ಯಪ್ಪ ದೇವಾಲಯ ಸಮೀಪ ತೆರಳಿ ಗದ್ದೆಹಳ್ಳದಲ್ಲಿ ಮುಕ್ತಾಯಗೊಂಡಿತು. ಸುಂಟಿಕೊಪ್ಪ ಗದ್ದೆಹಳ್ಳ ಗುಂಡುಗುಟ್ಟಿ ಮಂಜನಾಥಯ್ಯ ಸಭಾಮಂಟಪದ ಮುಂಭಾಗದ ಸಭಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಯಿತು.

ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮಂಗಳ ವಾದ್ಯ, ಚಂಡೆ ವಾದ್ಯ, ಕಳಸ ಹೊತ್ತ ಮಹಿಳೆಯರು, ಸ್ತಬ್ಧಚಿತ್ರಗಳು, ಗೊಂಬೆಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ಕೊಡಗಿನ ವಾಲಗ, ಬ್ಯಾಂಡ್ ಸೆಟ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಅಂಗನವಾಡಿ ಸಂಘಟನೆ, ಸ್ತ್ರೀ ಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ಸಂಘ ಸಂಸ್ಥೆಗಳ ಮತ್ತು ಸಮಾಜಗಳ ಪ್ರತಿನಿಧಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ನೀಡಿದರು. ಕೆಇಬಿ ಇಲಾಖೆಯಿಂದ ವಿಶೇಷ ಸ್ತಬ್ಧ ಚಿತ್ರ ವಿಶೇಷ ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಸಾಗಿದವರಿಗೆ ಅನಿಲ್ ಮಜ್ಜಿಗೆ ವಿತರಣೆ ಮಾಡಿದರು. ವಿಲಿಯಂ ಸಹೋದರರು ನೀರು ಹಾಗೂ ಬಿಸ್ಕೆಟ್ ವಿತರಿಸಿದರು.

ಸಭಾ ಕಾರ್ಯಕ್ರಮ: ಗದ್ದೆಹಳ್ಳದಲ್ಲಿರುವ ಎಸ್.ಎಸ್. ಇಂಟರ್ ನ್ಯಾಷನಲ್ ನಲ್ಲಿ ಕವಿಶಿಷ್ಯ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ನಡೆದ ಸಮ್ಮೇಳನ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವುದು ಕಷ್ಟದ ಕೆಲಸ. ಆದರೂ ಎಲ್ಲರ ಸಹಕಾರಿಂದ ಸಮ್ಮೇಳನ ಯಶಸ್ವಿಯಾಗಿ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಗೆ ಸರ್ಕಾರದ ಅನುದಾನದ ಕೊರತೆಯಿದೆ. ಕನ್ನಡ ನಾಡನ್ನು ಕಟ್ಟುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಹಲವಾರು ಕನ್ನಡ ಕಾರ್ಯಕ್ರಮ ಮಾಡಲಾಗಿದೆ. ನಮ್ಮ ಮಾತೃ ಭಾಷೆಯನ್ನು ಬೆಳೆಸುವ ಮೂಲಕ ಕನ್ನಡಕ್ಕೆ ಆದ್ಯತೆ ನೀಡಿ ಬೆಳೆಸಬೇಕೆಂದು ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಲು, ನಾಡು-ನುಡಿ ಜನರಿಗೆ ತಿಳಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಗೊಂಡಿದ್ದು, ಕನ್ನಡದ ಏಳಿಗೆ ಕೆಲಸ ಮಾಡುವ ಮೂಲಕ ತನ್ನ ಉದ್ದೇಶ ಈಡೇರಿದೆ. ಸುಂಟಿಕೊಪ್ಪದಲ್ಲಿ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಎಲ್ಲ ಸಮಿತಿಗಳು ಉತ್ತಮವಾಗಿ ಕೆಲಸ ಮಾಡಿದೆ ಎಂದು ತಿಳಿಸಿದರು.

