ಉಳವಿ ಜಾತ್ರೆಗೆ ಸಂಭ್ರಮದ ಚಾಲನೆ

KannadaprabhaNewsNetwork |  
Published : Jan 26, 2026, 03:45 AM IST
ಜೋಯಿಡಾ ತಾಲೂಕಿನ ಪುಣ್ಯ ಕ್ಷೇತ್ರ ಶ್ರೀ ಚೆನ್ನಬಸವಣ್ಣನವರ ಜಾತ್ರೆಗೆ ರಥಸಪ್ತಮಿ ದಿನವಾದ ಭಾನುವಾರ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ತಾಲೂಕಿನ ಪುಣ್ಯ ಕ್ಷೇತ್ರ ಶ್ರೀ ಚೆನ್ನಬಸವಣ್ಣನವರ ಜಾತ್ರೆಗೆ ರಥಸಪ್ತಮಿ ದಿನವಾದ ಭಾನುವಾರ ಚಾಲನೆ ನೀಡಲಾಯಿತು. ಫೆ. 5ರ ವರೆಗೆ ಜಾತ್ರೆ ನಡೆಯಲಿದೆ. ಫೆ. 3ರಂದು ಮಧ್ಯಾಹ್ನ 4 ಗಂಟೆಗೆ ಮಹಾರಥೋತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಜೋಯಿಡಾ

ತಾಲೂಕಿನ ಪುಣ್ಯ ಕ್ಷೇತ್ರ ಶ್ರೀ ಚೆನ್ನಬಸವಣ್ಣನವರ ಜಾತ್ರೆಗೆ ರಥಸಪ್ತಮಿ ದಿನವಾದ ಭಾನುವಾರ ಚಾಲನೆ ನೀಡಲಾಯಿತು. ಫೆ. 5ರ ವರೆಗೆ ಜಾತ್ರೆ ನಡೆಯಲಿದೆ. ಫೆ. 3ರಂದು ಮಧ್ಯಾಹ್ನ 4 ಗಂಟೆಗೆ ಮಹಾರಥೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅಧ್ಯಕ್ಷ ಸಂಜಯ್ ಕಿತ್ತೂರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಲಕ್ಷಾಂತರ ಜನರಿಗೆ ಕುಡಿಯುವ ನೀರು, ಸಾಕಷ್ಟು ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ಎತ್ತುಗಳ ಆರೋಗ್ಯಕ್ಕೆ 4 ಆ್ಯಂಬುಲೆನ್ಸ್, ಸಾಕಷ್ಟು ವೈದ್ಯರನ್ನು ನೇಮಕ ಮಾಡಲಾಗಿದೆ. ಸುಮಾರು ಎರಡು ಸಾವಿರ ಚಕ್ಕಡಿ ಗಾಡಿಗಳು ಬರುವ ನಿರೀಕ್ಷೆ ಇದ್ದು ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ಸುರಕ್ಷತೆ ಬಗ್ಗೆ ಇದೇ ಮೊಟ್ಟ ಮೊದಲ ಬಾರಿಗೆ ರಥಬೀದಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಆದೇಶದಂತೆ ಯಾವುದೇ ಅಂಗಡಿ ಇರುವುದಿಲ್ಲ. ರಥ ಬೀದಿ ಭಕ್ತರ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು.

ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಚಕ್ಕಡಿಗಳಿಗೆ ಸರಿಯಾದ ಎರಡು ಎತ್ತುಗಳಿರಬೇಕು. ಅವುಗಳಿಗೆ ಮಾದಕ ವಸ್ತುಗಳನ್ನು ಕುಡಿಸುವುದಾಗಲಿ, ಹೊಡೆಯುವುದಾಗಲಿ ಮಾಡಬಾರದು. ಕುದುರೆ ಗಾಡಿಗಳನ್ನು ತರಬಾರದು ಎಂದು ತಿಳಿಸಿದರು.

ಕುಡಿಯುವ ನೀರಿಗೆ ಹಿಂದಿಗಿಂತ ಹೆಚ್ಚಿನ ವ್ಯವಸ್ಥೆ ಮಾಡಿದ್ದೇವೆ. ಡ್ರೋನ್ ಕ್ಯಾಮೆರಾ ಇಟ್ಟಿದ್ದೇವೆ. 4 ಕಡೆ ಟವರ್ ನಿರ್ಮಿಸಿದ್ದೇವೆ. ಸ್ವಯಂ ಸೇವಕರನ್ನು ಹಿಂದಿನ ಜಾತ್ರೆಗಿಂತ 2 ಪಟ್ಟು ಹೆಚ್ಚಿಗೆ ಮಾಡಿದ್ದೇವೆ. ಮಹಿಳಾ ಸಿಬ್ಬಂದಿ ನಿಯೋಜಿಸಿದ್ದೇವೆ. ಜತೆಗೆ ವಾಕಿಟಾಕಿ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೆ 35 ಕೊಠಡಿಗಳ ಯಾತ್ರಿ ನಿವಾಸ ಇಂದು ಉದ್ಘಾಟನೆಯಾಗಿದೆ ಎಂದರು.

ಉಳವಿ ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ ಮಾತನಾಡಿ, ನಾವು ಗ್ರಾಪಂಯಿಂದ ಎಲ್ಲ ವ್ಯವಸ್ಥೆ ಮಾಡಿ ಕೊಂಡಿದ್ದೇವೆ. ಕುಡಿಯುವ ನೀರು, ವಿದ್ಯುತ್, ಆರೋಗ್ಯ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿ ಗಳೊಂದಿಗೆ ಚರ್ಚಿಸಿ ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದರು.

ಜೋಯಿಡಾ ಪಿಎಸ್ಐ ಮಹೇಶ್ ಮಾಳಿ ಮಾತನಾಡಿ, ಇದೇ ಮೊದಲ ಬಾರಿಗೆ ರಥೋತ್ಸವ ನೋಡಲು 10 ಎಲ್‌ಇಡಿ ಪರದೆ ಹಾಕಲಾಗಿದೆ. ಇದರಿಂದ ವಯಸ್ಸಾದವರು, ಮಕ್ಕಳು ಕುಳಿತಲ್ಲೇ ರಥೋತ್ಸವ ನೋಡಬಹುದು. ಸೂಕ್ತವಾಗಿ ಬಂದೋಬಸ್ತ್ ಮಾಡುತ್ತೇವೆ ಎಂದರು.

ಟ್ರಸ್ಟ್ ಕಮಿಟಿ ಸದಸ್ಯ ವೀರೇಶ್ ಕಂಬಳಿ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಶಂಕರ ದಾವಣಗೆರೆ, ಸಿದ್ದನಗೌಡ, ಅಡಿವೆಪ್ಪ ಹಾಲಪ್ಪ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್ಥಿಕವಾಗಿ ಹಿಂದುಳಿದವರಿಗೆ ಸಾಮೂಹಿಕ ವಿವಾಹ ವರದಾನ: ಹೆಬ್ಬಾಳ ಬೃಹನ್ಮಠದ ಡಾ. ನಾಗಭೂಷಣ ಶಿವಾಚಾರ್ಯರು
₹೬.೪೭ ಕೋಟಿ ಹೊಳಲಮ್ಮ ದೇಗುಲ ಅಭಿವೃದ್ಧಿ: ಸಚಿವ ಎಚ್.ಕೆ. ಪಾಟೀಲ