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ಸುಂಟಿಕೊಪ್ಪದಲ್ಲಿ ಹಲವು ಭಾಷಿಕರು ನೆಲೆಸಿದ್ದಾರೆ. ಕನ್ನಡಕ್ಕಾಗಿ ಇಲ್ಲಿ ಹಲವರು ಕೆಲಸ ಮಾಡುತ್ತಿದ್ದು, ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ರೇವತಿ ಪೂವಯ್ಯ ಅವರು ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಅವರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಜಾಗತಿಕ ಜಗತ್ತಿನಲ್ಲಿ ಭಾಷೆಗೆ ಭಯವಿದ್ದು, ಆತಂಕ ನಿರಂತರ ಕಾಡುತ್ತಿದೆ. ಆದರೆ ಸಮ್ಮೇಳನಕ್ಕೆ ಸೇರಿರುವ ಜನರು ಆತಂಕ ದೂರ ಮಾಡಿದ್ದಾರೆ ಎಂದು ಹೇಳಿದರು.ಹಿರಿಯ ಸಾಹಿತಿ ಎಂ.ಜಿ. ನಾಗರಾಜ್, ಕಸಾಪ ಮಾಜಿ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಸಮ್ಮೇಳನ ಹಣಕಾಸು ಸಮಿತಿ ಅಧ್ಯಕ್ಷ ಲೋಕೇಶ್ ಕುಮಾರ್, ಬೆಳೆಗಾರ ವಿಶಾಲ್ ಶಿವಪ್ಪ, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸಬಾಸ್ಟಿನ್, ಜಿಪಂ ಮಾಜಿ ಸದಸ್ಯ ಲತೀಫ್, ಕಸಾಪ ಪ್ರಮುಖರಾದ ಮುನೀರ್ ಅಹಮದ್, ರೇವತಿ, ವಾಸು ರೈ, ಜಲಜಾ ಶೇಖರ್, ಮಂಜುನಾಥ್, ತಾಲೂಕು ಪಂಚಾಯಿತಿ ಇಒ ಪರಮೇಶ್, ಕಸಾಪ ಮಡಿಕೇರಿ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ನಾಗೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪುಸ್ತಕಗಳ ಬಿಡುಗಡೆ: ಸಮ್ಮೇಳನದಲ್ಲಿ ಸುಲೇಮಾನ್ ಅವರ ರಾಗವಿಲ್ಲದ ಕವಿತೆ, ಎಚ್. ಮಂಜುನಾಥ್, ಅವರ ಮನುಷ್ಯತ್ವದ ಸಾರ, ಜಯಪ್ರಕಾಶ್ ಪುಸ್ತೂರು ಅವರ ವ್ಯಕ್ತಿತ್ವ ವಿಚಾರಧಾರೆ, ಡಾ. ಬೆಸೂರೂ ಮೋಹನ್ ಪಾಳೆಗಾರ್ ಅವರ ಸ್ವಾತಂತ್ರ್ಯ ಕ್ರಾಂತಿಯ ಕಿಡಿ, ಗಣೇಶ್ ಶರ್ಮ ಅವರ ಮಕ್ಕಳ ಕಥೆ, ಹೇಮಂತ್ ಪಾರೇರ ಅವರ ಶಕುನದ ಹಕ್ಕಿ, ಲಾವಣ್ಯ ಮೋಹನ್ ಅವರ ಛಾಯ ಕಾದಂಬರಿ, ಜಯಲಕ್ಷ್ಮಿ ಅವರ ಮನದ ಮಡಿಲೊಳಗೆ ಪುಸ್ತಕಗಳು ಬಿಡುಗಡೆಗೊಂಡಿತು.

ವಿವಿಧ ಮಳಿಗೆ: ಸಮ್ಮೇಳನ ಅಂಗವಾಗಿ ಎಸ್ ಎಸ್ ಇಂಟರ್ ನ್ಯಾಷನಲ್ ಸಭಾಂಗಣ ಮುಂಭಾಗದಲ್ಲಿ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ಪುಸ್ತಕ ಮಳಿಗೆ, ಚಿತ್ರಕಲಾ ಪ್ರದರ್ಶನ ಮಳಿಗೆ, ಗುಡ್ಡೆಮನೆ ವಿಶ್ವಕುಮಾರ್ ಅವರ ಛಾಯಾಚಿತ್ರ ಪ್ರದರ್ಶನ, ಆರೋಗ್ಯ ಇಲಾಖೆಯಿಂದ ಆರೋಗ್ಯ ಜಾಗೃತಿ ಮೂಡಿಸುವ ಕೇಂದ್ರ ಸೇರಿದಂತೆ ವಿವಿಧ ತಿಂಡಿ ತಿನಿಸು ಹಾಗೂ ಇತರೆ ಮಳಿಗೆಗಳನ್ನು ತೆರೆಯಲಾಗಿತ್ತು. ಬಹುಭಾಷಿಕರಾದರೂ ಕನ್ನಡಕ್ಕೇ ಅದ್ಯತೆ: ಅಬ್ದುಲ್ ರಶೀದ್ ನಮ್ಮಲ್ಲಿ ಹಲವು ಭಾಷೆಯವರು ಇದ್ದೇವೆ. ಆದರೆ ಕನ್ನಡಕ್ಕೆ ಎಂದಿಗೂ ಅಗ್ರ ಸ್ಥಾನ ನೀಡಿದ್ದೇವೆ. ಕನ್ನಡದ ಪ್ರಶ್ನೆ ಬಂದಾಗ ಎಂದಿಗೂ ಹೆದರುವುದಿಲ್ಲ. ಯಾವ ಭಾಷೆಯವರಾದರೂ ನಮ್ಮ ಎದೆಯೊಳಗೆ ಸದಾ ಕನ್ನಡ ಇರುತ್ತದೆ. ನಮ್ಮಲ್ಲಿ ಕನ್ನಡಾಭಿಮಾನ ಎಂದಿಗೂ ಬತ್ತುವುದಿಲ್ಲ ಎಂದು ಕೊಡಗು ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದ್ದಾರೆ.ಸಮ್ಮೇಳದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಂಟಿಕೊಪ್ಪದಲ್ಲಿ ಎಲ್ಲ ಭಾಷೆ ಮಾತನಾಡುವವರಿದ್ದಾರೆ. ಆದರೆ ಕನ್ನಡಕ್ಕೆ ಸದಾ ಎಂದಿಗೂ ಮುಂದೆ ನಿಲ್ಲುವುದು ಇಲ್ಲಿಯವರ ಗುಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕೊಡಗನ್ನು ಕರ್ನಾಟಕದ ಕಾಶ್ಮೀರ ಎಂದು ಹೇಳುತ್ತಾರೆ. ಆದರೆ ಈ ಹೋಲಿಕೆ ಸರಿಯಲ್ಲ. ಕೊಡಗು ಇದೀಗ ವಿಲಾಸೀ ಪ್ರವಾಸಿಗರ ಅಸಹ್ಯ ದಾಳಿಯನ್ನು ಎದುರಿಸಲಾಗದೆ ತತ್ತರಿಸುತ್ತಿದೆ. ಪ್ರವಾಸಿಗರಿಗೆ ಈ ನೆಲದ ಮಣ್ಣು, ಈ ನೆಲದ ಗಾಳಿ, ಇಲ್ಲಿರುವ ಗುಡಿಗಳು ಭಗವತಿ, ಈಶ್ವರ, ಅಯ್ಯಪ್ಪ ಸೇರಿದಂತೆ ದೇವರ ಕಾಡುಗಳ ಅರಿವಿಲ್ಲ. ಕೊಡಗಿನ ಹಸಿರು ಮತ್ತು ಘನತೆಗಳಿಗೆ ಕ್ಯಾರೇ ಅನ್ನದೆ ದಾಂಧಲೆ ಎಬ್ಬಿಸುತ್ತಿದೆ. ಪ್ರವಾಸೋದ್ಯಮ ಮತ್ತು ಆದಾಯದ ನೆಪದಲ್ಲಿ ಕೊಡಗಿನ ನೆಮ್ಮದಿ ಹಾಳಾಗುತ್ತಿದೆ. ರೆಸಾರ್ಟ್ ಗಳು, ರಿಯಲ್ ಎಸ್ಟೇಟ್ ಪ್ರವಾಹ ಮತ್ತು ಭೂಕುಸತಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ಕಾರ ಈ ವಿಲಾಸೀ ಪ್ರವಾಸಿಗಳ ನಿಯಂತ್ರಣಕ್ಕೆ ನೀತಿ ರೂಪಿಸಬೇಕೆಂದು ಅವರು ಒತ್ತಾಯಿಸಿದರು.ಪುಸ್ತಕಗಳನ್ನು ಭದ್ರವಾಗಿ ಕಪಾಟಿನಲ್ಲಿ ಬಚ್ಚಿಡಲು ನೋಡುವುದಕ್ಕಿಂತ ಪುಸ್ತಕ ಕಳದವಾದರೂ ಸರಿಯೇ ಮಕ್ಕಳ ತಲೆಯೊಳಗೆ ಒಳ್ಳೆಯ ಓದಿನ ಭೂತ ಹೊಕ್ಕುಬಿಡಲಿ ಎಂಬ ಆಲೋಚನೆ ಇರಬೇಕು. ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಕೊಡುವುದರ ಜೊತೆಗೆ ಒಳ್ಳೆಯ ಸಾಹಿತ್ಯ ಕೃಷಿಯನ್ನು ನೀಡುವಂತಾಗಬೇಕು ಎಂದು ಅಬ್ದುಲ್ ರಶೀದ್ ಒತ್ತಾಯಿಸಿದರು.

ಕೊಡಗು ಜಿಲ್ಲೆಯಲ್ಲಿ ಸಾಂಸ್ಕೃತಿಕ ನೀತಿ ಮತ್ತು ಶೈಕ್ಷಣಿಕ ಭಾಷಾ ಸೂತ್ರ ಬೇಕಿದೆ. ಕೊಡವ, ಅರೆಭಾಷೆ, ಜೇನುಕುರುಬ, ಬೆಟ್ಟಕುರುಬ, ಕಾಡುಕುರುಬ, ಯರವ, ಮೇದ, ಅಡಿಯ, ಪಣಿಯ, ದೇವಸೋಲಿಗ, ಜೇನು ಮಲೆಕುಡಿಯ, ಪೂಮಲೆ ಕುಡಿಯ ಇತ್ಯಾದಿ ಭಾಷೆಗಳನ್ನು ಕೊಡಗಿನಲ್ಲಿ ಅಲ್ಲದೆ ಬೇರೆ ಎಲ್ಲೂ ಬಳಸಲು ಮತ್ತು ಉಳಿಸಲು ಸಾಧ್ಯವಿಲ್ಲ. ಕಲಿಕೆಯ ಭಾಷೆಯಾಗಿ ಈ ಭಾಷೆಯನ್ನು ಬಳಸುವುದು ಅಸಾಧ್ಯವಾದ ವಿಷಯ. ಆದರೆ ಈ ಭಾಷೆಗಳನ್ನು ಬಳಸುವ ಸಮುದಾಯದ ಮಕ್ಕಳಲ್ಲಿ ಈ ಭಾಷೆಗಳ ಕುರಿತ ಕುತೂಹಲ ಆಸಕ್ತಿ ಮತ್ತು ಹೆಮ್ಮೆಯನ್ನು ಮೂಡಿಸುವ ಕೆಲಸ ಆಗಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುರಸಭೆ ನಿರ್ಲಕ್ಷ್ಯ ಧೋರಣೆ ಆರೋಪ: ಮಾಜಿ ಸದಸ್ಯ ಪ್ರತಿಭಟನೆ
ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನಿರೀಕ್ಷೆ!